ಪತ್ರಕರ್ತರ ರಕ್ಷಣಾ ಕಾಯ್ದೆ ಜಾರಿಗೆ ಆಗ್ರಹ: ಕಾನಿಪ ಧ್ವನಿ ಸಂಘಟನೆ ಬೆಳಗಾವಿ ಚಲೋ ಹೋರಾಟಕ್ಕೆ ಅಧಿಕೃತ ಪರವಾನಗಿ
ಬೆಳಗಾವಿ, ಡಿಸೆಂಬರ್ 08: ಪತ್ರಕರ್ತರ ರಕ್ಷಣಾ ಕಾಯ್ದೆ ಸೇರಿದಂತೆ ಹಲವು ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ (ಕಾನಿಪ ಧ್ವನಿ) ಸಂಘಟನೆ ಡಿಸೆಂಬರ್ 15ರಂದು ಬೆಳಗಾವಿಯಲ್ಲಿ ನಡೆಸಲಿರುವ ಧರಣಿ–ಪ್ರತಿಭಟನೆಯಿಗಾಗಿ ಬೆಳಗಾವಿ ನಗರದ ಪೊಲೀಸ್ ಆಯುಕ್ತರಿಂದ ಅಧಿಕೃತ ಪರವಾನಗಿ ಇಂದು ಮಂಜೂರಾಗಿದೆ.
ಕಾನಿಪ ಧ್ವನಿ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ ಅವರು ಪರವಾನಗಿ ಪತ್ರದ ಪ್ರತಿಯನ್ನು ಮಾಧ್ಯಮದೊಂದಿಗೆ ಹಂಚಿಕೊಂಡು, ಈ ಹೋರಾಟ ರಾಜ್ಯದ ಪತ್ರಕರ್ತರ ಭದ್ರತೆ ಮತ್ತು ಹಕ್ಕುಗಳಿಗಾಗಿ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು.
ಅವರು ನೀಡಿದ ಮಾಹಿತಿಯ ಪ್ರಕಾರ, ಪತ್ರಕರ್ತರ ಸುರಕ್ಷತೆಗೆ ಪತ್ರಕರ್ತ ರಕ್ಷಣಾ ಕಾಯ್ದೆ ಜಾರಿ, ಕ್ಷೇತ್ರದ ಕೆಲಸಕ್ಕೆ ಬೇಕಾದ ಭದ್ರತಾ ಕ್ರಮಗಳು, ಪತ್ರಕರ್ತರ ಮೇಲೆ ನಡೆಯುತ್ತಿರುವ ಹಲ್ಲೆ–ಬೆದರಿಕೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ, ಮತ್ತು ವೃತ್ತಿ ಗೌರವವನ್ನು ಹೆಚ್ಚಿಸುವ ಹಲವು ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರಲು ಈ ಹೋರಾಟವನ್ನು ಆಯೋಜಿಸಲಾಗಿದೆ.
ಮಲ್ಲಿಕಾರ್ಜುನ ಅವರು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾನಿಪ ಧ್ವನಿ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಹಾಗೂ ಮಾಧ್ಯಮ ಮಿತ್ರರಿಗೆ ಮನವಿ ಮಾಡಿ—
“ಪತ್ರಕರ್ತರ ಹಿತಕ್ಕಾಗಿ, ನಮ್ಮ ಹಕ್ಕುಗಳಿಗಾಗಿ, ರಾಜ್ಯಾದ್ಯಂತ ಎಲ್ಲರೂ ಒಗ್ಗಟ್ಟಾಗಿ ಈ ಹೋರಾಟದಲ್ಲಿ ಭಾಗವಹಿಸಬೇಕು. ಸರ್ಕಾರ ಬಿಸಿ ಮುಟ್ಟಿಸುವಂತೆ ದಟ್ಟ ಸಂಖ್ಯೆಯಲ್ಲಿ ಭಾಗವಹಿಸಿ ನಮ್ಮ ಧ್ವನಿಯನ್ನು ಗಟ್ಟಿಯಾಗಿ ಕೇಳಿಸುವುದು ಅತ್ಯವಶ್ಯಕ,”
ಎಂದು ಕೋರಿದರು.
ಡಿಸೆಂಬರ್ 15ರಂದು ಬೆಳಗಾವಿಯಲ್ಲಿ ನಡೆಯಲಿರುವ ಈ ಧರಣಿ–ಪ್ರತಿಭಟನೆಗೆ ಮಂಜೂರಾದ ಪರವಾನಗಿ ರಾಜ್ಯದ ಮಾಧ್ಯಮ ವಲಯದಲ್ಲಿ ಹೊಸ ಚೈತನ್ಯ ಮೂಡಿಸಿದ್ದು, ಪತ್ರಕರ್ತ ಸಮುದಾಯದಲ್ಲಿ ಹೋರಾಟದ ಸಿದ್ಧತೆಗಳು ಜೋರಾಗಿವೆ.
ವರದಿ: ಡಿ.ಪಿ. ಅರವಿಂದ್ (ಎಫ್‌೭ ನ್ಯೂಸ್)


