ಕನ್ನಡ ನಾಡಿನ ಜೀವನದಿ ಕಾವೇರಿ, ಪಶ್ಚಿಮಘಟ್ಟದ ಮಲೆನಾಡಿನ ಜೀವನದಿ ಶರಾವತಿ.

ಕನ್ನಡ ನಾಡಿನ ಜೀವನದಿ ಕಾವೇರಿ, ಪಶ್ಚಿಮಘಟ್ಟದ ಮಲೆನಾಡಿನ ಜೀವನದಿ ಶರಾವತಿ.


ಈಗಾಗಲೇ ಅಭಿವೃದ್ಧಿಯ ಹೆಸರಿನಲ್ಲಿ ಶರಾವತಿ, ತುಂಗೆ, ಭದ್ರೆಯರ ಉಪನದಿಗಳು ಕಣ್ಮರೆಯಾಗಿದೆ. ಶರಾವತಿಕೊಳ್ಳದ ಉಪನದಿ ಮಾಲತಿ, ಪಾದಗೋಪಿ ತರಹದ ಹತ್ತಾರು ನದಿಗಳು ಗುಪ್ತಗಾಮಿನಿಯಾಗಿ, ತನ್ನ ಮೂಲ ಪಥವನ್ನೇ ಬದಲಿಸಿವೆ, ತುಂಗೆ ಮಂಡಗದ್ದೆಯ ಬಳಿ ಏಳು ಸೀಳುಗಳಾಗಿ ತನ್ನಿರುವನ್ನೇ ಮರೆತಿದ್ದಾಳೆ, ಹತ್ತಾರು ಜಲಪಾತಗಳು ಕಿರುಕಾಲುವೆಗಳಾಗಿವೆ, ಜೋಗಜಲಪಾತವನ್ನು ಸರ್ವ ಋತು ಜಲಪಾತವನ್ನಾಗಿಸಲು ಪ್ರಕೃತಿಗೆ ವಿರುದ್ದವಾಗಿ ಮಲೆನಾಡು ಭಾಗದ ರಾಜಕಾರಣಿಗಳು ಟೊಂಕಕಟ್ಟಿ ನಿಂತಿದ್ದಾರೆ. ಬರೆಯೋದು ಬಹಳಷ್ಟು ಇದೆ. ಬರೆಯೋದು ಯಾರಿಗಾಗಿ, ಏತಕ್ಕಾಗಿ. ಸರ್ವೆ ಮಾಡಲು ಹೋದ ನಮಗೆ ಜೀವಬೆದರಿಕೆ ಹಾಕಲಾಯಿತು. ಇಂದು ಕಾವೇರಿ, ನಾಳೆ ತುಂಗ ಭದ್ರೆ. ತುಂಗಾಮೂಲ ಉಳಿಸಿ ಹೋರಾಟದಲ್ಲಿ ಭಾಗವಹಿಸಿ ದವರ ಮೇಲೆ ನಕಲಿ ಕೇಸ್ ದಾಖಲಿಸಿದರು. ಇಂದು ಎಚ್ಚೆತ್ತುಕೊಳ್ಳದೆ ಮಲಗಿ ನಿದ್ರಿಸುತ್ತಿದ್ದರೆ ಮಲೆನಾಡ ಜೀವನದಿ,ಶರಾವತಿ, ತುಂಗೆ ಭದ್ರೆಯರು ಕಣ್ಮರೆಯಾಗಲು ಬಹಳ ಸಮಯ ಬೇಕಾಗಿಲ್ಲ.

ಮುಂದೆ  ಓದುತ್ತಾ ಹೋಗಿ ನಿಮ್ಮ ಅಭಿಪ್ರಾಯ ತಿಳಿಸಿ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದಲ್ಲಿ ಹುಟ್ಟುವ ಶರಾವತಿ ಸಲಿಲೆಯಾಗಿ, ಜೀವನದಿಯಾಗಿ, ಕೊರಕಲಿನಲ್ಲಿ, ಕಣಿವೆಯಲ್ಲಿ ಓಘವಾಗಿ ಹರಿಯುತ್ತಾ ಲಕ್ಷಾಂತರ ಜೀವಿಗಳಿಗೆ ಅಮೃತಸಮನಾದ ಜಲವನ್ನು ಒದಗಿಸುತ್ತಾ ಪ್ರಕೃತಿಯನ್ನು ಸಮತೋಲನ ಮಾಡಿ ಕಾಪಾಡುತ್ತಿದ್ದಾಳೆ. ಶರಾವತಿ ಉಗಮಸ್ಥಾನದಲ್ಲಿ ಕೈ ಬೊಗಸೆಯಲ್ಲಿ ಹಿಡಿದು ಕುಡಿಯಬಹುದಾದ ತಿಳಿನೀರು ರಾಮೇಶ್ವರ ಲಿಂಗದ ಕೆಳಗೆ ಚಿಲುಮೆಯಾಕಾರದಲ್ಲಿ ಪುಟಿಯುತ್ತದೆ. ಪೌರಾಣಿಕ ಕಥೆಗಳಲ್ಲಿ ಶರಾವತಿ ಯ ಉಲ್ಲೇಖ ವಿದೆ. ಅಂಬುತೀರ್ಥದಿಂದ ಕೇವಲ ಕಲವೇ ಕಿ.ಮಿ. ದೂರದ ಅರಳಸುರುಳಿ ಗ್ರಾಮಕ್ಕೆ ಬರುವಾಗ ಶರಾವತಿ ಸಲ್ಪ ಮೈತುಂಬಿ ಹರಿಯುತ್ತಾಳೆ. ಇವಳಿಂದ ಉಗಮವಾದ ಮೊಟ್ಟಮೊದಲ ಜಲಪಾತ ಅಚ್ಚಕನ್ಯೆ, ಇಲ್ಲಿಂದ ಎರಡು ಭಾಗವಾಗಿ ಧುಮುಕುವ ಜಲಪಾತಕ್ಕೆ ಅಕ್ಕ ತಂಗಿಯರ ಜಲಪಾತ ಎಂಬ ಹೆಸರು. ಮುಂದೆ ಹೊಸನಗರ ತಾಲೂಕನ್ನು ಪ್ರವೇಶಿಸುವ ಶರಾವತಿ ಫತ್ತೇಪೇಟೆ ಬಳಿ ವಾಯುವ್ಯ ದಿಕ್ಕಿನಲ್ಲಿ ಹರಿಯುವುದರ ಜೊತೆಗೆ ಹರಿದ್ರಾವತಿ, ಕೊಡಸೆಹೊಳೆ, ಮಾವಿನ ಹೊಳೆ, ನಂದಿಹೊಳೆ ಮೊದಲಾದ ನದಿಗಳನ್ನು ತನ್ನ ಒಡಲಿಗೆ ಸೇರಿಸಿಕೊಂಡು ಶಿವಪ್ಪನಾಯಕನ ರಾಜಧಾನಿಯಾದ ವೇಣುಪುರ (ಬಿದರೂರು) ಮೂಲಕ ಹರಿಯುತ್ತಾಳೆ. 

ಅಲ್ಲಿಂದ ಸಾಗರ ತಾಲ್ಲೂಕಿಗೆ ಬಂದ ಶರಾವತಿಗೆ ಎಣ್ಣಿಹೊಳೆ, ತಲಕಳಲೆ ಹಳ್ಳ, ಕಲಕಟ್ಟೆ, ಕಂದೊಡ್ಡಿ, ಸರಳಹೊಳೆ ಮುಂತಾದ ಹೊಳೆಗಳು ಸೇರಿಕೊಳ್ಳುತ್ತದೆ. ತನ್ನ ಹರಿವಿನ 80ಕಿ.ಮಿ.ಯಲ್ಲಿ ವಿಶ್ವ ವಿಖ್ಯಾತ ಜೋಗ ಜಲಪಾತ ವಾಗಿ ಧುಮುಕುವ ಶರಾವತಿ ಸುಮಾರು 293 ಮೀ.ಎತ್ತರದಿಂದ ಕಣಿವೆಗೆ ಹಾರಿ ಮುಂದೆ ಪಶ್ಚಿಮಾಭಿಮುಖವಾಗಿ ಹರಿಯುತ್ತಾಳೆ.

ಮಲೆನಾಡಿನ ಜೀವನದಿ ಶರಾವತಿ.

ಶರಾವತಿ ನದಿಯಿಂದ ಉಗಮವಾದ ಜೋಗಜಲಪಾತ ೧೮೦೦ ರ ನಂತರ ವಿಶ್ವವಿಖ್ಯಾತಿಯನ್ನು ಗಳಿಸಿತು. ಪಿ.ಸಿ. ವಾಲ್ಟರ್ ಎಂಬಾತ 1883 ರ ಡಿಸೆಂಬರ್ ನಲ್ಲಿ ಜೋಗಕ್ಕೆ ಬಂದು ಮಾರನೆಯ ದಿನ ಕಾರವಾರದ ಮೂಲಕ ಮುಂಬಯಿಗೆ ಪ್ರಯಾಣ ಮಾಡುತ್ತಾನೆ. (ಜಲಪಾತಕ್ಕೆ ಜೋಗ ಎಂದು ಹೆಸರು ಬರಲು ಪ್ರಾಚೀನ ಕಾಲದ ಜೋಗಿಮಠ ಎಂಬ ಹಳ್ಳಿ ಕಾರಣವಾಗಿದೆ). ಈತ ತನ್ನ ತಂದೆ ಐವತ್ತು ವರ್ಷಗಳ ಹಿಂದೆ ಜಲಪಾತ ಕ್ಕೆ ಬಂದು ಅದನ್ನು ವರ್ಣಿಸುತ್ತಿದ್ದುದನ್ನೂ ನೆನಪಿಸಿಕೊಳ್ಳುತ್ತಾನೆ. ೧೮೯೧ ರಲ್ಲಿ ಬಂದ ಸಿ. ಕಿಲಬ್ನರ್ ಎಂಬ ಕಲ್ಕತ್ತಾದ ಪ್ರವಾಸಿ, ಇದರ ಬಗ್ಗೆ ಬರೆಯುತ್ತಾನೆ. ಜೋಗಜಲಪಾತದ ಹೆಸರನ್ನು ಉಲ್ಲೇಖ ಮಾಡುವ ಮತ್ತೊಂದು ಪ್ರಾಚೀನ ದಾಖಲೆ ಇಂದಿಗೂ ಹೊನ್ನಾವರ ದಲ್ಲಿದೆ. ಹೊನ್ನಾವರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಒಂದು ಸಣ್ಣ ಗುಡ್ಡವಿದೆ. ಇದರ ಮೇಲೆ ಕರ್ನಲ್ ಹಿಲ್ (Col. Hill) ಸ್ಮಾರಕ ಎಂದು ಕರೆಯಲಾಗುವ ಒಂದು ಸ್ತಂಭವಿದೆ.ಈ ಸ್ತಂಭದಲ್ಲಿ ಈ ರೀತಿ ಬರೆಯಲಾಗಿದೆ.

"This column is erected by the 14 (fourteen) the Madras native infantry a guard of which regiment in escorting to their final early resting place the remains of Major General Clement Hill. Had the sad duty of paying the last honour's to one, who during a long and active military life: won the love of every officer:and man with whom he served. He died at the falls of Gerusoppah, on the 20th of January 1845, in the 62nd year of his age while commanding the Mysore devision".

ಮದರಾಸು ರೆಜಿಮೆಂಟ್ ನ ಮೇಜರ್ ಜನರಲ್ ಕ್ಲೆಮೆಂಟ್ ಹಿಲ್ ಎಂಬಾತ ಮೈಸೂರು ವಿಭಾಗದ ಸೇನೆಯನ್ನು ಮುನ್ನಡೆಸುವಾಗ ತನ್ನ 62 ನೇ ವಯಸ್ಸಿನಲ್ಲಿ ಜನವರಿ 20, 1845,ರಂದು ಗೇರುಸೊಪ್ಪೆ ಜಲಪಾತದ ಬಳಿ ಮೃತಪಟ್ಟನೆಂದೂ ಅವನ ಶವವನ್ನು ಹೊನ್ನಾವರದಲ್ಲಿ ಮಣ್ಣು ಮಾಡಲಾಯಿತು ಎಂದು ಬರೆಯಲಾಗಿದೆ.

1800ರಲ್ಲಿ ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಗೆ ಬಂದು ಇಲ್ಲೆಲ್ಲಾ ವ್ಯಾಪಕವಾಗಿ ತಿರುಗಾಡಿದ ಫ್ರಾನ್ಸಿಸ್ ಬುಕಾನನ್ ಜೋಗದ ಬಗ್ಗೆ ಏನೂ ಉಲ್ಲೇಖ ಮಾಡದೇ ಇರುವುದು ಅಚ್ಚರಿಯ ಸಂಗತಿ. ಬುಕಾನನ್ ಶಿವಮೊಗ್ಗ ಜಿಲ್ಲೆಯ ಇಕ್ಕೇರಿ, ನಗರಗಳ ಬಗ್ಗೆ, ಉತ್ತರ ಕನ್ನಡ ದ ನೇತ್ರಾಣಿ ಗುಡ್ಡದ ಬಗ್ಗೆ ಬರೆಯುತ್ತಾನೆ. ಆದರೆ ಜೋಗಜಲಪಾತ ದ ವಿಷಯವನ್ನು ಕುರಿತು ಬರೆದ ದಾಖಲೆ ಇಲ್ಲ.‌

ಬುಕಾನನ್ ಗೂ ಮೊದಲು ಈ ಜಲಪಾತ ಜನರ ಕಣ್ಣಿಗೆ ಬಿದ್ದಿತ್ತು ಎಂದು ಹೇಳಲಾಗುವ ಒಂದು ಐತಿಹ್ಯ ಇದೆ.

ಜೋಗಜಲಪಾತದ ರಾಜಾನ ನೆತ್ತಿಯ ಮೇಲೆ ಒಂದು ಹಾಸುಗಲ್ಲಿನ ಆಕಾರದ ಬಂಡೆಯಿದೆ. ಈ ಬಂಡೆಯ ಮೇಲೆ‌ ಬೋರಲಾಗಿ ಮಲಗಿ ಪಾತಾಳಕ್ಕೆ ಧುಮುಕುವ ಶರಾವತಿ ಯನ್ನು ನೋಡುವುದೇ ಒಂದು ಆನಂದ. ಈ ಬಂಡೆಯ ಮೇಲೆ ಸೋದೆಯ ದೊರೆ ಸದಾಶಿವ ರಾಯ ಒಂದು ಮಂಟಪವನ್ನು ಕಟ್ಟಿಸಿದ್ದನೆಂದು ಹೇಳಲಾಗಿದೆ. ಈ ಕುರಿತು ಮೈಸೂರು ಗೆಜೆಟಿಯರ್ ನಲ್ಲಿ ಐದನೇ ಸಂಪುಟದಲ್ಲಿ ಸಿ.‌ಹಯವದನರಾವ್ ಕೂಡ ಬರೆಯುತ್ತಾರೆ. ಜೋಗಜಲಪಾತದ ಮೊದಲ ಜಲಪಾತಕ್ಕೆ ರಾಜಾ ಎಂದು ಹೆಸರು ಬರಲು ಕೂಡ ಇದೇ ಕಾರಣ. ಪ್ರವಾಸಿಮಂದಿರದ ಸಂದರ್ಶಕರ ಪುಸ್ತಕದಲ್ಲಿ "ಸ್ಥಳೀಯರು" ಈ ಬಂಡೆಯನ್ನು "ಅರಸುಗಲ್ಲು" ಎಂದು ಕರೆಯುತ್ತಾರೆ ಎಂದು ಬರೆಯಲಾಗಿದೆ. ಈ ಬಂಡೆಯನ್ನು ಅರಸು ಗಲ್ಲು, ರಾಜಾಸ್ಟೋನ್, ರಾಜಾ ಪಾಯಿಂಟ್, ಎಂದು ಪ್ರವಾಸಿಗರು ಕರೆಯುವ ಮೊದಲೇ ಈ ಬಂಡೆಗೆ ಅರಸು ಗಲ್ಲು ಎಂಬ ಹೆಸರು ಇತ್ತೆಂದು ದಾಖಲೆ ಗಳಿವೆ.

ಕ್ರಿ. ,1400 ರಿಂದ 1764 ರ ವೆರೆಗೆ ಸೋದೆಯ ದೊರೆಗಳು ಶರಾವತಿ ಹಾಗೂ ಕಾಳಿ ನದಿಗಳನ್ನು ಗಡಿಗಳನ್ನಾಗಿ ಇರಿಸಿಕೊಂಡು ಶಿರಸಿ, ಹಳಿಯಾಳ, ಯಲ್ಲಾಪುರ, ಸೂಪಾ ಮೊದಲಾದ ಪ್ರದೇಶಗಳಲ್ಲಿ ಆಳ್ವಿಕೆ ನಡೆಸಿದರು, ಸೊರಬ, ಸಾಗರ ತಾಲೂಕಿನ ಕೆಲ ಪ್ರದೇಶ, ಜಲಪಾತವಿರುವ ಪ್ರದೇಶ ಅವರ ವ್ಯಾಪ್ತಿಗೆ ಬರುತ್ತದೆ. ಅವರು ಇಲ್ಲಿ ಒಂದು ಮಂಟಪವನ್ನು ನಿರ್ಮಿಸಿದ್ದರು, ಆದರೆ ಅದಕ್ಕೆ ಸೂಕ್ತ ದಾಖಲೆಗಳು ದೊರೆತಿಲ್ಲ. 

1896 ರಲ್ಲಿ ಜೋಗಕ್ಜೆ ಬಂದ ಧಾರವಾಡ ದ ಸಹಾಯಕ ಕಲೆಕ್ಟರ್ ಅಂಡರ್ ಸನ್ ಕೂಡ ಈ ಅರಸುಕಲ್ಲಿನ ಉಲ್ಲೇಖ ಮಾಡುತ್ತಾನೆ. ‌ಇಷ್ಟಾದರೂ ರಾಜಾನ ನೆತ್ತಿಯ ಮೇಲಿನ ಬಂಡೆಗೆ ಅರಸನ ಕಲ್ಲು ಎಂಬ ಹೆಸರು ಹಿಂದಿನಿಂದಲೂ ಇತ್ತು ಎಂಬುದನ್ನು ನಂಬಬಹುದಾಗಿದೆ.ಈ ಅರಸು ಮುಂದೆ ರಾಜನಾಗಿ ಉಳಿದ ಜಲಪಾತದ ಧಾರೆಗಳಿಗೆ ರೋರರ್, ರಾಕೆಟ್, ರಾಣಿ (ಲೇಡಿ) ಎಂಬ ಆಂಗ್ಲ ಹೆಸರುಗಳನ್ನು ಇಟ್ಟವರು ಮಾತ್ರ ಬ್ರಿಟಿಷರು.

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕು ಅರಳಸುರಳಿಯಿಂದ 4 ಕಿಲೋಮೀಟರು ದೂರದಲ್ಲಿರುವ ಅಚ್ಚಕನ್ಯೆ ಜಲಪಾತ ಶರಾವತಿ ನದಿಯಿಂದ ಸೃಷ್ಟಿಯಾದ ಮೊದಲ ಜಲಪಾತ, ಬಾಕುತ, ಬಳುಕುತ, ನಲಿಯುತ, ಧುಮುಕುತ, ವೇಗದಿ ಬಂದಳು ಶರಾವತಿ, ನಮ್ಮ ಕನ್ನಡ ನಾಡಿನ ಭಾಗೀರಥಿ.

ಮುಂದೆ ಜೋಗದಲ್ಲಿ ದುಮ್ಮಿಕ್ಕಿ, ಇನ್ನು ಹಲವಾರು ಜಲಪಾತಗಳನ್ನು ಸೃಷ್ಟಿಸಿ ಪಶ್ಚಿಮಘಟ್ಟದ ರಮಣೀಯತೆಗೆ ಮೆರಗು ಕೊಟ್ಟು, ಅರಬ್ಬಿ ಸಮುದ್ರವನ್ನು ಸೇರುವ ಈ ನದಿಯ ಉದ್ದ ಅಮೆಝೋನ್ ನದಿಯ ಅಗಲಕ್ಕೆ ಸಮನಂತೆ.

ತುಂಗಾ ಪಾನ ಗಂಗಾ ಸ್ನಾನ. --- 

ಪಶ್ಚಿಮ ಘಟ್ಟಗಳ ಮೂಲಕ ಹರಿಯುವ ತುಂಗೆ ತಾನು ಚಲಿಸುವ ಉದ್ದಕ್ಕೂ ನೂರಾರು ಪುರಾಣಕ್ಕೆ, ಇತಿಹಾಸಕ್ಕೆ ಸಂಬಂಧಿಸಿದ ಸ್ಥಳ ಗಳನ್ನು ತನ್ನ ದಡದಮೇಲೆ ನಿಲ್ಲಿಸಿಕೊಂಡಿದ್ದಾಳೆ. ಹಲವಾರು ಮಠ ಮಾನ್ಯಗಳು, ಪವಾಡ ಸ್ಥಳಗಳು, ಸಾವಿರಾರು ವರ್ಷಗಳಿಂದ ಇರುವ  ಆಯುರ್ವೇದದ ಸಸ್ಯಪ್ರಭೇದಗಳು, ಜೀವವೈವಿಧ್ಯ ಗಳು, ವನ್ಯಜೀವಿಗಳು, ಅತ್ಯದ್ಭುತ ಪ್ರಾಕೃತಿಕ ಸೌಂದರ್ಯ ವುಳ್ಳ ಗುಡ್ಡ ಬೆಟ್ಟಗಳು, ಹಲವಾರು ರೀತಿಯ ಕಾಡಿನ ಉತ್ಪನ್ನಗಳು, ಉತ್ಕೃಷ್ಟ ದರ್ಜೆಯ ಜೇನುತುಪ್ಪ, ಹಲವು ಪ್ರಬೇಧಗಳ ಹಲಸು, ಮಾವು, ನೆಲ್ಲಿ, ಬೇಲ, ಹಾಗೂ ನೂರಾರು ರೀತಿಯ ಕಾಡು ಹಣ್ಣು ಗಳು, ಪ್ರಪಂಚದಲ್ಲಿಯೇ  ಅತ್ಯಂತ ಉನ್ನತ ದರ್ಜೆಯ ಶ್ರೀಗಂಧ, ತೇಗ, ಮತ್ತಿ, ದಾಲ್ಚಿನ್ನಿ, ಚಕ್ಕೆ, ನೂರಾರು ರೀತಿಯ ಸುಗಂಧ ಭರಿತ ಪುಷ್ಪಗಳು, ತಾವರೆ, ಕಮಲದ ಹೂವು, ಇವೆಲ್ಲವನ್ನೂ ತನ್ನೊಳಗೆ ಹೊಂದಿರುವ ಪಶ್ಚಿಮ ಘಟ್ಟದಲ್ಲಿ ಹುಟ್ಟಿದ ಪರಮಪಾವನೆ ತುಂಗೆಗೆ ನನ್ನ ಪ್ರಣಾಮಗಳು.

#ತುಂಗೆ ಉಳಿಸಿ ಸಂಸ್ಕೃತಿ ಉಳಿಸಿ

#ಶರಾವತಿ ಉಳಿಸಿ ಮನುಕುಲ ಉಳಿಸಿ

#ನದಿ ಉಳಿಸಿ ಮಲೆನಾಡಿನ ಸಂಸ್ಕೃತಿ ಉಳಿಸಿ.

ಶರಾವತಿ ಯ ಭೂಗರ್ಭದಲ್ಲಿ ವಿದ್ಯುತ್ ಸ್ಥಾವರಕ್ಕೆ ಡಿಪಿಆರ್ ಸಿದ್ಧ ಪಡಿಸಬೇಕಂತೆ, ಹುಚ್ ಮುಂಡೆ ಮದುವೆಯಲ್ಲಿ ಉಂಡವನೇ ಜಾಣ, ಶರಾವತಿಯ ನೀರನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗುವುದು, ಶರಾವತಿಯ ಒಡಲಿಗೆ ಕನ್ನ ಹಾಕುವುದು, ಪಂಪ್ಡ್ ಸ್ಟೋರೇಜ್ ಮಾಡುವುದು ಶರಾವತಿಯ ಅವಸಾನವಲ್ಲದೇ ಮತ್ತೇನು ? ಏಷ್ಯಾ ಖಂಡದಲ್ಲೇ ಅತ್ಯಂತ ದೊಡ್ಡ ಪ್ರಮಾಣದಲ್ಲಿ ಹಾಗೂ ಕಡಿಮೆ ಖರ್ಚಿನಲ್ಲಿ ವಿದ್ಯುತ್ ಉತ್ಪಾದನೆಯನ್ನು ಮಾಡುವ ಶರಾವತಿಯ ಅವಸಾನ ಸನ್ನಿಹಿತವಾಗುತ್ತಿದೆ. ಶರಾವತಿಯನ್ನು ಅವಸಾನದಂಚಿಗೆ ತರುವ ಎಲ್ಲಾ ರೀತಿಯ ಹುನ್ನಾರಗಳು ನಡೆಯುತ್ತಿವೆ. 

ಇನ್ನು ಶರಾವತಿಯ ಉಗಮಸ್ಥಾನ ಅಂಬುತೀರ್ಥದಲ್ಲಿ ಗುಡ್ಡವನ್ನು ಕೊರೆದು ರಸ್ತೆ ಮಾಡುತ್ತಿರುವ,  ಶರಾವತಿ ನದಿಗೆ ಪಂಪ್ಡ್ ಸ್ಟೋರೇಜ್ ಮಾಡುವ ಅವೈಜ್ಞಾನಿಕ ವಿಧಾನಗಳನ್ನು ವಿರೋಧಿಸುವ ಮನಸ್ಸು ಯಾರಿಗೂ ಇಲ್ಲ. ಯಾರನ್ನೋ ಮೆಚ್ಚಿಸಲು ಪರಿಸರದ ಮೇಲೆ ದಾಳಿ ಮಾಡಿ ಅದರ ಸರ್ವನಾಶ ಮಾಡುತ್ತಿರುವ ಸರ್ಕಾರದ ಇಂತಹ ಕಾರ್ಯಗಳಿಗೆ ಧಿಕ್ಕಾರವಿರಲಿ.


#ಶರಾವತಿ ನದಿ ಮೂಲ ಉಳಿಸಿ

#ನದಿಮೂಲಗಳು, ನದಿಗಳು ಇದ್ದರೆ ಮಲೆನಾಡು, ಇಲ್ಲದಿದ್ದರೆ ಸುಡುಗಾಡು.

#ಶರಾವತಿ ನಿನಗಾರು ಗತಿ.

ದಿಲೀಪ್ ನಾಡಿಗ್ 

Post a Comment

Previous Post Next Post