ಡಿಸೆಂಬರ್ 25ರಂದು ಶಿವಮೊಗ್ಗದಲ್ಲಿ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ವಿ. ಶ್ರೀಶಾನಂದರಿಂದ ವಿಶೇಷ ಉಪನ್ಯಾಸ

ಡಿಸೆಂಬರ್ 25ರಂದು ಶಿವಮೊಗ್ಗದಲ್ಲಿ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ವಿ. ಶ್ರೀಶಾನಂದರಿಂದ ವಿಶೇಷ ಉಪನ್ಯಾಸ

ಶಿವಮೊಗ್ಗ, ಡಿಸೆಂಬರ್ 24 (F7 News):
ಶಿವಮೊಗ್ಗದ ಪ್ರತಿಷ್ಠಿತ ಶ್ರೀಗಂಧ ಸಾಂಸ್ಕೃತಿಕ ಸಂಸ್ಥೆ, ಶಿವಮೊಗ್ಗ ವಕೀಲರ ಸಂಘದ ಸಹಯೋಗದಲ್ಲಿ, ಕರ್ನಾಟಕ ಉಚ್ಛ ನ್ಯಾಯಾಲಯದ ಗೌರವಾನ್ವಿತ ನ್ಯಾಯಮೂರ್ತಿಗಳಾದ ಶ್ರೀಯುತ ವಿ. ಶ್ರೀಶಾನಂದ ಅವರಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಡಿಸೆಂಬರ್ 25ರ ಗುರುವಾರ ಸಂಜೆ 6.00 ಗಂಟೆಗೆ ನಗರದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದೆ.

ಈ ಸಂದರ್ಭದಲ್ಲಿ ಗೌರವಾನ್ವಿತ ನ್ಯಾಯಮೂರ್ತಿಗಳು “ಪ್ರಾಚೀನ ಭಾರತದ ನ್ಯಾಯಾಂಗ ವ್ಯವಸ್ಥೆ” ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ.

ಇದೇ ಕಾರ್ಯಕ್ರಮದಲ್ಲಿ ಇತ್ತೀಚೆಗಷ್ಟೆ ಅಂತರರಾಷ್ಟ್ರೀಯ ರೋಟರಿ ಜೀವಮಾನ ಸಾಧನೆ ಪ್ರಶಸ್ತಿ ಪಡೆದ ಶಿವಮೊಗ್ಗದ ಖ್ಯಾತ ವೈದ್ಯರಾದ ಡಾ. ಪಿ. ನಾರಾಯಣ್ ಹಾಗೂ ಯೋಗ ಯೂನಿವರ್ಸಿಟಿ ಆಫ್ ಅಮೇರಿಕಾ ಸಂಸ್ಥೆಯಿಂದ ಗೌರವ ಡಾಕ್ಟರೇಟ್ ಪಡೆದ ಖ್ಯಾತ ಯೋಗಾಚಾರ್ಯರಾದ ಡಾ. ಸಿ.ವಿ. ರುದ್ರಾರಾಧ್ಯ ಅವರನ್ನು ಸನ್ಮಾನಿಸಲಾಗುವುದು.

ಕರ್ನಾಟಕ ಸರ್ಕಾರದ ಮಾಜಿ ಉಪ ಮುಖ್ಯಮಂತ್ರಿ ಹಾಗೂ ಶ್ರೀಗಂಧ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಕೆ.ಎಸ್. ಈಶ್ವರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ, ಶ್ರೀಗಂಧ ಸಂಸ್ಥೆಯ ಖಜಾಂಚಿ ಶ್ರೀ ಕೆ.ಇ. ಕಾಂತೇಶ್, ಶಿವಮೊಗ್ಗ ವಕೀಲರ ಸಂಘದ ಅಧ್ಯಕ್ಷ ಶ್ರೀ ಬಿ.ಆರ್. ರಾಘವೇಂದ್ರ ಸ್ವಾಮಿ ಹಾಗೂ ಶ್ರೀಗಂಧ ಸಂಸ್ಥೆಯ ಸಂಚಾಲಕ ಶ್ರೀ ಉಮೇಶ್ ಆರಾಧ್ಯ ಅವರು ಉಪಸ್ಥಿತರಿರಲಿದ್ದಾರೆ.

ದೇಶಾದ್ಯಂತ ಸುಶಾಸನ್ ದಿವಸ್ವಾಗಿ ಆಚರಿಸಲ್ಪಡುವ, ಭಾರತ ರತ್ನ ದಿ. ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಅಂಗವಾಗಿ ಈ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಬೇಕೆಂದು ಸಂಘಟಕರು ಮನವಿ ಮಾಡಿದ್ದಾರೆ. ಈ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಪತ್ರಿಕಾ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ವ್ಯಾಪಕ ಪ್ರಚಾರ ನೀಡುವಂತೆ ಕೋರಲಾಗಿದೆ.


ನ್ಯಾಯಮೂರ್ತಿ ವಿ. ಶ್ರೀಶಾನಂದ – ಸಂಕ್ಷಿಪ್ತ ಪರಿಚಯ

ನ್ಯಾಯಮೂರ್ತಿ ಶ್ರೀ ವಿ. ಶ್ರೀಶಾನಂದ ಅವರು ಶ್ರೀ ವೇದವ್ಯಾಸಾಚಾರ್ ಹಾಗೂ ಶ್ರೀಮತಿ ಸುಧಾರಾಣಿ ದಂಪತಿಗಳ ಜ್ಯೇಷ್ಠ ಪುತ್ರರು. ಬೆಂಗಳೂರು ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ವಿಜ್ಞಾನ ಪದವಿ ಹಾಗೂ ಶೇಷಾದ್ರಿಪುರಂ ಕಾಲೇಜಿನಲ್ಲಿ ಕಾನೂನು ಪದವಿ ಪಡೆದಿದ್ದಾರೆ.

1991ರಲ್ಲಿ ತಮ್ಮ ತಂದೆಯವರಾದ ಖ್ಯಾತ ಹಿರಿಯ ನ್ಯಾಯವಾದಿ ಜಿ. ವೇದವ್ಯಾಸಾಚಾರ್ ಅವರ ಮಾರ್ಗದರ್ಶನದಲ್ಲಿ ವಕೀಲ ವೃತ್ತಿ ಆರಂಭಿಸಿ, ಸುಮಾರು 17 ವರ್ಷಗಳ ಕಾಲ ರಾಜ್ಯದ ವಿವಿಧ ನ್ಯಾಯಾಲಯಗಳು ಹಾಗೂ ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ಸಮರ್ಥವಾಗಿ ಸೇವೆ ಸಲ್ಲಿಸಿದ್ದಾರೆ.

2008ರಲ್ಲಿ ಜಿಲ್ಲಾ ನ್ಯಾಯಾಧೀಶರ ನೇಮಕಾತಿ ಪರೀಕ್ಷೆಯಲ್ಲಿ ಉನ್ನತ ದರ್ಜೆಯಲ್ಲಿ ಉತ್ತೀರ್ಣರಾಗಿ, ಕಲಬುರ್ಗಿ ಜಿಲ್ಲೆಯ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾಗಿ ಸೇವೆ ಆರಂಭಿಸಿದರು. ನಂತರ ಕಾರವಾರ, ಹಾವೇರಿ, ಧಾರವಾಡ ಜಿಲ್ಲೆಗಳ ಪ್ರಧಾನ ಜಿಲ್ಲಾ ನ್ಯಾಯಾಧೀಶರಾಗಿ, ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾಗಿ, ರಾಜ್ಯ ಸಾರಿಗೆ ಮೇಲ್ಮನವಿ ಪ್ರಾಧಿಕಾರದ ಅಧ್ಯಕ್ಷರಾಗಿ, ಕರ್ನಾಟಕ ಉಚ್ಛ ನ್ಯಾಯಾಲಯದ ರಿಜಿಸ್ಟ್ರಾರ್ (ನ್ಯಾಯಾಂಗ) ಹಾಗೂ ರಿಜಿಸ್ಟ್ರಾರ್ ಜನರಲ್ ಆಗಿ ಮಹತ್ವದ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ.

ಇವರ ಸೇವಾ ಹಿರಿತನ ಮತ್ತು ನಿಷ್ಕಳಂಕ ನ್ಯಾಯದಾನವನ್ನು ಪರಿಗಣಿಸಿ 2020ರ ಮೇ 4ರಂದು ಮಾನ್ಯ ರಾಷ್ಟ್ರಪತಿಗಳು ಅವರನ್ನು ಕರ್ನಾಟಕ ಉಚ್ಛ ನ್ಯಾಯಾಲಯದ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಳಿಸಿದರು. 2021ರಿಂದ ಖಾಯಂ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಸರಳ, ಆಪ್ತ ಮತ್ತು ಸಹಾನುಭೂತಿಪೂರ್ಣ ನಡವಳಿಕೆಯಿಂದ ನ್ಯಾಯಾಂಗದ ಕುರಿತು ಜನಸಾಮಾನ್ಯರಲ್ಲಿ ಹೊಸ ನಂಬಿಕೆಯನ್ನು ಮೂಡಿಸಿರುವ ನ್ಯಾಯಮೂರ್ತಿ ಶ್ರೀಶಾನಂದ ಅವರು, ಪರಿಣಾಮಕಾರಿ ವಕ್ತೃತ್ವ ಹಾಗೂ ಆಳವಾದ ಜ್ಞಾನದಿಂದ ದೇಶ-ವಿದೇಶಗಳಲ್ಲಿ ಅಪಾರ ಅಭಿಮಾನವನ್ನು ಗಳಿಸಿದ್ದಾರೆ.




 

Post a Comment

Previous Post Next Post