ಶಿವಮೊಗ್ಗದಲ್ಲಿ ಅಜ್ಜಿಯ ಕೊಲೆ ಪ್ರಕರಣ: ಆರೋಪಿ ಕಾಲಿಗೆ ಪೊಲೀಸರ ಗುಂಡು
ಶಿವಮೊಗ್ಗ, ಜು.2: ಗಾಂಜಾ ವಿಚಾರವನ್ನು ಪೊಲೀಸರಿಗೆ ತಿಳಿಸಲು ಮುಂದಾಗಿದ್ದ ಅಜ್ಜಿಯನ್ನು ಸ್ವಂತ ಮೊಮ್ಮಗನೇ ನಡುರಸ್ತೆಯಲ್ಲೇ ಕಲ್ಲಿನಿಂದ ಹೊಡೆದು ಹತ್ಯೆಗೈದಿದ್ದ ಪ್ರಕರಣದಲ್ಲಿ ಆರೋಪಿ ಕಿಶೋರ್ (26)ನ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ.
ಶಿವಮೊಗ್ಗದ ಅಣ್ಣನಗರದಲ್ಲಿ ನಡೆದಿದ್ದ ಈ ಕ್ರೂರ ಹತ್ಯೆ ಪ್ರಕರಣವು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ 236/2026, ಕಲಂ 103(1) ಬಿಎನ್‌ಎಸ್ ಅಡಿಯಲ್ಲಿ ದಾಖಲಾಗಿತ್ತು.
ಪ್ರಕರಣದ ಆರೋಪಿ ಪತ್ತೆಗಾಗಿ ದೊಡ್ಡಪೇಟೆ ಪೊಲೀಸ್ ಠಾಣೆಯ ಪಿ.ಐ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ, ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ವಾಜಪೇಯಿ ಬಡಾವಣೆಯಲ್ಲಿ ಆರೋಪಿ ಕಿಶೋರ್ ಅಡಗಿರುವ ಮಾಹಿತಿ ಲಭಿಸಿತ್ತು.
ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ತೆರಳಿದ ಪೊಲೀಸರಿಗೆ ಆರೋಪಿ ಶರಣಾಗುವಂತೆ ಪಿ.ಐ ಎಚ್ಚರಿಕೆ ನೀಡಿದರು. ಆದರೆ ಆರೋಪಿ ತನ್ನ ಬಳಿ ಇದ್ದ ಚಾಕುವಿನಿಂದ ಸಿಬ್ಬಂದಿ ಗಣೇಶ್ (CPC-1070) ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ.
ಸಿಬ್ಬಂದಿಯ ರಕ್ಷಣಾರ್ಥ ಪಿ.ಐ ಮೊದಲಿಗೆ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಎಚ್ಚರಿಕೆ ನೀಡಿದರು. ಆದರೂ ಆರೋಪಿ ಶರಣಾಗದ ಹಿನ್ನೆಲೆಯಲ್ಲಿ ಮತ್ತೊಂದು ಸುತ್ತು ಗುಂಡನ್ನು ಆರೋಪಿ ಕಿಶೋರ್‌ನ ಎಡಗಾಲಿಗೆ ಹಾರಿಸಿ ವಶಕ್ಕೆ ಪಡೆದರು.
ಗಾಯಗೊಂಡ ಆರೋಪಿ ಕಿಶೋರ್ ಹಾಗೂ ಗಾಯಾಳು ಸಿಬ್ಬಂದಿ ಗಣೇಶ್ ಅವರನ್ನು ತಕ್ಷಣ ಇಲಾಖಾ ವಾಹನದಲ್ಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಮುಂದುವರಿದಿದೆ.
ವರದಿ: ಡಿ.ಪಿ. ಅರವಿಂದ್

