ಶಿವಮೊಗ್ಗ: ದರೋಡೆ ಪ್ರಕರಣದಲ್ಲಿ ಆರೋಪಿಗೆ 7 ವರ್ಷ ಕಠಿಣ ಕಾರಾವಾಸ
ಶಿವಮೊಗ್ಗ ನಗರದ ಹೊನ್ನಾಳಿ ರಸ್ತೆಯ ರಾಗಿಗುಡ್ಡ ಕ್ರಾಸ್ ಬಳಿ 2021ರಲ್ಲಿ ನಡೆದಿದ್ದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ 7 ವರ್ಷಗಳ ಕಠಿಣ ಕಾರಾವಾಸ ಹಾಗೂ ₹10,000 ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.
ಪ್ರಕರಣದ ವಿವರಗಳ ಪ್ರಕಾರ, 04-05-2021ರ ಬೆಳಗಿನ ಜಾವ ಸುನೀಲ್ (26) ಅವರು ತಮ್ಮ ಮೊಫೆಡ್‌ನಲ್ಲಿ ತೆರಳುತ್ತಿದ್ದ ವೇಳೆ, ಇಬ್ಬರು ಅಪರಿಚಿತರು ಬೈಕ್‌ನಲ್ಲಿ ಬಂದು ದಾರಿ ಅಡ್ಡಗಟ್ಟಿ ಚಾಕು ತೋರಿಸಿ ಬೆದರಿಸಿ ₹500 ನಗದು, ಮೊಬೈಲ್ ಫೋನ್ ಹಾಗೂ ಎಟಿಎಂ ಕಾರ್ಡ್‌ಗಳನ್ನು ಕಸಿದುಕೊಂಡು ಪರಾರಿಯಾಗಿದ್ದರು.
ಈ ಸಂಬಂಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ.167/2021 ಅಡಿ ಐಪಿಸಿ ಕಲಂ 392 ಮತ್ತು 397ರ ಪ್ರಕಾರ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆಯನ್ನು ಆಗಿನ ತನಿಖಾಧಿಕಾರಿ ಶ್ರೀ ಸಂಜೀವ್ ಕುಮಾರ್, ಪೊಲೀಸ್ ಇನ್ಸ್‌ಪೆಕ್ಟರ್ ಪೂರ್ಣಗೊಳಿಸಿ, ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು.
ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಶ್ರೀಮತಿ ಮಮತಾ ಬಿ.ಎಸ್ ವಾದ ಮಂಡಿಸಿದ್ದರು. ವಿಚಾರಣೆ ಪೂರ್ಣಗೊಂಡ ಬಳಿಕ, ಶಿವಮೊಗ್ಗದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಆರೋಪಿ ಮೊಹಮ್ಮದ್ ನೂರುಲ್ಲಾ @ ಇಂಗ್ಲೀಷ್ ವಿರುದ್ಧ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮಾನ್ಯ ನ್ಯಾಯಾಧೀಶರಾದ ಶ್ರೀ ಅಭಯ್ ಧನಪಾಲ್ ಚೌಗಲ ಅವರು ಜುಲೈ 2, 2026ರಂದು 7 ವರ್ಷಗಳ ಕಠಿಣ ಕಾರಾವಾಸ ಹಾಗೂ ₹10,000 ದಂಡ ವಿಧಿಸಿ ಆದೇಶ ನೀಡಿದ್ದಾರೆ.
DP Aravind F7news.in Shivamogga

