“ಇಂಡಿಪೆಂಡೆನ್ಸ್ ವಾಟರ್” ಬಾಟಲಿ ವಿವಾದ – ಬಣ್ಣ ಬದಲಿಸುವಂತೆ ಆಗ್ರಹ


ಬಾಗಲಕೋಟೆಯಲ್ಲಿ “ಇಂಡಿಪೆಂಡೆನ್ಸ್ ವಾಟರ್” ಬಾಟಲಿ ವಿವಾದ – ಬಣ್ಣ ಬದಲಿಸುವಂತೆ ಆಗ್ರಹ



ಬಾಗಲಕೋಟೆ/ಶಿವಮೊಗ್ಗ:
ಶಿವಮೊಗ್ಗ ಜಿಲ್ಲೆಯ ಕನ್ನಡ ಪರ ಹೋರಾಟಗಾರ ಕಿರಣ್‌ ರವರ ಹೋರಾಟದ ಕಿಡಿ ಇದೀಗ ಬಾಗಲಕೋಟೆ ಜಿಲ್ಲೆಯಿಗೂ ತಲುಪಿದೆ. ಕುಡಿಯುವ ನೀರಿನ “ಇಂಡಿಪೆಂಡೆನ್ಸ್ ವಾಟರ್” ಬಾಟಲಿಯ ಮೇಲೆ ಭಾರತದ ರಾಷ್ಟ್ರಧ್ವಜಕ್ಕೆ ಹೋಲುವಂತೆ ಮುದ್ರಿಸಲಾದ ಕೇಸರಿ, ಬಿಳಿ ಮತ್ತು ಹಸಿರು ಬಣ್ಣದ ಪ್ಲಾಸ್ಟಿಕ್‌ ಸ್ಟಿಕ್ಕರ್‌ ಬಳಸಿರುವುದನ್ನು ವಿರೋಧಿಸಿ ಬಾಗಲಕೋಟೆಯ ಯುವಕರು ಕಠಿಣವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೋರಾಟಕ್ಕೆ ಬಾಗಲಕೋಟೆಯ ಯುವಕರ ಬೆಂಬಲ

ಶಿವಮೊಗ್ಗದ ಕನ್ನಡರಕ್ಷಣ ವೇದಿಕೆ (ಕ.ರ.ವೇ) ಹೋರಾಟಗಾರ ಕಿರಣ್ ಅವರು ಈ ಅಭಿಯಾನವನ್ನು ಪ್ರಾರಂಭಿಸಿದ್ದು, ಈಗ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ಗಲಗ ಗ್ರಾಮದಲ್ಲಿ ಸ್ಥಳೀಯ ಯುವಕರು ಈ ಅಭಿಯಾನಕ್ಕೆ ಕೈಜೋಡಿಸಿದ್ದಾರೆ. ರಾಷ್ಟ್ರಧ್ವಜದ ಗೌರವಕ್ಕೆ ಧಕ್ಕೆ ತರುವಂತ ಬಣ್ಣ ಬಳಕೆಯನ್ನು ತಕ್ಷಣವೇ ನಿಲ್ಲಿಸಬೇಕು ಎಂಬ ಆಗ್ರಹವನ್ನು ಅವರು ವ್ಯಕ್ತಪಡಿಸಿದ್ದಾರೆ.

ಬಾಟಲ್‌ಗಳನ್ನು ಶೇಖರಿಸಿ ಸ್ಟಿಕ್ಕರ್ ತೆಗೆದ ಯುವಕರು

ಸ್ಥಳೀಯ ಗಲಗಲಿಯ ಕೊಳಚೆ ಪ್ರದೇಶದಲ್ಲಿ ಬಿದ್ದಿದ್ದ ನೀರಿನ ಬಾಟಲಿಗಳನ್ನು ಯುವಕರು ಶೇಖರಿಸಿ, ಅದರ ಮೇಲೆ ಹಾಕಿದ್ದ ರಾಷ್ಟ್ರಧ್ವಜದ ಬಣ್ಣಗಳಿಗೆ ಹೋಲುವ ಪ್ಲಾಸ್ಟಿಕ್‌ ಸ್ಟಿಕ್ಕರ್‌ಗಳನ್ನು ತೆಗೆಯುವ ಕಾರ್ಯ ಕೈಗೊಂಡಿದ್ದಾರೆ. “ರಾಷ್ಟ್ರಧ್ವಜದ ಬಣ್ಣಗಳನ್ನು ಯಾವುದೇ ವಾಣಿಜ್ಯಿಕ ಉತ್ಪನ್ನದಲ್ಲಿ ಬಳಸುವುದು ಸಂವಿಧಾನಬಾಹಿರ ಹಾಗೂ ರಾಷ್ಟ್ರಾಭಿಮಾನಕ್ಕೆ ಧಕ್ಕೆ” ಎಂದು ಯುವಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಧಿಕೃತ ಮಟ್ಟದಲ್ಲಿ ಕ್ರಮಕ್ಕೆ ಒತ್ತಾಯ

ಯುವಕರ ಪ್ರಕಾರ, ಸಂಬಂಧಿಸಿದ ಕಂಪನಿಯ ವಿರುದ್ಧ ಸರ್ಕಾರ ಹಾಗೂ ಜಿಲ್ಲಾ ಆಡಳಿತ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು. ಅಲ್ಲದೆ, ಇಂತಹ ರಾಷ್ಟ್ರಧ್ವಜದ ಬಣ್ಣಗಳಿಗೆ ಹೋಲುವ ಉತ್ಪನ್ನ ವಿನ್ಯಾಸವನ್ನು ತಕ್ಷಣವೇ ಬದಲಿಸುವಂತೆ ಆಗ್ರಹಿಸಿದ್ದಾರೆ.

ಕನ್ನಡ ಪರ ಹೋರಾಟಗಾರರ ಎಚ್ಚರಿಕೆ

ಕನ್ನಡ ಪರ ಹೋರಾಟಗಾರ ಕಿರಣ್ ಹೇಳುವಂತೆ – “ಧ್ವಜದ ಗೌರವಕ್ಕೆ ಧಕ್ಕೆ ತರುವ ಯಾವುದೇ ಉತ್ಪನ್ನ ಅಥವಾ ಜಾಹೀರಾತನ್ನು ಕನ್ನಡಿಗರು ಸಹಿಸಿಕೊಳ್ಳುವುದಿಲ್ಲ. ಬಾಟಲಿಯ ಬಣ್ಣ ತಕ್ಷಣ ಬದಲಾಗದಿದ್ದರೆ ರಾಜ್ಯವ್ಯಾಪಿ ಹೋರಾಟ ಹಮ್ಮಿಕೊಳ್ಳಲಾಗುವುದು” ಎಂದು ಎಚ್ಚರಿಸಿದ್ದಾರೆ.


ವರದಿ: ಡಿ.ಪಿ ಅರವಿಂದ್‌ ಎಫ್7ನ್ಯೂಸ್‌ ಶಿವಮೊಗ್ಗ





Post a Comment

Previous Post Next Post