ದುರ್ಗಿಗುಡಿ ಶನಿಮಹಾತ್ಮ ದೇವಾಲಯ ಹಿಂಭಾಗದ ಘಟನೆ — ಕಾರ್ಕಾಳ ಮೂಲದ ಅಮಿತ್ ಎಂಬ ಯುವಕ ಮೃತಪಟ್ಟಿರುವ ಮಾಹಿತಿ
ಶಿವಮೊಗ್ಗ, ಅಕ್ಟೋಬರ್ 12:
ಇಂದು ಸಂಜೆ ಸುಮಾರು 4 ಗಂಟೆ ಸಮಯದಲ್ಲಿ ಶಿವಮೊಗ್ಗ ನಗರದ ದುರ್ಗಿಗುಡಿಯ ಶನಿಮಹಾತ್ಮ ದೇವಾಲಯದ ಹಿಂಭಾಗದಲ್ಲಿರುವ ಹೊಸದಾಗಿ ನಿರ್ಮಾಣ ಹಂತದಲ್ಲಿರುವ ಮೂರು ಅಂತಸ್ತಿನ ಕಟ್ಟಡದ ಮೇಲಿಂದ ಯುವಕನೊಬ್ಬ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನುವ ಘಟನೆ ಬೆಳಕಿಗೆ ಬಂದಿದೆ.
ಮೃತ ಯುವಕನನ್ನು ಅಮಿತ್ (ಅಂದಾಜು ವಯಸ್ಸು 27–28) ಎಂದು ಗುರುತಿಸಲಾಗಿದ್ದು, ಆತ ಮೂಲತಃ ಉಡುಪಿ ಜಿಲ್ಲೆಯ ಕಾರ್ಕಾಳ ಮೂಲದವನು ಎಂದು ತಿಳಿದುಬಂದಿದೆ. ಅಮಿತ್ ಕಳೆದ ಕೆಲವು ತಿಂಗಳಿನಿಂದ ಶಿವಮೊಗ್ಗ ನಗರದ ಪ್ರಸಿದ್ಧ ಶುಭಂ ಹೋಟೆಲ್‌ನಲ್ಲಿ ಉದ್ಯೋಗದಲ್ಲಿದ್ದ ಎಂಬ ಮಾಹಿತಿ ದೊರೆತಿದೆ.
ಇಂದು ಭಾನುವಾರವಾಗಿದ್ದ ಕಾರಣ ಮಧ್ಯಾಹ್ನದವರೆಗೆ ಹೋಟೆಲ್‌ನಲ್ಲಿ ಕೆಲಸ ನಿರ್ವಹಿಸಿದ ನಂತರ ಅಮಿತ್ ಅಲ್ಲಿಂದ ಹೊರಬಂದು ದುರ್ಗಿಗುಡಿ ಶನಿಮಹಾತ್ಮ ದೇವಾಲಯದ ಹಿಂಭಾಗದಲ್ಲಿರುವ ನಿರ್ಮಾಣ ಹಂತದ ಕಟ್ಟಡದ ಮೇಲೆ ಹತ್ತಿ, ಅಲ್ಲಿ ಸುಮಾರು ಮೂರು ಅಂತಸ್ತು ಎತ್ತರದಿಂದ ಕೆಳಕ್ಕೆ ಜಿಗಿದಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಜಿಗಿಯುವಾಗ ಅಮಿತ್‌ನ ತಲೆಯ ಭಾಗಕ್ಕೆ ತೀವ್ರ ಪೆಟ್ಟು ಬಿದ್ದು, ಅತಿ ಪ್ರಮಾಣದ ರಕ್ತಸ್ರಾವ ಸಂಭವಿಸಿದೆ. ಸ್ಥಳದಲ್ಲಿದ್ದ ಜನರು ತಕ್ಷಣ ಆತನನ್ನು ಮೆಗ್ಗಾನ್ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರೂ, ಚಿಕಿತ್ಸೆ ಫಲಕಾರಿಯಾಗದೆ ಆತ ಆಸ್ಪತ್ರೆಯಲ್ಲೇ ಸಾವನ್ನಪ್ಪಿದ್ದಾನೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಘಟನೆಯ ತಕ್ಷಣ ಜಯನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಸುತ್ತಮುತ್ತಲಿನ ಸಿ.ಸಿ. ಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿ, ಆತ್ಮಹತ್ಯೆಗೆ ಕಾರಣವಾದ ಅಂಶಗಳ ಬಗ್ಗೆ ತನಿಖೆ ಕೈಗೊಂಡಿದ್ದಾರೆ.
ಇದೇವರೆಗೆ ಆತ್ಮಹತ್ಯೆಗೆ ನಿಖರ ಕಾರಣ ಏನು ಎಂಬುದು ತಿಳಿದುಬಂದಿಲ್ಲ. ಮಾನಸಿಕ ಒತ್ತಡ, ವೈಯಕ್ತಿಕ ಸಮಸ್ಯೆ ಅಥವಾ ಉದ್ಯೋಗ ಸಂಬಂಧಿತ ಅಸಮಾಧಾನ ಕಾರಣವಾಗಿರಬಹುದೆಂಬ ಶಂಕೆ ವ್ಯಕ್ತವಾಗುತ್ತಿದೆ. ಆದರೆ ಸ್ಪಷ್ಟ ಮಾಹಿತಿ ಪೊಲೀಸರ ಸಂಪೂರ್ಣ ತನಿಖೆಯ ಬಳಿಕವೇ ಹೊರಬರುವ ಸಾಧ್ಯತೆ ಇದೆ.
ಘಟನೆಯಿಂದ ದುರ್ಗಿಗುಡಿ ಪ್ರದೇಶದಲ್ಲಿ ಆತಂಕ ಮತ್ತು ಚರ್ಚೆ ಉಂಟಾಗಿದೆ. ಸ್ಥಳೀಯರು ಈ ಘಟನೆಗೆ ಬೇಸರ ವ್ಯಕ್ತಪಡಿಸಿದ್ದು, ಯುವಕರು ಆತ್ಮಹತ್ಯೆಯಂತಹ ಅತಿದುರಂತ ನಿರ್ಧಾರ ಕೈಗೊಳ್ಳದಂತೆ ಮನವಿ ಮಾಡಿದ್ದಾರೆ.
ವರದಿ: ಡಿ.ಪಿ. ಅರವಿಂದ್
ಎಫ್7 ನ್ಯೂಸ್, ಶಿವಮೊಗ್ಗ

.jpeg)
