ಈದ್ ಮೀಲಾದ್–ಗಣೇಶ ಹಬ್ಬದ ಹಿನ್ನೆಲೆ ಶಾಂತಿನಗರದಲ್ಲಿ ಶಾಂತಿ ಸಭೆ

ಈದ್ ಮೀಲಾದ್–ಗಣೇಶ ಹಬ್ಬದ ಹಿನ್ನೆಲೆ ಶಾಂತಿನಗರದಲ್ಲಿ ಶಾಂತಿ ಸಭೆ

ಶಿವಮೊಗ್ಗ: ಈದ್ ಮೀಲಾದ್ ಹಾಗೂ ಗಣೇಶ ಹಬ್ಬದ ಪ್ರಯುಕ್ತ ನಗರದ ಶಾಂತಿನಗರ ರಾಗಿಗುಡ್ಡದಲ್ಲಿ ಶಾಂತಿ ಸಭೆಯನ್ನು ಆಯೋಜಿಸಲಾಗಿತ್ತು. ವಿವಿಧ ಸಮಾಜಗಳ ಮುಖಂಡರು ಹಾಗೂ ಸಾರ್ವಜನಿಕರು ಭಾಗವಹಿಸಿ ಸೌಹಾರ್ದತೆ, ಕಾನೂನು ಪಾಲನೆ ಮತ್ತು ಶಾಂತಿಯುತ ವಾತಾವರಣ ನಿರ್ಮಾಣದ ಕುರಿತು ಚರ್ಚಿಸಿದರು.

ಶಾಂತಿನಗರಕ್ಕೆ ಮೊದಲ ಬಾರಿಗೆ ಆಗಮಿಸಿದ ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್ ಬಿ. ಅವರನ್ನು ಶಾಂತಿನಗರದ ಜನತೆಯ ಪರವಾಗಿ ಶಹಾಬುದ್ದಿನ್ ಬಾಬು ಅವರ ನೇತೃತ್ವದಲ್ಲಿ ಮುಖಂಡರು ಆತ್ಮೀಯವಾಗಿ ಸ್ವಾಗತಿಸಿದರು. ನಾಗರಾಜಣ್ಣ, ನೂರ್ ಮಸೀದಿ ಅಧ್ಯಕ್ಷ ಭಾಷಾಸಾಬ್ ಹುಣಸಘಟ್ಟ, ವಕೀಲ ರಾಮಚಂದ್ರ, ಶಾಂತಿನಗರ ನಾಗರಿಕ ಹಕ್ಕುಗಳ ವೇದಿಕೆ ಅಧ್ಯಕ್ಷ ಸಯ್ಯದ್ ಮುಜಿಬುಲ್ಲ, ಬಸವರಾಜ್, ಮಹಾನಗರಪಾಲಿಕೆ ಸದಸ್ಯ ಧೀರರಾಜ್ ಹೊನ್ನವಿಲೆ ಸೇರಿದಂತೆ ಹಲವರು ಹೂಗುಚ್ಚ ನೀಡಿ ಅಭಿನಂದಿಸಿದರು.

ಸಭೆಯಲ್ಲಿ ಮಾತನಾಡಿದ ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್ ಬಿ., ಸೌಹಾರ್ದ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರ ಸಹಕಾರವೂ ಅತ್ಯಮೂಲ್ಯ. ಎಲ್ಲರೂ ಅನ್ಯೋನ್ಯತೆಯಿಂದ ಕೂಡಿ ಬಾಳುವ ಮೂಲಕ ಶಾಂತಿ ಮತ್ತು ಸಾಮರಸ್ಯ ಕಾಪಾಡಬೇಕು ಎಂದು ಕರೆ ನೀಡಿದರು.

ಡಿವೈಎಸ್ಪಿ ಸಂಜೀವಕುಮಾರ್ ಮಾತನಾಡಿ, ನಶೆಮುಕ್ತ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು. ಶಾಂತಿನಗರವನ್ನು ಸಮೃದ್ಧ ಹಾಗೂ ಮಾದರಿ ಶಾಂತಿನಗರವನ್ನಾಗಿ ರೂಪಿಸಲು ಸಾರ್ವಜನಿಕರ ಸಹಕಾರ ಅಗತ್ಯ ಎಂದರು.

ಸಿಪಿಐ ರಾಘವೇಂದ್ರ ಖಂಡಿಕೆ ಮಾತನಾಡಿ, ಪೊಲೀಸ್ ಇಲಾಖೆ ಮತ್ತು ಸಾರ್ವಜನಿಕರು ಒಗ್ಗಟ್ಟಾಗಿ ಸಮಾಜಘಾತುಕ ಶಕ್ತಿಗಳ ವಿರುದ್ಧ ಕಾರ್ಯನಿರ್ವಹಿಸಿದಾಗ ಮಾತ್ರ ಶಾಂತಿಯುತ ಹಾಗೂ ಸದೃಢ ಸಮಾಜ ನಿರ್ಮಾಣ ಸಾಧ್ಯ. ಪ್ರತಿಯೊಬ್ಬರೂ ಕಾನೂನು ಹಾಗೂ ತಮ್ಮ ಸಾಮಾಜಿಕ ಜವಾಬ್ದಾರಿಗಳನ್ನು ಅರಿತುಕೊಳ್ಳಬೇಕು ಎಂದು ತಿಳಿಸಿದರು.

ಸಭೆಯಲ್ಲಿ ವಿವಿಧ ಸಮಾಜಗಳ ಮುಖಂಡರು, ಸಾರ್ವಜನಿಕರು ತಮ್ಮ ಅಭಿಪ್ರಾಯ ಹಾಗೂ ಸಲಹೆಗಳನ್ನು ಹಂಚಿಕೊಂಡರು. ಗ್ರಾಮಾಂತರ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಕಲ್ಲನಗೌಡ್ರು, ನಿರಂಜನ್, ನವಾಜ್ ಸೇರಿದಂತೆ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.

ವರದಿ: ಡಿ.ಪಿ. ಅರವಿಂದ್ | F7 NEWS

Post a Comment

Previous Post Next Post