ಲಾಟರಿ ಶಾಸಕರೇ, ನಿಮ್ಮ ಕೊಡುಗೆ ಏನು?: ಮಂಜು ಪುರಲೆ ಪ್ರಶ್ನೆ
ಶಿವಮೊಗ್ಗ:
“ಚೆನ್ನಬಸಪ್ಪ ಓರ್ವ ಲಾಟರಿ ಶಾಸಕರಾಗಿದ್ದು, ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಬಗ್ಗೆ ಮಾತನಾಡಲು ಯಾವುದೇ ಯೋಗ್ಯತೆ ಇಲ್ಲ” ಎಂದು ಯುವ ಕಾಂಗ್ರೆಸ್ ಮುಖಂಡ ಮಂಜು ಪುರಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಅವರು, ಶಿವಮೊಗ್ಗ ನಗರದಲ್ಲಿ ಅಶಾಂತಿ ಸೃಷ್ಟಿಸಿರುವುದು, ಕೋಮುಗಲಭೆ ಎಬ್ಬಿಸಿರುವುದೇ ಶಾಸಕ ಚೆನ್ನಬಸಪ್ಪ ಅವರ ಇದುವರೆಗಿನ ಸಾಧನೆ ಎಂದು ಆರೋಪಿಸಿದರು. ಶಾಸಕರಾಗಿ ಇಂದಿನವರೆಗೂ ಹೇಳಿಕೊಳ್ಳುವಂತಹ ಒಂದೇ ಒಂದು ಅಭಿವೃದ್ಧಿ ಕಾರ್ಯ ಮಾಡಿಲ್ಲ ಎಂದು ಗಂಭೀರ ಟೀಕೆಗಳನ್ನು ಹೊರಹಾಕಿದರು.
“ಸಂತೋಷ್ ಲಾಡ್ ಅವರು ಕಾರ್ಮಿಕರ ಧ್ವನಿಯಾಗಿ ನಿಂತು ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ಇಂತಹ ನಾಯಕರ ವಿರುದ್ಧ ಅವಹೇಳನಕಾರಿ ಶಬ್ದ ಬಳಕೆ ಮಾಡುವುದು ಖಂಡನಾರ್ಹ. ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹಾಗೂ ಬಿಜೆಪಿ ನಾಯಕರನ್ನು ತನ್ನತ್ತ ಸೆಳೆಯಲು ಚೆನ್ನಬಸಪ್ಪನವರು ಇಂತಹ ಹುಚ್ಚು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ರೀತಿಯ ವರ್ತನೆ ಮುಂದುವರಿದರೆ ಕಾಂಗ್ರೆಸ್ ಕಾರ್ಯಕರ್ತರು ತಕ್ಕ ಪಾಠ ಕಲಿಸುವುದು ಅನಿವಾರ್ಯ” ಎಂದು ಎಚ್ಚರಿಸಿದರು.
ಮಂಜು ಪುರಲೆ ಮತ್ತಷ್ಟು ಆಕ್ರೋಶ ವ್ಯಕ್ತಪಡಿಸಿ, “ಚೆನ್ನಬಸಪ್ಪ ಶಾಸಕರಾಗಿ ಶಿವಮೊಗ್ಗ ಜನತೆಗೆ ಯಾವುದೇ ಒಳ್ಳೆಯ ಕಾರ್ಯ ಮಾಡಿಲ್ಲ. ಜನರು ಈಗಾಗಲೇ ಅವರನ್ನು ತಿರಸ್ಕರಿಸಿದ್ದಾರೆ. ಇದೀಗ ಕಾಂಗ್ರೆಸ್ ನಾಯಕರನ್ನು ಬೈದು ಬಿಜೆಪಿ ಟಿಕೆಟ್‌ಗಾಗಿ ಹಗಲು ಕನಸು ಕಾಣುತ್ತಿದ್ದಾರೆ. ಆದರೆ, ಜನರ ತೀರ್ಪು ಸ್ಪಷ್ಟವಾಗಿದೆ — ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆಯಲಾಗಿದೆ. ಜನರ ನಿರ್ಣಯವೇ ಯಾರು ಹುಚ್ಚರು ಎಂಬುದಕ್ಕೆ ಸಾಕ್ಷಿಯಾಗಿದೆ” ಎಂದು ವ್ಯಂಗ್ಯವಾಡಿದರು.
ಅವರು ಕೊನೆಯಲ್ಲಿ, “ತಮ್ಮ ಸ್ಥಾನಮಾನ ಅರಿತು, ಜವಾಬ್ದಾರಿಯುತವಾಗಿ ವರ್ತಿಸುವುದು ಶಾಸಕರಿಗೆ ಒಳಿತು. ಇಲ್ಲದಿದ್ದರೆ ಕಾಂಗ್ರೆಸ್ ಕಾರ್ಯಕರ್ತರಿಂದಲೇ ಬುದ್ಧಿ ಕಲಿಯಬೇಕಾದ ಪರಿಸ್ಥಿತಿ ಎದುರಾಗಲಿದೆ” ಎಂದು ಗಂಭೀರ ಎಚ್ಚರಿಕೆ ನೀಡಿದರು.

