ಕ.ರ.ವೇ ಸ್ವಾಭಿಮಾನಿ ಬಣ ಕಿರಣ್ ಹೋರಾಟಕ್ಕೆ ಬೆಂಬಲ ಸೂಚಿಸಿದ ಶಿವಮೊಗ್ಗ ಸಿ.ಎಂ.ಸಿ ಆಯುಕ್ತ ಮಾಯಣ್ಣ ಗೌಡ
ಶಿವಮೊಗ್ಗ:
ಶಿವಮೊಗ್ಗ ನಗರದ ಜೆ.ಹೆಚ್. ಪಟೇಲ್ ಬಡಾವಣೆಯಲ್ಲಿ ಮಹಾನಗರ ಪಾಲಿಕೆ ವತಿಯಿಂದ ನಡೆಯುತ್ತಿರುವ ಒಳಚರಂಡಿ ಕಾಮಗಾರಿಯನ್ನು ಅನುಮತಿಯಿಲ್ಲದೆ ಹಾಗೂ ಅವೈಜ್ಞಾನಿಕವಾಗಿ ನಡೆಸುತ್ತಿರುವ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನಿ ಬಣ)ದ ಜಿಲ್ಲಾಧ್ಯಕ್ಷ ಕಿರಣ್ ಕುಮಾರ್ ಎಚ್.ಎಸ್. ಧ್ವನಿ ಎತ್ತಿದ್ದಾರೆ.
ಈ ಕಾಮಗಾರಿಯಲ್ಲಿ ಸಾಕಷ್ಟು ನ್ಯೂನತೆಗಳಿದ್ದು, ಕೆಲಸ ಸಂಪೂರ್ಣವಾಗಿ ಕಳಪೆಯಾಗಿದೆ. ಮಾತ್ರವಲ್ಲದೆ ಕಾಮಗಾರಿ ಆರಂಭಿಸುವ ಮೊದಲು ಕರ್ನಾಟಕ ನೀರಾವರಿ ನಿಗಮದಿಂದ ಅನುಮತಿ ಪಡೆಯಬೇಕಾಗಿತ್ತು. ಆದರೆ, ಅದನ್ನು ಬಿಟ್ಟು ಪಾಲಿಕೆಯ ಇಂಜಿನಿಯರ್‌ಗಳು ನೇರವಾಗಿ ಗುತ್ತಿಗೆದಾರರಿಗೆ ಟೆಂಡರ್ ನೀಡಿರುವುದು ಗೊಂದಲ ಮತ್ತು ಅನುಮಾನ ಮೂಡಿಸುವಂತಿದೆ.
ಈ ವಿಷಯದಲ್ಲಿ ಕ.ರ.ವೇ (ಸ್ವಾಭಿಮಾನಿ ಬಣ) ಜಿಲ್ಲಾಧ್ಯಕ್ಷ ಕಿರಣ್ ಕುಮಾರ್ ಹೆಚ್.ಎಸ್ ಅವರು ಮಹಾನಗರ ಪಾಲಿಕೆಯ ಆಯುಕ್ತ ಮಾಯಣ್ಣ ಗೌಡರಿಗೆ ಮನವಿ ಸಲ್ಲಿಸಿದರು.
ಮನವಿಗೆ ಸ್ಪಂದಿಸಿದ ಆಯುಕ್ತ ಮಾಯಣ್ಣ ಗೌಡ ಅವರು, “ರಕ್ಷಣಾ ವೇದಿಕೆ ನೀಡಿರುವ ಮನವಿಯಲ್ಲಿ ಉಲ್ಲೇಖಿಸಿರುವ ಬಹುತೇಕ ವಿಷಯಗಳ ಬಗ್ಗೆ ನಾನು ಮಾಹಿತಿಯನ್ನು ಪಡೆದುಕೊಂಡಿದ್ದೇನೆ. ಇವರ ಹೋರಾಟ ನ್ಯಾಯಸಮ್ಮತವಾಗಿದೆ. ಈ ಕುರಿತು ಸಂಪೂರ್ಣ ತನಿಖೆ ನಡೆಸಲಾಗುವುದು. ತನಿಖೆಯಲ್ಲಿ ತಪ್ಪಿತಸ್ಥರು ಪತ್ತೆಯಾದರೆ ಅವರ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುತ್ತದೆ,” ಎಂದು ಭರವಸೆ ನೀಡಿದರು.
ಆಯುಕ್ತರ ತಕ್ಷಣದ ಪ್ರತಿಕ್ರಿಯೆಯನ್ನು ಮೆಚ್ಚಿದ ಕಿರಣ್ ಕುಮಾರ್ ಅವರು ನಂತರ ಮಾತನಾಡಿ, “ನಾವು ಸ್ವತಃ ಸ್ಥಳಕ್ಕೆ ತೆರಳಿ ಕಾಮಗಾರಿ ವೀಕ್ಷಿಸಿದ್ದೇವೆ. ಅಲ್ಲಿ ನಡೆದಿರುವ ಒಳಚರಂಡಿ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ ಹಾಗೂ ಅವೈಜ್ಞಾನಿಕವಾಗಿದೆ. ಇದರಿಂದ ಜನರು ಕಟ್ಟುವ ತೆರಿಗೆ ಹಣ ವ್ಯರ್ಥವಾಗುತ್ತಿದೆ. ಇಂತಹ ಕಾಮಗಾರಿಗಳು ನಡೆಯದಂತೆ ತಡೆಯುವುದು ನಮ್ಮ ಹೋರಾಟಗಾರರ ಕರ್ತವ್ಯ. ಈ ಕಾರಣಕ್ಕಾಗಿ ನಾವು ಮನವಿ ಸಲ್ಲಿಸಿದ್ದೇವೆ. ಅದಕ್ಕೆ ಸ್ಪಂದಿಸಿದ ಆಯುಕ್ತರಿಗೆ ಧನ್ಯವಾದಗಳು,” ಎಂದು ಹೇಳಿದರು.
ವರದಿ: ಡಿ.ಪಿ. ಅರವಿಂದ್
ಎಫ್7 ನ್ಯೂಸ್, ಶಿವಮೊಗ್ಗ


