ಉಪಲೋಕಾಯುಕ್ತ ನ್ಯಾ. ಕೆ.ಎನ್. ಫಣೀಂದ್ರ ಅವರ ಶಿವಮೊಗ್ಗ ಜಿಲ್ಲಾ ಭೇಟಿ

ಕರ್ನಾಟಕ ಉಪಲೋಕಾಯುಕ್ತ ನ್ಯಾ. ಕೆ.ಎನ್. ಫಣೀಂದ್ರ ಅವರ ಶಿವಮೊಗ್ಗ ಜಿಲ್ಲಾ ಭೇಟಿ – ಮಾರ್ಚ್ 18 ರಿಂದ 21‌




ಶಿವಮೊಗ್ಗ, ಮಾರ್ಚ್ 17 : ಕರ್ನಾಟಕ ಉಪಲೋಕಾಯುಕ್ತ ನ್ಯಾ. ಕೆ.ಎನ್. ಫಣೀಂದ್ರ ಅವರು ಮಾರ್ಚ್ 18ರಿಂದ 21ರವರೆಗೆ ಶಿವಮೊಗ್ಗ ಜಿಲ್ಲೆಗೆ ಭೇಟಿ ನೀಡಲಿದ್ದು, ಈ ಅವಧಿಯಲ್ಲಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸುವುದರ ಜೊತೆಗೆ, ವಿವಿಧ ಸಭೆ-ಸಮಾರಂಭ, ತರಬೇತಿ ಕಾರ್ಯಾಗಾರ ಮತ್ತು ಸಮಾಲೋಚನಾ ಸಭೆಗಳಲ್ಲಿ ಭಾಗವಹಿಸಲಿದ್ದಾರೆ.

ಭೇಟಿ ವಿವರಗಳು

ಉಪಲೋಕಾಯುಕ್ತರು ಮಾರ್ಚ್ 18ರಂದು ಸಂಜೆ 7.40ಕ್ಕೆ ಶಿವಮೊಗ್ಗಕ್ಕೆ ಆಗಮಿಸಿ ವಾಸ್ತವ್ಯ ಮಾಡಲಿದ್ದಾರೆ. ಮಾರ್ಚ್ 19ರಂದು ಬೆಳಿಗ್ಗೆ 10.00ರಿಂದ ಸಂಜೆ 5.00ರವರೆಗೆ, ನಗರದ ಕುವೆಂಪು ರಂಗಮಂದಿರದಲ್ಲಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸುವರು.

ಸಾರ್ವಜನಿಕರಿಗೆ ಯಾವುದೇ ಸರ್ಕಾರಿ ಅಧಿಕಾರಿಗಳಿಂದ ಅಥವಾ ನೌಕರರಿಂದ ಕಾನೂನುಬದ್ಧವಾಗಿ ಆಗಬೇಕಾದ ಕೆಲಸದಲ್ಲಿ ವಿಳಂಬವಾಗಿದ್ದರೆ, ನ್ಯಾಯಯುತವಾಗಿ ಮಾಡಿಕೊಡಬೇಕಾದ ಕಾರ್ಯಗಳಲ್ಲಿ ತೊಂದರೆ ಅನುಭವಿಸಿದ್ದರೆ, ಅಥವಾ ಇತರ ಯಾವುದೇ ದುರಾಡಳಿತ ಸಮಸ್ಯೆ ಎದುರಾಗಿದ್ದರೆ, ಪೀಡಿತ ನಾಗರಿಕರು ಅರ್ಜಿಯ ನಮೂನೆ 1 ಮತ್ತು 2 ರಲ್ಲಿ ಲಿಖಿತವಾಗಿ ತಮ್ಮ ದೂರುಗಳನ್ನು ಸಲ್ಲಿಸಬಹುದು. ಈ ಅರ್ಜಿಯೊಂದಿಗೆ ಸಂಬಂಧಿತ ದಾಖಲೆಗಳು ಮತ್ತು ಸಾಕ್ಷಾಧಾರಗಳನ್ನು ಲಗತ್ತಿಸಿ ನೀಡಲು ಸಲಹೆ ನೀಡಲಾಗಿದೆ.

ವಿಚಾರಣೆ ಹಾಗೂ ಸಮಾಲೋಚನೆ – ಮಾರ್ಚ್ 20

ಮಾರ್ಚ್ 20ರಂದು ಬೆಳಿಗ್ಗೆ 11.00 ರಿಂದ 11.30ರವರೆಗೆ ಶಿವಮೊಗ್ಗ ಜಿಲ್ಲಾ ಪಂಚಾಯಿತಿಯ ನಜೀರ್ ಸಾಬ್ ಸಭಾಂಗಣದಲ್ಲಿ ಲೋಕಾಯುಕ್ತ ಸಂಸ್ಥೆಯಲ್ಲಿ ದಾಖಲಾಗಿರುವ ಪ್ರಕರಣಗಳ ಕುರಿತು ವಿಚಾರಣೆ ನಡೆಯಲಿದೆ. ಈ ವೇಳೆ ತನಿಖೆಗೆ ಬಾಕಿ ಇರುವ ಪ್ರಕರಣಗಳನ್ನು ಪರಿಹರಿಸುವ ಬಗ್ಗೆ ದೂರುದಾರರು ಮತ್ತು ಎದುರುದಾರರ ಸಮ್ಮುಖದಲ್ಲಿ ವಿಚಾರಣೆ ನಡೆಸಲಾಗುವುದು.

ಇದರಲ್ಲಿ ದೂರುದಾರರು ಹಾಗೂ ಎದುರುದಾರರು ಹಾಜರಾಗಿ ತಮ್ಮ ವಾದಗಳನ್ನು ಮಂಡಿಸಬಹುದಾಗಿದೆ. ಈ ಅವಕಾಶವನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳುವಂತೆ ಶಿವಮೊಗ್ಗ ಲೋಕಾಯುಕ್ತ ಇಲಾಖೆಯ ಪೊಲೀಸ್ ಅಧೀಕ್ಷಕ ಮಂಜುನಾಥ ಚೌದರಿ. ಎಂ.ಹೆಚ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಾರ್ವಜನಿಕರಿಗೆ ಮಹತ್ವದ ಅವಕಾಶ

ಈ ಜಿಲ್ಲಾ ಭೇಟಿಯ ಮೂಲಕ, ಸರ್ಕಾರಿ ಅಧಿಕಾರಿಗಳಿಂದ ಆಗುವ ಅಕ್ರಮಗಳು, ಭ್ರಷ್ಟಾಚಾರ, ಕಾನೂನುಬಾಹಿರ ತೊಡಕುಗಳು, ಹಾಗೂ ಸಾರ್ವಜನಿಕ ಸೇವೆಗಳ ತೊಡಕುಗಳ ಬಗ್ಗೆ ನೇರವಾಗಿ ಉಪಲೋಕಾಯುಕ್ತರ ಬಳಿ ದೂರು ಸಲ್ಲಿಸುವ ಅವಕಾಶ ದೊರಕಲಿದೆ. ನ್ಯಾಯ ಹಾಗೂ ಸುಧಾರಣೆಗೆ ಪೂರಕವಾಗಿರುವ ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕೋರಲಾಗಿದೆ.

ವರದಿ:ಡಿ.ಪಿ ಅರವಿಂದ್



Post a Comment

Previous Post Next Post