ಅಝಾನ್ ಶಬ್ದಮಿತಿ ಉಲ್ಲಂಘನೆ: ಉತ್ತರ ವಿಳಂಬಕ್ಕೆ ಸಚಿವರ ವಿರುದ್ಧ ಡಿ.ಎಸ್. ಅರುಣ್ ತೀವ್ರ ಅಸಮಾಧಾನ

ಅಝಾನ್ ಶಬ್ದಮಿತಿ ಉಲ್ಲಂಘನೆ: ಉತ್ತರ ವಿಳಂಬಕ್ಕೆ ಸಚಿವರ ವಿರುದ್ಧ ಡಿ.ಎಸ್. ಅರುಣ್ ತೀವ್ರ ಅಸಮಾಧಾನ



ಬೆಳಗಾವಿ, ಡಿಸೆಂಬರ್ 08, 2025: ಬೆಳಗಾವಿಯಲ್ಲಿ ಆರಂಭಗೊಂಡಿರುವ ವಿಧಾನ ಮಂಡಲ ಅಧಿವೇಶನದ ಮೊದಲ ದಿನವೇ ಧ್ವನಿ ಮಲಿನ್ಯ ನಿಯಮ ಉಲ್ಲಂಘನೆ ವಿಚಾರದಲ್ಲಿ ಗಂಭೀರ ಚರ್ಚೆ ನಡೆಯಿತು. Noise Pollution (Regulation and Control) Rules, 2000 ಉಲ್ಲಂಘನೆಯ ಕುರಿತಾಗಿ ಮಾನ್ಯ ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಅವರು ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಪರಿಸರ ಇಲಾಖೆಯು ಮತ್ತು ಸಚಿವರು ಸರಿಯಾದ ಸಮಯಕ್ಕೆ ಉತ್ತರ ನೀಡದಿರುವುದನ್ನು ಅವರು ಕಠಿಣವಾಗಿ ಆಕ್ಷೇಪಿಸಿದರು.


ಅಧಿವೇಶನದಲ್ಲಿ ಮಾತನಾಡಿದ ಡಿ.ಎಸ್. ಅರುಣ್ ಅವರು, ಶಿವಮೊಗ್ಗ ಸೇರಿದಂತೆ ರಾಜ್ಯದ ಅನೇಕ ಮಸೀದಿಗಳಲ್ಲಿ ಅಝಾನ್ ವೇಳೆ ಬಳಸುವ ಲೌಡ್‌ಸ್ಪೀಕರ್‌ಗಳ ಶಬ್ದಮಟ್ಟ ನಿಗದಿತ ಡೆಸಿಬೆಲ್ ಮಿತಿಯನ್ನು ಮೀರಿಸುತ್ತಿರುವುದನ್ನು ಗಂಭೀರವಾಗಿ ಉಲ್ಲೇಖಿಸಿದರು. “ಇದು ಸಾರ್ವಜನಿಕ ಪರಿಸರದ ಮೇಲೆ ನೇರ ಪರಿಣಾಮ ಬೀರುವ ವಿಷಯ. ಇಂತಹ ಮಹತ್ವದ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸದೇ ಪ್ರಶ್ನೆಯನ್ನು ಮುಂದೂಡುವುದು ನಿರ್ಲಕ್ಷ್ಯ” ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಡಿ.ಎಸ್. ಅರುಣ್ ಅವರು ಸರ್ಕಾರದಿಂದ ಕೆಳಗಿನ ಪ್ರಮುಖ ಮಾಹಿತಿಗಳನ್ನು ಕೇಳಿದ್ದರು:

  • ಜಿಲ್ಲಾವಾರು ಶಬ್ದಮಿತಿ ಉಲ್ಲಂಘನೆಗಳ ವಿವರ

  • KSPCB (ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ) ನಡೆಸಿದ ಪರಿಶೀಲನೆಗಳ ವರದಿ

  • Noise Level Testing ದಾಖಲೆಗಳು

  • ಧಾರ್ಮಿಕ ಸ್ಥಳಗಳಲ್ಲಿ ಬಳಸುವ ಲೌಡ್‌ಸ್ಪೀಕರ್‌ಗಳ ಪರವಾನಗಿ ಪರಿಶೀಲನೆ

  • ಮಿತಿಮೀರಿದ ಶಬ್ದ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳು



ಆದರೆ, ಈ ಎಲ್ಲ ವಿಷಯಗಳ ಕುರಿತು ಪರಿಸರ ಸಚಿವರಿಂದ ಬಂದಿರುವ ಉತ್ತರ ತಡವಾಗಿರುವುದನ್ನು ಅವರು ತೀವ್ರವಾಗಿ ಪ್ರಶ್ನಿಸಿದರು. “ಸಾರ್ವಜನಿಕ ಹಿತಾಸಕ್ತಿಯ ಈ ಮಹತ್ವದ ವಿಷಯವನ್ನು ಮುಂದೂಡುವುದು ಅಸಮಂಜಸ. ಕಾನೂನು ಎಲ್ಲರಿಗೂ ಒಂದೇ. Noise Pollution ನಿಯಮಕ್ಕೆ ಯಾವುದೇ ಸ್ಥಳಕ್ಕೂ ವಿನಾಯಿತಿ ಇರುವುದಿಲ್ಲ,” ಎಂದು ಅವರು ಹೇಳಿದರು.

ಅರುಣ್ ಅವರು ರಾಜ್ಯ ಸರ್ಕಾರವು ಈ ವಿಷಯದಲ್ಲಿ ಸ್ಪಷ್ಟತೆ ತೋರಬೇಕು ಹಾಗೂ ಜನರ ಹಕ್ಕು, ಸಾರ್ವಜನಿಕ ಆರೋಗ್ಯದ ವಿಚಾರದಲ್ಲಿ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. “ಶಿವಮೊಗ್ಗ ಸೇರಿದಂತೆ ರಾಜ್ಯದ ಸಾಮಾನ್ಯ ನಾಗರಿಕರು ಶಾಂತಿಯುತ ಬದುಕಿಗೆ ಅರ್ಹರು. ಸರ್ಕಾರವು ಕೇಳಿದ ಪ್ರಶ್ನೆಗೆ ತಕ್ಷಣ ಸ್ಪಷ್ಟ ಮತ್ತು ಸಂಪೂರ್ಣ ಉತ್ತರ ನೀಡಬೇಕು,” ಎಂದು ಅವರು ಹೇಳಿದರು.

ಅಧಿವೇಶನದ ಮೊದಲ ದಿನವೇ ಈ ವಿಚಾರ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಸರ್ಕಾರ ಮುಂದೇನು ಕ್ರಮ ಕೈಗೊಳ್ಳುತ್ತದೆ ಎಂಬ ಕುತೂಹಲ ಮೂಡಿಸಿದೆ.


ವರದಿ: ಡಿ.ಪಿ. ಅರವಿಂದ್



Post a Comment

Previous Post Next Post