“ಮನೆಹಾಳ ಕಾಂಗ್ರೆಸ್ ಸರ್ಕಾರ” – ವಿಪಕ್ಷ ನಾಯಕ ಆರ್. ಅಶೋಕ್ ತೀವ್ರ ಟೀಕೆ
ಬೆಳಗಾವಿ, ಡಿಸೆಂಬರ್ 08: ಬೆಳಗಾವಿ ಅಧಿವೇಶನಕ್ಕಾಗಿ ವಿಕಾಸ ಸೌಧಕ್ಕೆ ಬಂದಿದ್ದ ವಿಪಕ್ಷ ನಾಯಕ ಆರ್. ಅಶೋಕ್ ಅವರು ಪತ್ರಕರ್ತರೊಂದಿಗೆ ಮಾತನಾಡುವ ವೇಳೆ ಕಾಂಗ್ರೆಸ್ ಪಕ್ಷದ ಮೇಲೆ ಕಿಡಿಕಾರಿದರು. ಬಿ.ಜೆ.ಪಿ ರೈತರ ವಿಷಯದಲ್ಲಿ ಮಾತನಾಡುವ ನೈತಿಕತೆ ಇಲ್ಲ ಎಂದು ಕಾಂಗ್ರೆಸ್ ನಾಯಕರು ಮಾಡುತ್ತಿದ್ದ ಆರೋಪದ ಪ್ರಶ್ನೆಗೆ ಅವರು ತೀವ್ರವಾಗಿ ಪ್ರತಿಕ್ರಿಯಿಸಿದರು.
ಅಶೋಕ್ ಅವರು, “ಈ ಕಾಂಗ್ರೆಸ್ ಸರ್ಕಾರ ಮನೆಹಾಳು ಸರ್ಕಾರ. ನಮ್ಮ ಬಗ್ಗೆ ಮಾತನಾಡುವ ಮೊದಲು ತಮ್ಮ ತಟ್ಟೆಯಲ್ಲಿ ಬಿದ್ದಿರುವ ಹೆಗ್ಗಣವನ್ನು ನೋಡಿಕೊಳ್ಳಲಿ. ಕಳೆದ ಎರಡು ವರೇ ವರ್ಷದ ಅವಧಿಯಲ್ಲಿ 2000ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸರ್ಕಾರ ಮೊದಲು ಅದರ ಉತ್ತರ ಕೊಡಲಿ. ನಮ್ಮ ಪಕ್ಷದ ವಿರುದ್ಧ ಮಾತನಾಡಲು ಇವರಿಗೆ ಯಾವ ಅರ್ಹತೆ?” ಎಂದು ಪ್ರಶ್ನಿಸಿದರು.
ಮತ್ತಷ್ಟು ಕಿಡಿಕಾರಿದ ಅವರು, ಯಡಿಯೂರಪ್ಪನವರ ಅವಧಿಯಲ್ಲಿ ರಾಜ್ಯ ಸರ್ಕಾರ ರೈತರಿಗೆ ₹4,000 ನೆರವು ನೀಡುತ್ತಿತ್ತು ಹಾಗೂ ಕೇಂದ್ರದ “PM-KISAN” ಯೋಜನೆಯಡಿ ₹6,000 ನೀಡಲಾಗುತ್ತಿತ್ತು ಎಂದು ನೆನಪಿಸಿದರು. “ಈ ಹಣ ರೈತರ ಕೈಗೆ ತಲುಪದಂತೆ ಮಾಡಿದದ್ದು ಇದೇ ಕಾಂಗ್ರೆಸ್ ಸರ್ಕಾರ. ತಮ್ಮ ವೈಫಲ್ಯ ಮುಚ್ಚಲು ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ,” ಎಂದು ಅಶೋಕ್ ವಾಗ್ದಾಳಿ ನಡೆಸಿದರು.
ಬಸವರಾಜ್ ಬೊಮ್ಮಾಯಿ ಅವರು ರೈತರ ಮಕ್ಕಳಿಗಾಗಿ ಜಾರಿಗೆ ತಂದಿದ್ದ ‘ವಿದ್ಯಾನಿಧಿ’ ಯೋಜನೆಯನ್ನೇ ಮುಂದುವರಿಸಲು ಕಾಂಗ್ರೆಸ್ ಸರ್ಕಾರ ಆಸಕ್ತಿ ತೋರಿಲ್ಲ ಎಂದು ಅವರು ಹೇಳಿದರು. “ಇವರು ರೈತರಿಗೆ ಏನು ಕೊಟ್ಟಿದ್ದಾರೆ? ರೈತರ ಹಿತಕ್ಕಾಗಿ ಮಾಡಿದ ಯೋಜನೆಗಳನ್ನು ನಿಲ್ಲಿಸಿದವರೇ ನಮ್ಮ ಬಗ್ಗೆ ಮಾತಾಡುತ್ತಾರೆ. ಇವರ ಬಳಿ ಯಾವ ನೈತಿಕತೆ ಇದ್ದು ನಮ್ಮನ್ನು ಪ್ರಶ್ನಿಸುತ್ತಾರೆ?” ಎಂದು ಹೇಳಿದರು.
ತುಂಗಾನದಿ ಗೇಟ್ ಹಾನಿಗೊಳಗಾಗಿ ಒಂದು ವರ್ಷ ಕಳೆದರೂ ರಿಪೇರಿ ಮಾಡಲು ಸರ್ಕಾರ ವಿಫಲವಾಗಿದೆ ಎಂಬ ವಿಷಯವನ್ನೂ ಅಶೋಕ್ ಮುಂದಿಟ್ಟರು. “ನಾನು ಮೂರು ಬಾರಿ ಸ್ಥಳಕ್ಕೆ ಭೇಟಿ ನೀಡಿ ರೈತರ ಸಮಸ್ಯೆಗಳನ್ನು ಆಲಿಸಿದ್ದೇನೆ. ರಿಪೇರಿಗೆ ಸರ್ಕಾರದ ಬಳಿ ಹಣವಿಲ್ಲ. ಕೆಲಸ ಹೇಗೆ ನಡೆಯುತ್ತದೆ? ಇಂಥ ಸರ್ಕಾರದಿಂದ ಏನು ನಿರೀಕ್ಷಿಸಬೇಕು?” ಎಂದು ಅಶೋಕ್ ಅಸಮಾಧಾನ ವ್ಯಕ್ತಪಡಿಸಿದರು.
ಅವರ ಈ ಕಟುವಾದ ಟೀಕೆ ಬೆಳಗಾವಿ ಅಧಿವೇಶನದ ಮೊದಲ ದಿನವೇ ರಾಜಕೀಯ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಕಾಂಗ್ರೆಸ್ ಪಕ್ಷದಿಂದ ಯಾವ ಪ್ರತಿಕ್ರಿಯೆ ಬರಲಿದೆ ಎಂಬ ಕುತೂಹಲ ವಲಯದಲ್ಲಿ ಮೂಡಿದೆ.
ವರದಿ: ಡಿ.ಪಿ. ಅರವಿಂದ್


