ಶಿವಮೊಗ್ಗದಲ್ಲಿ ಬೆಚ್ಚಿಬೀಳಿಸಿದ ಘಟನೆ: ಗಾಂಜಾ ವ್ಯಸನದ ವಿಚಾರಕ್ಕೆ ಅಜ್ಜಿಯನ್ನೇ ಕಲ್ಲಿನಿಂದ ಹೊಡೆದು ಕೊಂದ ಮೊಮ್ಮಗ
ಶಿವಮೊಗ್ಗ, ಜುಲೈ 01: ಶಿವಮೊಗ್ಗ ನಗರದ ಮಿಳಘಟ್ಟ ಸಮೀಪದ ಆನಂದರಾವ್ ಬಡಾವಣೆಯಲ್ಲಿ ಮನಕಲಕುವ ಹಾಗೂ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ಸ್ವಂತ ಮೊಮ್ಮಗನೇ ತನ್ನ ಅಜ್ಜಿಯ ತಲೆಯ ಮೇಲೆ ದೊಡ್ಡ ಗಾತ್ರದ ಕಲ್ಲು ಎತ್ತಿಹಾಕಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಮಂಗಳವಾರ ಸಂಜೆ ಬೆಳಕಿಗೆ ಬಂದಿದೆ.
ಕೊಲೆಯಾದ ವೃದ್ಧೆಯನ್ನು ಸುಶೀಲಮ್ಮ (65) ಎಂದು ಗುರುತಿಸಲಾಗಿದ್ದು, ಆರೋಪಿಯನ್ನು ಕಿಶೋರ (28) ಎಂದು ಪೊಲೀಸರು ಗುರುತಿಸಿದ್ದಾರೆ. ಘಟನೆ ನಡೆದ ತಕ್ಷಣ ಆರೋಪಿ ಸ್ಥಳದಿಂದ ಪರಾರಿಯಾಗಿದ್ದು, ಆತನ ಬಂಧನಕ್ಕಾಗಿ ದೊಡ್ಡಪೇಟೆ ಠಾಣೆ ಪೊಲೀಸರು ತೀವ್ರ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.
ಪ್ರತ್ಯಕ್ಷದರ್ಶಿಗಳ ಮಾಹಿತಿ ಪ್ರಕಾರ, ಆರೋಪಿತ ಕಿಶೋರ ತನ್ನ ಅಜ್ಜಿಯೊಂದಿಗೆ ಕೆಲಕಾಲದಿಂದ ಮನೆಯಲ್ಲಿ ವಾಗ್ವಾದ ನಡೆಸುತ್ತಿದ್ದ ಎನ್ನಲಾಗಿದೆ. ಕಿಶೋರ ಗಾಂಜಾ ವ್ಯಸನಿಯಾಗಿದ್ದು, ಈತನ ವರ್ತನೆಗೆ ಬೇಸತ್ತಿದ್ದ ಅಜ್ಜಿ ಸುಶೀಲಮ್ಮ ಅವರು ಪೊಲೀಸರಿಗೆ ದೂರು ನೀಡಲು ತೆರಳುತ್ತಿದ್ದರು ಎನ್ನಲಾಗಿದೆ. ಈ ವಿಚಾರ ತಿಳಿದ ಕಿಶೋರ ಆಕ್ರೋಶಗೊಂಡು, ನಡು ರಸ್ತೆಯಲ್ಲಿಯೇ ಅಜ್ಜಿಯ ಮೇಲೆ ದಾಳಿ ನಡೆಸಿದ್ದಾನೆ.
ಅವನು ಸಮೀಪದಲ್ಲಿದ್ದ ದೊಡ್ಡ ಕಲ್ಲನ್ನು ಎತ್ತಿ ಅಜ್ಜಿಯ ತಲೆಯ ಮೇಲೆ ಬಲವಾಗಿ ಹೊಡೆದ ಪರಿಣಾಮ ಸುಶೀಲಮ್ಮ ಅವರಿಗೆ ತೀವ್ರ ರಕ್ತಸ್ರಾವ ಉಂಟಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಘಟನಾ ಸ್ಥಳಕ್ಕೆ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ ಹಾಗೂ ದೊಡ್ಡಪೇಟೆ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ.
ಈ ಹೃದಯವಿದ್ರಾವಕ ಘಟನೆ ಸ್ಥಳೀಯರಲ್ಲಿ ಆತಂಕ ಮತ್ತು ಆಕ್ರೋಶಕ್ಕೆ ಕಾರಣವಾಗಿದ್ದು, ಕುಟುಂಬದೊಳಗಿನ ವ್ಯಸನ ಸಮಸ್ಯೆಗಳು ಎಂತಹ ದುರಂತಗಳಿಗೆ ದಾರಿ ಮಾಡಿಕೊಡುತ್ತವೆ ಎಂಬುದಕ್ಕೆ ಮತ್ತೊಂದು ಉದಾಹರಣೆಯಾಗಿದೆ.
ಈ ಪ್ರಕರಣದ ಬಗ್ಗೆ ಇನ್ನಷ್ಟು ಮಾಹಿತಿ ತನಿಖೆಯ ನಂತರ ಬಹಿರಂಗವಾಗುವ ಸಾಧ್ಯತೆ ಇದೆ.
ವರದಿ: ಡಿ.ಪಿ ಅರವಿಂದ್

