ಶಿವಮೊಗ್ಗದಲ್ಲಿ ರಾಜಕಾಲುವೆ ಭಪರ್ ಜೋನ್ ಅತಿಕ್ರಮಣ ಆರೋಪ : ‘ಚಂದ್ರಗಿರಿ ನರ್ಸಿಂಗ್ ಹೋಂ’ ಸೇರಿ ಕಟ್ಟಡಗಳ ತೆರವಿಗೆ ಕರವೇ ಸ್ವಾಭಿಮಾನಿ ಬಣ ಆಗ್ರಹ

7 ದಿನಗಳಲ್ಲಿ ಕ್ರಮ ಕೈಗೊಳ್ಳದಿದ್ದರೆ ಲೋಕಾಯುಕ್ತರಿಗೆ ದೂರು ಸಲ್ಲಿಸುವ ಎಚ್ಚರಿಕೆ


ಶಿವಮೊಗ್ಗ : ನಗರದ ಸವಳಂಗ ರಸ್ತೆ ಅಕ್ಕಮಹಾದೇವಿ ವೃತ್ತದ ಸಮೀಪದಲ್ಲಿರುವ ರಾಜಕಾಲುವೆಯ ಭಪರ್ ಜೋನ್ ವ್ಯಾಪ್ತಿಯ ಜಾಗವನ್ನು ಅತಿಕ್ರಮಿಸಿಕೊಂಡು ನಿರ್ಮಿಸಿರುವ ಭಾರಿ ಕಟ್ಟಡಗಳನ್ನು ತಕ್ಷಣ ತೆರವುಗೊಳಿಸುವಂತೆ ಹಾಗೂ ನಿಯಮ ಉಲ್ಲಂಘಿಸಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ನರ್ಸಿಂಗ್ ಹೋಂಗಳ ಪರವಾನಿಗೆಗಳನ್ನು ರದ್ದುಪಡಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಸ್ವಾಭಿಮಾನಿ ಬಣ ಆಗ್ರಹಿಸಿದೆ.

ಈ ಕುರಿತು ಜಿಲ್ಲಾಧಿಕಾರಿಗಳು, ಮಹಾನಗರ ಪಾಲಿಕೆಯ ಆಯುಕ್ತರು, ಜಿಲ್ಲಾ ಆರೋಗ್ಯಾಧಿಕಾರಿಗಳು ಹಾಗೂ ಮೆಸ್ಕಾಂ ಎಕ್ಸಿಕ್ಯೂಟಿವ್ ಇಂಜಿನಿಯರ್ ಅವರಿಗೆ ಮನವಿ ಸಲ್ಲಿಸಿರುವ ಕರವೇ ಸ್ವಾಭಿಮಾನಿ ಬಣ, ನಗರದ ಮಧ್ಯಭಾಗದಲ್ಲಿ ಹರಿಯುವ ರಾಜಕಾಲುವೆಯ ಭಪರ್ ಜೋನ್ ವ್ಯಾಪ್ತಿಯ ಸುಮಾರು 2 ಕಿಲೋಮೀಟರ್ ಪ್ರದೇಶದಲ್ಲಿ ಅನೇಕ ಕಟ್ಟಡಗಳು ಅಕ್ರಮವಾಗಿ ನಿರ್ಮಾಣಗೊಂಡಿವೆ ಎಂದು ಆರೋಪಿಸಿದೆ.

ಕರವೇ ಸ್ವಾಭಿಮಾನಿ ಬಣದ ಪ್ರಕಾರ, ಈ ಅತಿಕ್ರಮಣದಿಂದ ನೈಸರ್ಗಿಕ ಮಳೆನೀರಿನ ಹರಿವಿಗೆ ಅಡ್ಡಿಯಾಗಿದ್ದು, ಜೊತೆಗೆ ಘನ ತ್ಯಾಜ್ಯ ಹಾಗೂ ಒಳಚರಂಡಿ ನೀರನ್ನು ರಾಜಕಾಲುವೆಗೆ ಸಂಪರ್ಕಿಸಲಾಗುತ್ತಿರುವುದರಿಂದ ಪರಿಸರದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಈ ಹಿನ್ನೆಲೆಯಲ್ಲಿ ಭಪರ್ ಜೋನ್ ವ್ಯಾಪ್ತಿಯಲ್ಲಿರುವ ಎಲ್ಲಾ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಿ, ಅವುಗಳಿಗೆ ನೀಡಿರುವ ಕಟ್ಟಡ ಪರವಾನಿಗೆಗಳು ಹಾಗೂ ಕಂದಾಯ ನಿಗದಿಗಳನ್ನು ರದ್ದುಪಡಿಸಬೇಕೆಂದು ಆಗ್ರಹಿಸಲಾಗಿದೆ.

ಅಕ್ಕಮಹಾದೇವಿ ವೃತ್ತದ ಬಳಿಯಿರುವ ಕಟ್ಟಡವೊಂದರಲ್ಲಿ ಕಾರ್ಯನಿರ್ವಹಿಸುತ್ತಿರುವ “ಚಂದ್ರಗಿರಿ ನರ್ಸಿಂಗ್ ಹೋಂ” ಕುರಿತು ಸಹ ಪ್ರಶ್ನೆ ಎತ್ತಿರುವ ಕರವೇ ಸ್ವಾಭಿಮಾನಿ ಬಣ, ರಾಜಕಾಲುವೆಯ ಭಪರ್ ಜೋನ್ ಜಾಗವನ್ನು ಅತಿಕ್ರಮಿಸಿಕೊಂಡಿರುವ ಕಟ್ಟಡದಲ್ಲಿ ನರ್ಸಿಂಗ್ ಹೋಂ ನಡೆಸಲು ನೀಡಿರುವ ಕೆಪಿಎಂಇ (ಕರ್ನಾಟಕ ಪ್ರೈವೆಟ್ ಮೆಡಿಕಲ್ ಎಸ್ಟಾಬ್ಲಿಷ್ಮೆಂಟ್ ಆಕ್ಟ್) ನೋಂದಣಿ ಸಂಪೂರ್ಣವಾಗಿ ನಿಯಮಬಾಹಿರ ಎಂದು ಆರೋಪಿಸಿದೆ.

ರೋಗಿಗಳ ಸುರಕ್ಷತೆ ಹಾಗೂ ಗುಣಮಟ್ಟದ ಚಿಕಿತ್ಸೆಯನ್ನು ಖಾತ್ರಿಪಡಿಸುವ ಉದ್ದೇಶದಿಂದ ಕೆಪಿಎಂಇ ಕಾಯ್ದೆ ಜಾರಿಗೆ ಬಂದಿದ್ದು, ಆದರೂ ನೈಸರ್ಗಿಕ ಮಳೆನೀರಿನ ಹರಿವಿಗೆ ಅಡ್ಡಿಯಾಗಿರುವ ಹಾಗೂ ಅಕ್ರಮವಾಗಿ ನಿರ್ಮಿಸಿರುವ ಕಟ್ಟಡದಲ್ಲಿ ನರ್ಸಿಂಗ್ ಹೋಂ ನಡೆಸಲು ಅನುಮತಿ ನೀಡಿರುವುದು ಗಂಭೀರ ವಿಷಯವಾಗಿದೆ ಎಂದು ಕರವೇ ಸ್ವಾಭಿಮಾನಿ ಬಣ ಹೇಳಿದೆ. ಇದರಿಂದ ರೋಗಿಗಳ ಸುರಕ್ಷತೆಗೂ ಧಕ್ಕೆಯಾಗುವ ಸಾಧ್ಯತೆ ಇರುವುದರಿಂದ ನರ್ಸಿಂಗ್ ಹೋಂ ಪರವಾನಿಗೆಯನ್ನು ತಕ್ಷಣ ರದ್ದುಪಡಿಸಿ, ರೋಗಿಗಳನ್ನು ಸುರಕ್ಷಿತ ಕಟ್ಟಡಗಳಿಗೆ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಲಾಗಿದೆ.

ಇದಲ್ಲದೆ, ರಾಜಕಾಲುವೆಯ ಭಪರ್ ಜೋನ್ ಜಾಗದಲ್ಲಿ ಅನೇಕ ಕಮರ್ಷಿಯಲ್ ಕಟ್ಟಡಗಳು, ಕಾಂಪ್ಲೆಕ್ಸ್‌ಗಳು, ಅಪಾರ್ಟ್‌ಮೆಂಟ್‌ಗಳು ಹಾಗೂ ಖಾಸಗಿ ನರ್ಸಿಂಗ್ ಹೋಂಗಳು ನಿರ್ಮಾಣಗೊಂಡಿರುವುದಾಗಿ ಆರೋಪಿಸಿ, ಅವುಗಳಿಗೆ ನೀಡಿರುವ ಕಟ್ಟಡ ಪರವಾನಿಗೆ ಹಾಗೂ ಕಂದಾಯ ನಿಗದಿಗಳನ್ನು ಕೂಡಲೇ ರದ್ದುಪಡಿಸಬೇಕು ಎಂದು ಕರವೇ ಸ್ವಾಭಿಮಾನಿ ಬಣ ಆಗ್ರಹಿಸಿದೆ.

ಮೆಸ್ಕಾಂ ಇಲಾಖೆಯು ನಿಯಮಗಳನ್ನು ಪರಿಶೀಲಿಸದೆ ಇಂತಹ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ನೀಡಿರುವುದೂ ಗಂಭೀರ ತಪ್ಪಾಗಿದ್ದು, ಮೊದಲು ಅಕ್ರಮವಾಗಿ ನಿರ್ಮಿಸಿರುವ ಭಾರಿ ಕಟ್ಟಡಗಳು ಹಾಗೂ ಖಾಸಗಿ ನರ್ಸಿಂಗ್ ಹೋಂಗಳಿಗೆ ನೀಡಿರುವ ವಿದ್ಯುತ್ ಸಂಪರ್ಕವನ್ನು ಸ್ಥಗಿತಗೊಳಿಸಬೇಕು ಎಂದು ಸಂಘಟನೆ ಒತ್ತಾಯಿಸಿದೆ.

ಇನ್ನೊಂದೆಡೆ, ರಾಜಕಾಲುವೆಯ ಭಪರ್ ಜೋನ್ ವ್ಯಾಪ್ತಿಯಲ್ಲಿ ವಾಸಿಸುವ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳ ಮನೆಗಳು ತೆರವುಗೊಳ್ಳುವ ಪರಿಸ್ಥಿತಿ ಎದುರಾದರೆ, ಅಂತಹ ಕುಟುಂಬಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ನಂತರ ತೆರವು ಕ್ರಮ ಕೈಗೊಳ್ಳಬೇಕು ಎಂದು ಕರವೇ ಸ್ವಾಭಿಮಾನಿ ಬಣ ಮನವಿ ಮಾಡಿದೆ.

ಈ ಮನವಿ ಸಲ್ಲಿಸಿದ ದಿನಾಂಕದಿಂದ ಏಳು ದಿನಗಳೊಳಗೆ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಜಿಲ್ಲಾಧಿಕಾರಿಗಳು, ಮಹಾನಗರ ಪಾಲಿಕೆಯ ಆಯುಕ್ತರು, ಜಿಲ್ಲಾ ಆರೋಗ್ಯಾಧಿಕಾರಿಗಳು ಹಾಗೂ ಮೆಸ್ಕಾಂ ಎಕ್ಸಿಕ್ಯೂಟಿವ್ ಇಂಜಿನಿಯರ್‌ಗಳನ್ನು ಪಾರ್ಟಿಗಳನ್ನಾಗಿ ಮಾಡಿ ಕರ್ನಾಟಕ ಲೋಕಾಯುಕ್ತರ ಕಚೇರಿಗೆ ತನಿಖೆಗಾಗಿ ದೂರು ಸಲ್ಲಿಸಲಾಗುವುದು ಎಂದು ಕರವೇ ಸ್ವಾಭಿಮಾನಿ ಬಣ ಎಚ್ಚರಿಕೆ ನೀಡಿದೆ.




Post a Comment

Previous Post Next Post