ಜಮೀರ್ ಅಹ್ಮದ್ ಖಾನ್ ಅವರಿಗೆ ಅವಮಾನ – ಮುಸ್ಲಿಂ ಸಮುದಾಯದ ಸ್ವಾಭಿಮಾನಕ್ಕೆ ಧಕ್ಕೆ ಎಂದ ಸಂಘಟನೆ

ದಾವಣಗೆರೆ ಉಪಚುನಾವಣೆ: ಕಾಂಗ್ರೆಸ್‌ಗೆ ‘ನೋಟಾ’ ಮೂಲಕ ಪಾಠ ಕಲಿಸುವ ಎಚ್ಚರಿಕೆ – ಅಲ್ಪಸಂಖ್ಯಾತರ ಹಿತರಕ್ಷಣಾ ವೇದಿಕೆ

ಶಿವಮೊಗ್ಗ:
ನಗರದ ಪತ್ರಿಕಾ ಭವನದಲ್ಲಿ ಕ.ರಾ ಅಲ್ಪಸಂಖ್ಯಾತರ ಹಿತರಕ್ಷಣಾ ವೇದಿಕೆ ವತಿಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ದಾವಣಗೆರೆ ಉಪಚುನಾವಣೆ ಕುರಿತು ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಎಚ್ಚರಿಕೆ ನೀಡಲಾಯಿತು. ಈ ಬಾರಿ ನಡೆಯಲಿರುವ ದಾವಣಗೆರೆ ಉಪಚುನಾವಣೆಯಲ್ಲಿ ಅಲ್ಪಸಂಖ್ಯಾತರು ನೋಟಾ (NOTA) ಮೂಲಕ ಮತ ಚಲಾಯಿಸಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ವೇದಿಕೆಯ ಜಿಲ್ಲಾಧ್ಯಕ್ಷ ಸಯ್ಯದ್ ಮುಜಿಬುಲ್ಲಾ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಪ್ರಮುಖ ಹಾಗೂ ಪ್ರಭಾವಿ ಅಲ್ಪಸಂಖ್ಯಾತ ನಾಯಕ ಸಚಿವ ಜಮೀರ್ ಅಹ್ಮದ್ ಖಾನ್ ಮತ್ತು ಉಲೇಮಗಳಿಗೆ  ಕೆಲವು ಕಾಂಗ್ರೆಸ್ ನಾಯಕರು ಅವಮಾನವಾಗುವಂತೆ ನಡೆದುಕೊಂಡಿದ್ದಾರೆ ಎಂದು ಆರೋಪಿಸಿದರು. ಈ ಘಟನೆ ಕೇವಲ ಜಮೀರ್ ಅಹ್ಮದ್ ಖಾನ್ ಅಥವಾ ಉಲೇಮಾಗಳಿಗೆ ಮಾಡಿದ ಅವಮಾನವಲ್ಲ, ಇಡೀ ಮುಸ್ಲಿಂ ಸಮುದಾಯದ ಸ್ವಾಭಿಮಾನಕ್ಕೆ ಧಕ್ಕೆ ತಂದಿರುವ ಘಟನೆ ಎಂದು ಅವರು ತಿಳಿಸಿದ್ದಾರೆ.

ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರಲು ಮುಸ್ಲಿಂ ಸಮುದಾಯದ ಬೆಂಬಲ ಪ್ರಮುಖ ಕಾರಣವಾಗಿದ್ದು, ಸಾಮಾಜಿಕ ನ್ಯಾಯದ ಅಡಿಯಲ್ಲಿ ಅಲ್ಪಸಂಖ್ಯಾತರಿಗೆ ಸೂಕ್ತ ಸ್ಥಾನಮಾನ ನೀಡಬೇಕಾಗಿತ್ತು. ಆದರೆ ದಾವಣಗೆರೆ ಉಪಚುನಾವಣೆಯ ಟಿಕೆಟ್ ವಿಚಾರದಲ್ಲಿ ಅಲ್ಪಸಂಖ್ಯಾತರಿಗೆ ನ್ಯಾಯ ದೊರಕಿಲ್ಲ ಎಂದು ಅವರು ಆರೋಪಿಸಿದರು.

ಸಚಿವ ಜಮೀರ್ ಅಹ್ಮದ್ ಖಾನ್ ಹಾಗೂ ಉಲೇಮಾಗಳು ದಾವಣಗೆರೆ ಉಪಚುನಾವಣೆಯಲ್ಲಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡುವಂತೆ ಕಾಂಗ್ರೆಸ್ ಪಕ್ಷಕ್ಕೆ ಒತ್ತಾಯಿಸಿದ್ದರು. ಸಮಾಜದ ಪರವಾಗಿ ಸದಾ ದೃಢವಾಗಿ ನಿಂತಿರುವ ಅಲ್ಪಸಂಖ್ಯಾತರ ಆಶಾಕಿರಣ ಹಾಗೂ ಅಗ್ರಗಣ್ಯ ನಾಯಕ ಜಮೀರ್ ಅಹ್ಮದ್ ಖಾನ್ ಅವರ ಬದ್ಧತೆಯನ್ನು ವೇದಿಕೆ ಅಭಿನಂದಿಸುತ್ತದೆ ಎಂದು ಮುಜಿಬುಲ್ಲಾ ಹೇಳಿದರು.

ಇದೇ ಸಂದರ್ಭದಲ್ಲಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಕೆಲ ನಾಯಕರು ಜಮೀರ್ ಅಹ್ಮದ್ ಖಾನ್ ಮತ್ತು ಉಲೇಮಾಗಳಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದರು. ಮುಸ್ಲಿಂ ಸಮುದಾಯದ ಮತಗಳಿಂದ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷವು ಅಲ್ಪಸಂಖ್ಯಾತರಿಗೆ ನ್ಯಾಯ ನೀಡದೆ ಅನ್ಯಾಯ ಮತ್ತು ಅವಮಾನ ಮಾಡುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಜಮೀರ್ ಅಹ್ಮದ್ ಖಾನ್ ಅವರ ಜನಪ್ರಿಯತೆ ಮತ್ತು ಏಳಿಗೆಯನ್ನು ಸಹಿಸದ ಕೆಲ ಕಾಂಗ್ರೆಸ್ ನಾಯಕರು ಮುಸ್ಲಿಂ ನಾಯಕತ್ವದಲ್ಲಿ ಭಿನ್ನಾಭಿಪ್ರಾಯ ಸೃಷ್ಟಿಸಿ ಅದನ್ನು ದುರ್ಬಲಗೊಳಿಸುವ ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ಅವರು ಆರೋಪಿಸಿದರು. ಈ ಎಲ್ಲ ಬೆಳವಣಿಗೆಗಳನ್ನು ಗಮನಿಸುತ್ತಿರುವ ಮುಸ್ಲಿಂ ಸಮಾಜದ ಸಹನೆಯ ಕಟ್ಟೆ ಒಡೆದಿದ್ದು, ದಾವಣಗೆರೆ ಉಪಚುನಾವಣೆಯಲ್ಲಿಯೇ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಉತ್ತರ ಸಿಗಲಿದೆ. ಈ ಉಪಚುನಾವಣೆಯ ಫಲಿತಾಂಶ ಸರ್ಕಾರದ ಮೇಲೆ ತಕ್ಷಣದ ಪರಿಣಾಮ ಬೀರುವುದಿಲ್ಲದಿರಬಹುದು, ಆದರೆ ಮುಂದಿನ ಸಾರ್ವತ್ರಿಕ ಚುನಾವಣೆಯ ಮೇಲೆ ಖಂಡಿತ ಪರಿಣಾಮ ಬೀರುತ್ತದೆ ಎಂದು ಅವರು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಮಾಜ ಮುಖಂಡರಾದ ಮಹಮ್ಮದ್ ಸಾದಾತ್, ಎಂ.ಡಿ. ಇರ್ಷಾದ್, ಮಹಮ್ಮದ್ ಗೌಸ್, ನೂರುಲ್ಲ, ಅನ್ಸರ್ ಅಹಮದ್, ಮುಕ್ತಿಯಾರ್ ಅಹಮದ್, ಶಬುನ್ ಶರೀಫ್, ಎಂ.ಡಿ. ದಸ್ತಗೀರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವರದಿ: ಡಿ.ಪಿ ಅರವಿಂದ್‌

ಎಫ್‌7ನ್ಯೂಸ್‌ ಶಿವಮೊಗ್ಗ



Post a Comment

Previous Post Next Post