ಶಿವಮೊಗ್ಗದಲ್ಲಿ ರಾಜಕಾಲುವೆ ಸ್ವಚ್ಛತೆ ನಿರ್ಲಕ್ಷ್ಯ: ಮನೆಗಳಿಗೆ ನುಗ್ಗಿದ ಕೊಳಚೆ ನೀರು, ಪಾಲಿಕೆಗೆ ಎಚ್ಚರಿಕೆ

ಟಿಪ್ಪು ನಗರ ಸೇರಿದಂತೆ ಹಲವು ವಾರ್ಡ್‌ಗಳಲ್ಲಿ ಹೂಳು ತೆಗೆಯಲು ಆಗ್ರಹ – ಇಲ್ಲದಿದ್ದರೆ ಬೃಹತ್‌ ಹೋರಾಟದ ಎಚ್ಚರಿಕೆ



ಶಿವಮೊಗ್ಗ: ನಗರದ ವಿವಿಧ ವಾರ್ಡ್‌ಗಳಲ್ಲಿ ರಾಜಕಾಲುವೆಗಳ ಸ್ವಚ್ಛತೆ ಮತ್ತು ಹೂಳು ತೆರವು ಕಾರ್ಯಗಳನ್ನು ಹಲವು ವರ್ಷಗಳಿಂದ ಸಮರ್ಪಕವಾಗಿ ನಡೆಸದೆ ಇರುವುದರಿಂದ ಸ್ಥಳೀಯ ನಿವಾಸಿಗಳು ಸಂಕಷ್ಟಕ್ಕೆ ಸಿಲುಕಿರುವ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ನಗರದ ನಾಗರಿಕರು ಮಹಾನಗರ ಪಾಲಿಕೆಯ ಆಯುಕ್ತರಿಗೆ ಮನವಿ ಸಲ್ಲಿಸಿ ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ನಗರದ ಜನಜಂಗುಳಿ ಪ್ರದೇಶಗಳಲ್ಲಿ ಹಾದು ಹೋಗುವ ರಾಜಕಾಲುವೆಗಳನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದರಿಂದ ಎರಡು ದಿನಗಳ ಹಿಂದೆ ರಾತ್ರಿ ವೇಳೆ ಸುರಿದ ಧಾರಾಕಾರ ಮಳೆಯಿಂದಾಗಿ ಹಲವಾರು ಮನೆಗಳಿಗೆ ಕೊಳಚೆ ಚರಂಡಿ ನೀರು ನುಗ್ಗಿದೆ ಎಂದು ನಿವಾಸಿಗಳು ದೂರಿದ್ದಾರೆ. ಈ ಘಟನೆಗಳಿಂದ ಮನೆಗಳಲ್ಲಿ ಇರುವ ಸಾಮಗ್ರಿಗಳು ಹಾನಿಗೊಂಡು ಲಕ್ಷಾಂತರ ರೂಪಾಯಿಗಳ ನಷ್ಟ ಉಂಟಾಗಿದೆ ಎಂದು ತಿಳಿಸಲಾಗಿದೆ.


ವಿಶೇಷವಾಗಿ ವಾರ್ಡ್‌ ನಂ. 32ರ ಟಿಪ್ಪು ನಗರ ಹಾಗೂ ವಾರ್ಡ್‌ ನಂ. 28ರ ಆರ್‌.ಎಂ‌.ಎಲ್‌. ನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿ ರಾಜಕಾಲುವೆಗಳು ಹೂಳು ತುಂಬಿಕೊಂಡಿದ್ದು, ನೀರು ಸರಿಯಾಗಿ ಹರಿಯದ ಪರಿಸ್ಥಿತಿ ಉಂಟಾಗಿದೆ. ಇದರಿಂದ ಮಳೆಯ ಸಮಯದಲ್ಲಿ ನೀರು ರಸ್ತೆಗಳಿಗೂ ಹಾಗೂ ಮನೆಗಳಿಗೂ ನುಗ್ಗಿ ಜನರು ಪರದಾಡುವಂತಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಟಿಪ್ಪು ನಗರದ ಕೆರೆ ಅಂಗಳ ಭಾಗದಲ್ಲಿ ಹರಿಯುವ ರಾಜಕಾಲುವೆ ತುಂಬಿ ಹರಿದು ಬಡ ಕುಟುಂಬಗಳ ಮನೆಗಳು ಮತ್ತು ಗುಡಿಸಲುಗಳಿಗೆ ಚರಂಡಿ ನೀರು ನುಗ್ಗಿ ಅವಾಂತರ ಉಂಟಾಗಿದೆ. ಈ ಪ್ರದೇಶದಲ್ಲಿ ಹಾನಿಗೊಳಗಾದ ಕುಟುಂಬಗಳಿಗೆ ತಕ್ಷಣ ಸರ್ವೇ ನಡೆಸಿ ಸೂಕ್ತ ಪರಿಹಾರವನ್ನು ಮಹಾನಗರ ಪಾಲಿಕೆಯಿಂದ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ರಾಜಕಾಲುವೆ ಹಾಗೂ ಚರಂಡಿಗಳ ಹೂಳು ತೆಗೆಯುವ ಹಾಗೂ ಸ್ವಚ್ಛತೆ ಕಾರ್ಯಗಳನ್ನು ಕೈಗೊಳ್ಳಬೇಕು. ಇಲ್ಲವಾದರೆ ಮಹಾನಗರ ಪಾಲಿಕೆಯ ಆವರಣದಲ್ಲಿ ಅಧಿಕಾರಿಗಳ ವಿರುದ್ಧ ಬೃಹತ್‌ ಹೋರಾಟ ನಡೆಸಲಾಗುವುದು ಎಂದು ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.

ನಗರದ ಜನರ ಮೂಲಭೂತ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿರುವುದು ಖಂಡನೀಯ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವರದಿ: ಡಿ.ಪಿ. ಅರವಿಂದ್‌




Post a Comment

Previous Post Next Post