ಅನಾಮಧೇಯ ಮಹಿಳೆಯ ವಾರಸುದಾರರ ಪತ್ತೆ: ಮಾನವೀಯತೆ ಮೆರೆದ ಶಿವಮೊಗ್ಗ ಸಿಪಿಸಿ ಅಧಿಕಾರಿ
ಶಿವಮೊಗ್ಗ, ಡಿಸೆಂಬರ್ 17 (F7 News):
ದಿನಾಂಕ 17-12-2025 ರಂದು ಅನಾರೋಗ್ಯದ ಕಾರಣದಿಂದ ಮಹಿಳೆಯೊಬ್ಬರು ಶಿವಮೊಗ್ಗ ನಗರದ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದರು. ದಾಖಲಾಗುವ ವೇಳೆ ಮಹಿಳೆಯು ತನ್ನ ಹೆಸರನ್ನು ತಿಳಿಸದೇ, ಕೇವಲ ತನ್ನ ಊರು ಮೈಸೂರು ಎಂದು ಮಾತ್ರ ಹೇಳಿದ್ದರು. ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲೇ, ಅದೇ ದಿನ ಉಸಿರಾಟದ ತೊಂದರೆಯಿಂದ ಮಹಿಳೆಯು ಮೃತಪಟ್ಟಿದ್ದಾರೆ.
ಮೃತ ಮಹಿಳೆಯ ವಾರಸುದಾರರ ಕುರಿತು ಪರಿಶೀಲನೆ ನಡೆಸಿದಾಗ ಯಾವುದೇ ಸುಳಿವುಗಳು ಲಭ್ಯವಾಗಿರಲಿಲ್ಲ. ಈ ನಡುವೆ ಮೃತೆಯ ಬಳಿ ಇದ್ದ ಚೀಟಿಯೊಂದರಲ್ಲಿ ಬರೆದಿದ್ದ ದೂರವಾಣಿ ಸಂಖ್ಯೆಗೆ ಕರೆ ಮಾಡಿ ವಿಚಾರಿಸಿದಾಗ, ಮಹಿಳೆಯ ಮಗಳು ಪತ್ತೆಯಾಗಿದ್ದಾರೆ.
ನಂತರ ಮೃತೆಯ ಬಳಿ ಇದ್ದ ರೂ. 34,400 ನಗದು ಹಣ, ಒಂದು ಕೊರಳು ಚೈನ್ ಹಾಗೂ ಎರಡು ಉಂಗುರಗಳನ್ನು ಅಧಿಕೃತ ಪ್ರಕ್ರಿಯೆ ಮೂಲಕ ಮೃತೆಯ ಮಗಳಿಗೆ ಹಸ್ತಾಂತರಿಸಲಾಗಿದೆ.
ಈ ಮಾನವೀಯ ಹಾಗೂ ಶ್ಲಾಘನೀಯ ಕಾರ್ಯವನ್ನು ಶ್ರೀ ಚೌಡಪ್ಪ ಕಮತರ, ಸಿಪಿಸಿ, ಶಿವಮೊಗ್ಗ ಎ ಉಪ ವಿಭಾಗ ಅವರು ಯಶಸ್ವಿಯಾಗಿ ನಿರ್ವಹಿಸಿದ್ದು, ಅನಾಮಧೇಯ ಮಹಿಳೆಯ ವಾರಸುದಾರರನ್ನು ಪತ್ತೆ ಹಚ್ಚುವ ಮೂಲಕ ಉತ್ತಮ ಕರ್ತವ್ಯ ನಿಷ್ಠೆಯನ್ನು ಮೆರೆದಿದ್ದಾರೆ.
ಸದರಿಯವರ ಸೇವಾ ನಿಷ್ಠೆ ಮತ್ತು ಮಾನವೀಯ ಕಾರ್ಯವನ್ನು ಮೆಚ್ಚಿ, ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಶ್ರೀ ಚೌಡಪ್ಪ ಕಮತರ ಅವರನ್ನು ಪ್ರಶಂಸಿಸಿ ಅಭಿನಂದಿಸಲಾಗಿದೆ.
ಈ ಘಟನೆ ಪೊಲೀಸ್ ಇಲಾಖೆಯ ಮಾನವೀಯ ಮುಖವನ್ನು ಮತ್ತೊಮ್ಮೆ ಸಾರ್ವಜನಿಕರ ಮುಂದೆ ತಂದು ನಿಲ್ಲಿಸಿದ್ದು, ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.



