ಶಾಂತಿನಗರ ನಾಗರೀಕ ಹಕ್ಕುಗಳ ವೇದಿಕೆಯಿಂದ ಮಹಾನಗರ ಪಾಲಿಕೆ ಆಯುಕ್ತರಿಗೆ ಅಭಿನಂದನೆ

ಶಾಂತಿನಗರ ನಾಗರೀಕ ಹಕ್ಕುಗಳ ವೇದಿಕೆಯಿಂದ ಮಹಾನಗರ ಪಾಲಿಕೆ ಆಯುಕ್ತರಿಗೆ ಅಭಿನಂದನೆ

ಶಿವಮೊಗ್ಗ, ಮೇ 30: ಶಾಂತಿನಗರ (ರಾಗಿಗುಡ್ಡ) ಪ್ರದೇಶದಲ್ಲಿ ಬಹುಕಾಲದಿಂದ ನೆನೆಗುದಿಗೆ ಬಿದ್ದಿದ್ದ ಒಳಚರಂಡಿ (UGD) ಕಾಮಗಾರಿಯನ್ನು ಆರಂಭಿಸಿ, ಈಗಾಗಲೇ ಸುಮಾರು 60 ಪ್ರತಿಶತ ಕಾಮಗಾರಿಯನ್ನು ಪೂರ್ಣಗೊಳಿಸಿರುವ ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣ ಗೌಡ ಅವರಿಗೆ ಶಾಂತಿನಗರ ನಾಗರೀಕ ಹಕ್ಕುಗಳ ವೇದಿಕೆ ವತಿಯಿಂದ ಅಭಿನಂದನಾ ಫಲಕ ನೀಡಿ ಗೌರವಿಸಲಾಯಿತು.

ಶಾಂತಿನಗರ ನಾಗರೀಕ ಹಕ್ಕುಗಳ ವೇದಿಕೆ ಹಾಗೂ ಸ್ಥಳೀಯ ನಾಗರಿಕರ ನಿರಂತರ ಹೋರಾಟ ಮತ್ತು ಮನವಿಗೆ ಸ್ಪಂದಿಸಿದ ಮಹಾನಗರ ಪಾಲಿಕೆ ಆಡಳಿತವು UGD ಕಾಮಗಾರಿಗೆ ಚಾಲನೆ ನೀಡಿದ್ದು, ಕಾಮಗಾರಿ ವೇಗವಾಗಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ನಾಗರಿಕರು ಸಂತೋಷ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕಾಮಗಾರಿಯ ಯಶಸ್ವಿ ನಿರ್ವಹಣೆಗೆ ಸಹಕರಿಸಿದ ಇಂಜಿನಿಯರ್‌ಗಳಾದ ಹಾಲೇಶಪ್ಪ ಹಾಗೂ ಪುಷ್ಪವತಿ ಅವರನ್ನೂ ವೇದಿಕೆಯ ವತಿಯಿಂದ ಅಭಿನಂದಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ವೇದಿಕೆಯ ಪದಾಧಿಕಾರಿಗಳು, ಶಾಂತಿನಗರ ಪ್ರದೇಶದಲ್ಲಿ UGD ಕಾಮಗಾರಿ ಆರಂಭಗೊಂಡಿರುವುದು ಸ್ಥಳೀಯ ನಿವಾಸಿಗಳ ಬಹುಕಾಲದ ಬೇಡಿಕೆಯಾಗಿದ್ದು, ಕಾಮಗಾರಿ ಪೂರ್ಣಗೊಂಡ ಬಳಿಕ ಸಾರ್ವಜನಿಕರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ತಿಳಿಸಿದರು. ಅಲ್ಲದೆ, ಈಗಾಗಲೇ ನಡೆದಿರುವ ಕಾಮಗಾರಿಯಿಂದ ರಸ್ತೆಗಳಲ್ಲಿ ಉಂಟಾಗಿರುವ ಗುಂಡಿಗಳನ್ನು ಶೀಘ್ರವಾಗಿ ಮುಚ್ಚಿ, ಉಳಿದಿರುವ UGD ಕಾಮಗಾರಿಯನ್ನು ಕೂಡ ಆದಷ್ಟು ಬೇಗ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಸುಗಮ ಸಂಚಾರ ಹಾಗೂ ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಮನವಿ ಮಾಡಿದರು.

ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣ ಗೌಡ ಅವರು ನಾಗರಿಕರ ಸಮಸ್ಯೆಗಳಿಗೆ ಸ್ಪಂದಿಸಿ ಅಭಿವೃದ್ಧಿ ಕಾಮಗಾರಿಗಳಿಗೆ ಆದ್ಯತೆ ನೀಡುತ್ತಿರುವುದನ್ನು ವೇದಿಕೆಯ ಮುಖಂಡರು ಶ್ಲಾಘಿಸಿದರು. ಮುಂದಿನ ದಿನಗಳಲ್ಲಿಯೂ ಶಾಂತಿನಗರ ಪ್ರದೇಶದ ವಿವಿಧ ನಾಗರಿಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಶಾಂತಿನಗರ ನಾಗರೀಕ ಹಕ್ಕುಗಳ ವೇದಿಕೆ ಅಧ್ಯಕ್ಷ ಸಯ್ಯದ್ ಮುಜಿಬುಲ್ಲ, ಹಿರಿಯ ಉಪಾಧ್ಯಕ್ಷ ಪ್ರಸನ್ನ, ನೂರುಲ್ಲಾ ಖಾನ್, ಅನ್ಸರ್ ಪಾಷಾ, ಕಲೀಂ, ಅಬುತಾಹಿರ್, ನೂರುಲ್ಲಾ ಸೇರಿದಂತೆ ಹಲವಾರು ನಾಗರಿಕರು ಉಪಸ್ಥಿತರಿದ್ದರು.

ವರದಿ:ಡಿ.ಪಿ ಅರವಿಂದ್‌ ಎಫ್‌7ನ್ಯೂಸ್‌ ಶಿವಮೊಗ್ಗ




Post a Comment

Previous Post Next Post