ಶಿವಮೊಗ್ಗದಲ್ಲಿ ಈ-ಚಲಾನ್ ದಂಡ ಪಾವತಿಗೆ ಉತ್ತಮ ಸ್ಪಂದನೆ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಶ್ಲಾಘನೆ
ಶಿವಮೊಗ್ಗ, ಜು.2: ಶಿವಮೊಗ್ಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀ ಸಂತೋಷ್ ಎಂ.ಎಸ್. ಅವರು ಮಂಗಳವಾರ ಸಂಜೆ ನಗರದ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಗೆ ಹಠಾತ್ ಭೇಟಿ ನೀಡಿ, ಈ-ಚಲಾನ್ ಪ್ರಕರಣಗಳಲ್ಲಿ ಪಾವತಿಸಬೇಕಾದ ದಂಡದ ಮೊತ್ತದ ಪ್ರಗತಿಯನ್ನು ಪರಿಶೀಲಿಸಿದರು.
ಪರಿಶೀಲನೆ ವೇಳೆ ಲಭ್ಯವಾದ ಮಾಹಿತಿಯ ಪ್ರಕಾರ, ಶಿವಮೊಗ್ಗದಲ್ಲಿ ಜೂನ್ 21, 2026ರಿಂದ ಜುಲೈ 1, 2026ರವರೆಗೆ ಒಟ್ಟು 10,778 ಈ-ಚಲಾನ್ ಪ್ರಕರಣಗಳಲ್ಲಿ ರೂ. 46,06,500 ಮೊತ್ತವನ್ನು ಶೇಕಡಾ 50 ರಷ್ಟು ರಿಯಾಯಿತಿಯಲ್ಲಿ ಪಾವತಿಸಲಾಗಿದೆ.
ಇತ್ತೀಚೆಗೆ ಕರ್ನಾಟಕ ರಾಜ್ಯ ಸರ್ಕಾರ ಹೊರಡಿಸಿದ ಸರ್ಕಾರಿ ಆದೇಶದಡಿ ದಂಡದ ಮೊತ್ತದಲ್ಲಿ ನೀಡಲಾದ ರಿಯಾಯಿತಿಯಿಂದ ಹಲವರು ಲಾಭ ಪಡೆದಿದ್ದು, ದಂಡ ಸಂಗ್ರಹಣೆಯಲ್ಲಿ ಸಂಚಾರಿ ಪೊಲೀಸರ ಕಾರ್ಯವನ್ನು ಹಿರಿಯ ಸಿವಿಲ್ ನ್ಯಾಯಾಧೀಶರು ಶ್ಲಾಘಿಸಿದರು.
ಇದಕ್ಕೂ ಮೊದಲು, ಸರ್ಕಾರಿ ಆದೇಶ ಹೊರಬಂದ ಸಮಯದಲ್ಲಿ ಶಿವಮೊಗ್ಗದಲ್ಲಿ ಒಟ್ಟು 2,99,037 ಪ್ರಕರಣಗಳು ದಾಖಲಾಗಿದ್ದು, ಅವುಗಳಲ್ಲಿ ಒಟ್ಟು ರೂ. 23,71,18,350 ದಂಡದ ಮೊತ್ತ ಬಾಕಿ ಇತ್ತು.
ಈ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ತಮ್ಮ ವಾಹನಗಳ ಮೇಲೆ ಬಾಕಿ ಇರುವ ಈ-ಚಲಾನ್ ದಂಡದ ವಿವರಗಳನ್ನು ತಿಳಿದುಕೊಳ್ಳಲು ಪೂರ್ವ ಹಾಗೂ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಗಳಲ್ಲಿ ಅಥವಾ ವಿವಿಧ ವೃತ್ತಗಳಲ್ಲಿ ಕರ್ತವ್ಯದಲ್ಲಿರುವ ಸಂಚಾರಿ ಪೊಲೀಸರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅದೇ ರೀತಿ, ವಾಹನದ ಸಂಖ್ಯೆಯನ್ನು ನಮೂದಿಸಿ ಅಂತರ್ಜಾಲದ ಮೂಲಕವೂ ಮಾಹಿತಿ ಪಡೆದು ಜುಲೈ 10, 2026ರೊಳಗೆ ಬಾಕಿ ಇರುವ ದಂಡದ ಮೊತ್ತದಲ್ಲಿ ಶೇಕಡಾ 50 ರಷ್ಟು ರಿಯಾಯಿತಿಯನ್ನು ಪಡೆದು ಪಾವತಿಸಲು ಸಾರ್ವಜನಿಕರು ಮುಂದಾಗುವಂತೆ ಮನವಿ ಮಾಡಲಾಗಿದೆ.
ವರದಿ: ಡಿ.ಪಿ. ಅರವಿಂದ್

