ಯುವನಿಧಿ ಯೋಜನೆಯ ಅನುಷ್ಠಾನ ಕುರಿತ ಪ್ರಶ್ನೆ – ವಿಧಾನ ಪರಿಷತ್‌ನಲ್ಲಿ ಡಿ.ಎಸ್. ಅರುಣ್ ಸಮಾಲೋಚನೆ
ಬೆಂಗಳೂರು, ಮಾರ್ಚ್ 17: ಇಂದು ವಿಧಾನಪರಿಷತ್ತಿನ ಬಜೆಟ್ ಅಧಿವೇಶನದಲ್ಲಿ, ಮಾನ್ಯ ವಿಧಾನ ಪರಿಷತ್ ಸದಸ್ಯರು ಹಾಗೂ ರಾಜ್ಯ ಬಿಜೆಪಿ ಕಾರ್ಯದರ್ಶಿಗಳಾದ ಡಿ.ಎಸ್. ಅರುಣ್ ಅವರು ಯುವನಿಧಿ ಯೋಜನೆಯ ಅನುಷ್ಠಾನ ಕುರಿತು ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಸಚಿವರನ್ನು ಪ್ರಶ್ನಿಸಿದರು. ಅವರು ನಿರುದ್ಯೋಗ ಭತ್ಯೆಗೆ ನೊಂದಾಯಿಸಿದವರ ಸಂಖ್ಯೆ, ಇದುವರೆಗೆ ನೀಡಿದ ಭತ್ಯೆಯ ಪ್ರಮಾಣ, ಬಾಕಿ ಉಳಿದಿರುವ ಅರ್ಜಿಗಳ ಸ್ಥಿತಿ ಹಾಗೂ 2024-25 ನೇ ಹಣಕಾಸಿನ ವರ್ಷದಲ್ಲಿ ಕೌಶಲ್ಯ ಅಭಿವೃದ್ಧಿ ಇಲಾಖೆಯಡಿ ಯುವಕರಿಗೆ ನೀಡಲಾದ ತರಬೇತಿ ಕುರಿತಂತೆ ಮಾಹಿತಿ ನೀಡುವಂತೆ ಸರ್ಕಾರವನ್ನು ಪ್ರಶ್ನಿಸಿದರು.
ಯೋಜನೆಯ ಅನುಷ್ಠಾನದಲ್ಲಿ ವಿಳಂಬ – ಪ್ರಶ್ನಿಸಿದ ಅರುಣ್
ಯುವನಿಧಿ ಯೋಜನೆ ಜಾರಿಗೆ ಮುನ್ನ, ಸರ್ಕಾರ 5.5 ಲಕ್ಷ ನಿರುದ್ಯೋಗಿಗಳಿಗೆ ರೂ. 450 ಕೋಟಿ ಮಂಜೂರು ಮಾಡುವ ಗುರಿ ಹೊಂದಿತ್ತು. ಆದರೆ ಇದುವರೆಗೆ 50% ಗುರಿಯನ್ನೂ ತಲುಪಲು ಸಾಧ್ಯವಾಗಿಲ್ಲ ಎಂಬುದನ್ನು ಉಲ್ಲೇಖಿಸಿ, ಯಾಕೆ ಈ ಯೋಜನೆಯ ಪ್ರಗತಿ ನಿರೀಕ್ಷಿತ ಮಟ್ಟವನ್ನು ತಲುಪಲಿಲ್ಲ? ಎಂದು ಸಚಿವರನ್ನು ಪ್ರಶ್ನಿಸಿದರು.
ಅವರು ಯೋಜನೆಯ ಬಗ್ಗೆ ಸರಿಯಾದ ಪ್ರಚಾರ ಇಲ್ಲದಿರುವುದು ಮತ್ತು ಅರ್ಜಿದಾರರು ಸಮರ್ಪಕ ಮಾಹಿತಿ ಪಡೆಯದಿರುವುದು ಪ್ರಮುಖ ಸಮಸ್ಯೆಗಳಾಗಿವೆ ಎಂದು ಹೇಳಿದರು. ಅರ್ಜಿ ಸಲ್ಲಿಸುವ ವಿಧಾನ, ದಾಖಲೆಗಳ ಅಗತ್ಯತೆ ಹಾಗೂ ಅರ್ಜಿ ಸ್ಥಿತಿಯ ಕುರಿತು ಸ್ಪಷ್ಟ ಮಾಹಿತಿ ನೀಡದ ಕಾರಣ, ಹಲವಾರು ಅರ್ಹ ಯುವಕರ ಅರ್ಜಿಗಳನ್ನು ನಿರಾಕರಿಸಲಾಗುತ್ತಿದೆ. ಜೊತೆಗೆ, ಅರ್ಜಿದಾರರಿಗೆ ನೆರವಾಗುವ ಸೂಕ್ತ ಸಹಾಯ ವ್ಯವಸ್ಥೆಯ ಕೊರತೆ ಇರುವುದನ್ನು ಶಾಸಕರು ಒತ್ತಿಹೇಳಿದರು.
ಯೋಜನೆಯ ಫಲಾನುಭವಿಗಳ ಸಮರ್ಪಕ ಮೌಲ್ಯಮಾಪನ ಅಗತ್ಯ
ಯೋಜನೆಯು ನಿಜವಾದ ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಕ್ರಮ ಕೈಗೊಳ್ಳಬೇಕು. ಇದಕ್ಕಾಗಿ, ಅರ್ಜಿದಾರರ ಪರಿಶೀಲನೆ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸಿ, ಅನರ್ಹರಿಗೆ ಲಾಭ ನೀಡುವ ಸ್ಥಿತಿಯನ್ನು ತಪ್ಪಿಸಬೇಕು. ಅನರ್ಹ ವ್ಯಕ್ತಿಗಳು ಈ ಯೋಜನೆಯಿಂದ ಲಾಭ ಪಡೆಯುತ್ತಿರುವುದೇನಾದರೂ ಕಂಡುಬಂದರೆ, ಆ ನಿಧಿಗಳನ್ನು ಹೊಸದಾಗಿ ಗುರುತಿಸಲಾದ ಅರ್ಹ ಫಲಾನುಭವಿಗಳಿಗೆ ಮರುನಿರ್ದೇಶಿಸಬೇಕು ಎಂದು ಅವರು ಸಲಹೆ ನೀಡಿದರು.
ಗ್ರಾಮೀಣ ಭಾಗದ ಯುವಕರಿಗೆ ಬೆಂಬಲ ಕಡಿಮೆ
ಗ್ರಾಮೀಣ ಭಾಗದ ನಿರುದ್ಯೋಗಿ ಯುವಕರಿಗೆ ಯೋಜನೆಯ ಸೌಲಭ್ಯಗಳ ಬಗ್ಗೆ ಸಮರ್ಪಕ ಮಾಹಿತಿ ತಲುಪದೆ ಇರುವುದರಿಂದ, ಈ ಯೋಜನೆ ಅರ್ಥಪೂರ್ಣವಾಗಿ ಜಾರಿಗೆ ಬರುವುದರಲ್ಲಿ ಸಮಸ್ಯೆ ಎದುರಾಗುತ್ತಿದೆ. ಈ ಬಗ್ಗೆ ಸರ್ಕಾರ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಶಾಸಕರು ಒತ್ತಾಯಿಸಿದರು.
ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ಸಮಸ್ಯೆ – ಮಾರ್ಕ್ಸ್‌ಕಾರ್ಡ್ ತೊಂದರೆ
ಯೋಜನೆಗೆ ಅರ್ಜಿ ಸಲ್ಲಿಸಲು ಕುವೆಂಪು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಮಾರ್ಕ್ಸ್‌ಕಾರ್ಡ್ ಸಮಸ್ಯೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಮಾರ್ಕ್ಸ್‌ಕಾರ್ಡ್ ನೀಡದಿರುವ ಕಾರಣ, ಅನೇಕ ವಿದ್ಯಾರ್ಥಿಗಳು ಯುವನಿಧಿ ಯೋಜನೆಯ ಪ್ರಯೋಜನ ಪಡೆಯಲು ಸಾಧ್ಯವಾಗುತ್ತಿಲ್ಲ. ಈ ತಾಂತ್ರಿಕ ದೋಷಗಳನ್ನು ಸರಿಪಡಿಸಲು ಹಾಗೂ ಅರ್ಜಿಗಳ ಪರಿಶೀಲನೆ ಪ್ರಕ್ರಿಯೆ ವಿಳಂಬವಾಗದಂತೆ ನೋಡಿಕೊಳ್ಳುವಂತೆ ಸಚಿವರಿಗೆ ಶಾಸಕರು ಸಲಹೆ ನೀಡಿದರು.
ಸಚಿವರ ಸ್ಪಂದನೆ – ಮುಂದಿನ ಗುರಿ 10 ಲಕ್ಷ ಫಲಾನುಭವಿಗಳು
ಸದ್ಯ, ಯುವನಿಧಿ ಯೋಜನೆಯಡಿ ಲಾಭ ಪಡೆದವರ ಬಗ್ಗೆ ಸಚಿವರು ವಿವರ ನೀಡಿದ್ದು, ಮುಂದಿನ ದಿನಗಳಲ್ಲಿ 10 ಲಕ್ಷಕ್ಕೂ ಅಧಿಕ ನಿರುದ್ಯೋಗಿಗಳಿಗೆ ನೆರವಾಗುವ ಮಹತ್ವಾಕಾಂಕ್ಷಿ ಯೋಜನೆಗಳಿದ್ದು, ಈ ಸಲಹೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುವುದಾಗಿ ತಿಳಿಸಿದರು.
ವರದಿ: ಡಿ.ಪಿ. ಅರವಿಂದ್

