ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ಆಗ್ರಹ

ವಕೀಲರ ಸಂಘದ ಹೋರಾಟಕ್ಕೆ ಕರವೇ ಸ್ವಾಭಿಮಾನಿ ಬಣ ಬೆಂಬಲ

ವರದಿ : ಡಿ.ಪಿ ಅರವಿಂದ್

ಶಿವಮೊಗ್ಗ : ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ಆಗ್ರಹಿಸಿ ಶಿವಮೊಗ್ಗ ಜಿಲ್ಲಾ ವಕೀಲರ ಸಂಘ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿಗೆ ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನಿ ಬಣ) ಬೆಂಬಲ ಸೂಚಿಸಿ ರಾಜ್ಯ ಸರ್ಕಾರದ ಗಮನ ಸೆಳೆದಿದೆ.

ಈ ಸಂಬಂಧ ಮುಖ್ಯಮಂತ್ರಿ Siddaramaiah ಅವರಿಗೆ ಮನವಿ ಸಲ್ಲಿಸಿರುವ ಕರವೇ ಸ್ವಾಭಿಮಾನಿ ಬಣ, ಮಧ್ಯ ಕರ್ನಾಟಕ ಭಾಗದ ಜನರಿಗೆ ನ್ಯಾಯಾಂಗ ಸೇವೆ ಸುಲಭವಾಗಿ ದೊರಕುವಂತೆ ಶಿವಮೊಗ್ಗದಲ್ಲೇ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪಿಸಬೇಕೆಂದು ಆಗ್ರಹಿಸಿದೆ.

ಕರವೇ ಸ್ವಾಭಿಮಾನಿ ಬಣದ ಪದಾಧಿಕಾರಿಗಳು ಮಾತನಾಡಿ, ಶಿವಮೊಗ್ಗವು ಮಧ್ಯ ಕರ್ನಾಟಕದ ಪ್ರಮುಖ ಕೇಂದ್ರವಾಗಿದ್ದು, ಶಿವಮೊಗ್ಗ ಸೇರಿದಂತೆ ದಾವಣಗೆರೆ, ಚಿತ್ರದುರ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಜನರು ಕಾನೂನು ಸಂಬಂಧಿತ ಪ್ರಕರಣಗಳಿಗಾಗಿ ಮಂಗಳೂರಿಗೆ ತೆರಳುವುದು ಅನೇಕ ರೀತಿಯ ಸಂಕಷ್ಟಗಳಿಗೆ ಕಾರಣವಾಗುತ್ತಿದೆ ಎಂದು ತಿಳಿಸಿದರು.

ಪ್ರಯಾಣದ ಅಸೌಕರ್ಯ, ಆರ್ಥಿಕ ಸಮಸ್ಯೆಗಳು, ಪ್ರತಿಕೂಲ ಹವಾಮಾನ, ಪ್ರಕೃತಿ ವಿಕೋಪಗಳಂತಹ ಅನೇಕ ಅಡಚಣೆಗಳಿಂದ ಮಧ್ಯ ಕರ್ನಾಟಕದ ಜನರಿಗೆ ನ್ಯಾಯ ಪಡೆಯುವುದು ಕಷ್ಟಕರವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ರಾಜ್ಯ ಸರ್ಕಾರ ಮುಂದಾಗಿರುವುದು ಅವೈಜ್ಞಾನಿಕ ಹಾಗೂ ಜನವಿರೋಧಿ ನಿರ್ಧಾರವಾಗಿದೆ ಎಂದು ಕರವೇ ಸ್ವಾಭಿಮಾನಿ ಬಣ ಆರೋಪಿಸಿದೆ.

ರಾಜ್ಯ ಸರ್ಕಾರಕ್ಕೆ ಮಂಗಳೂರು ಪೀಠ ಸ್ಥಾಪನೆಗೆ ಇಚ್ಛಾಶಕ್ತಿ ಇದ್ದರೆ, ಮಧ್ಯ ಕರ್ನಾಟಕದ ಜಿಲ್ಲೆಗಳನ್ನು ಅದರ ವ್ಯಾಪ್ತಿಯಿಂದ ಕೈಬಿಟ್ಟು, ಶಿವಮೊಗ್ಗದಲ್ಲೇ ಪ್ರತ್ಯೇಕ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪಿಸಬೇಕು. ಇದರಿಂದ ಮಧ್ಯ ಕರ್ನಾಟಕದ ಜನತೆಗೆ ಸಾಮಾಜಿಕ ನ್ಯಾಯ ದೊರಕುತ್ತದೆ ಎಂದು ಸಂಘಟನೆ ಅಭಿಪ್ರಾಯಪಟ್ಟಿದೆ.

ಶಿವಮೊಗ್ಗ ಜಿಲ್ಲಾ ವಕೀಲರ ಸಂಘ ನಡೆಸುತ್ತಿರುವ ಹೋರಾಟ ನ್ಯಾಯಸಮ್ಮತವಾಗಿದ್ದು, ಜನಹಿತದ ದೃಷ್ಟಿಯಿಂದ ಕರವೇ ಸ್ವಾಭಿಮಾನಿ ಬಣ ಸಂಪೂರ್ಣ ಬೆಂಬಲ ನೀಡುತ್ತಿದೆ. ಸರ್ಕಾರ ಈ ವಿಷಯದ ಗಂಭೀರತೆಯನ್ನು ಅರಿಯದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧ ಭಾರೀ ಪ್ರತಿಭಟನೆ ನಡೆಸಲಾಗುವುದು ಎಂದು ಸಂಘಟನೆ ಎಚ್ಚರಿಕೆ ನೀಡಿದೆ.

ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಕಿರಣ್ ಕುಮಾರ್ ಎಚ್.ಎಸ್., ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಶಫಿ, ಪ್ರಧಾನ ಕಾರ್ಯದರ್ಶಿ ನಾಗರಾಜ್, ಜಿಲ್ಲಾ ಉಪಾಧ್ಯಕ್ಷರಾದ ಸಯ್ಯದ್ ಮುಜುಬುಲ್ಲ, ವಿಜಯ್ ಕುಮಾರ್, ಗಂಗಾಧರ್, ಜಿಲ್ಲಾ ಕಾರ್ಯದರ್ಶಿ ಸಾಧಿಕ್ ಎ., ಗ್ರಾಮಾಂತರ ಉಪಾಧ್ಯಕ್ಷರಾದ ಕೇಶವ ವಿ., ಗುರುಮೂರ್ತಿ, ಯುವ ಅಧ್ಯಕ್ಷ ಸಂತೋಷ್, ಮಹಿಳಾ ಪದಾಧಿಕಾರಿಗಳಾದ ಆರತಿ ತಿವಾರಿ, ಅನುಪಮ, ಅನ್ಸರ್ ಅಹಮದ್, ಸಾಧಿಕ್, 26ನೇ ವಾರ್ಡ್ ಅಧ್ಯಕ್ಷ ವಿಕಿ ಸೇರಿದಂತೆ ಹಲವು ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.



Post a Comment

Previous Post Next Post