ಶಿವಮೊಗ್ಗದಲ್ಲಿ ಭೂ ಮಾಫಿಯಾ ಅಟ್ಟಹಾಸ – ಟಾಸ್ಕ್‌ಫೋರ್ಸ್ ಸಮಿತಿ ರಚನೆಗೆ ಒತ್ತಾಯ


ಶಿವಮೊಗ್ಗದಲ್ಲಿ ಭೂ ಮಾಫಿಯಾ ಅಟ್ಟಹಾಸ – ಟಾಸ್ಕ್‌ಫೋರ್ಸ್ ಸಮಿತಿ ರಚನೆಗೆ ಒತ್ತಾಯ


                                                 

ಶಿವಮೊಗ್ಗ, ಜುಲೈ 24:
ಶಿವಮೊಗ್ಗ ನಗರ ಹಾಗೂ ತಾಲ್ಲೂಕಿನಲ್ಲಿ ಭೂ ಮಾಫಿಯಾ, ಬೊಗಸ್ ಲ್ಯಾಂಡ್ ಡೆವಲಪರ್‌ಗಳು ಹಾಗೂ ಅಧಿಕಾರಿಗಳ ಗೂಡಚಟುವಟಿಕೆಗಳಿಂದ ಸಾರ್ವಜನಿಕ ಭೂಮಿಗಳು, ಮೀಸಲು ಜಾಗಗಳು ಹಾಗೂ ದುರ್ಬಲ ವರ್ಗದವರ ಆಸ್ತಿಗಳು ಅಕ್ರಮವಾಗಿ ಕಬಳಿಕೆಯಾಗುತ್ತಿರುವ ಆರೋಪ ತೀವ್ರವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಮಗ್ರ ತನಿಖೆಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಟಾಸ್ಕ್‌ಫೋರ್ಸ್ ಸಮಿತಿ ರಚಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಒತ್ತಾಯಿಸಿದೆ.



ಸ್ವಾಭಿಮಾನಿ ಬಣದ ನಿಯೋಗವು ಜಿಲ್ಲಾಧಿಕಾರಿ ಗುರುದತ್ ಹೆಗಡೆ ಅವರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ಶಿವಮೊಗ್ಗದ ಅನೇಕ ಭಾಗಗಳಲ್ಲಿ ಭೂ ಕಬಳಿಕೆ, ನಕಲಿ ದಾಖಲೆಗಳ ಸೃಷ್ಟಿ, ಡಿ-ನೋಟಿಫಿಕೇಶನ್ ಮಾರ್ಗವಾಗಿ ಭೂಮಿಯನ್ನು ಖಾಸಗಿಯಾಗಿಸುತ್ತಿರುವ ಚಟುವಟಿಕೆಗಳ ವಿವರ ನೀಡಿದೆ. ಒಟ್ಟು 30ಕ್ಕೂ ಹೆಚ್ಚು ಭಾಗಗಳಲ್ಲಿ ಈ ರೀತಿಯ ಅಕ್ರಮ ಭೂ ವಹಿವಾಟುಗಳು ನಡೆಯುತ್ತಿದ್ದು, ಪಾಲಿಕೆ ಆಸ್ತಿಗಳೂ ಇದರಲ್ಲಿ ಒಳಗಾಗಿವೆ ಎಂದು ಮನವಿ ತಿಳಿಸಿದೆ.

ಅತಿ ಹೆಚ್ಚು ಕಬಳಿಕೆಯೇ?
ವಿನೋಬಾನಗರ, ಬೊಮ್ಮನಕಟ್ಟೆ, ಅಗಸವಳ್ಳಿ, ಗಾಡಿಕೊಪ್ಪ, ಆಯನೂರು, ಅನುಪಿನಕಟ್ಟೆ, ರಾಗಿಗುಡ್ಡ, ಶಂಕರಾಚಾರ್ಯ ಲೇಔಟ್ ಸೇರಿದಂತೆ ಹಲವೆಡೆ ಲೇಔಟ್ ರೂಪದಲ್ಲೇ ಸರಕಾರಿ ಭೂಮಿ ಮಾರಾಟವಾಗುತ್ತಿದೆ. ಕೋಟ್ಯಂತರ ರೂಪಾಯಿ ಮೌಲ್ಯದ ಸರಕಾರಿ ಜಾಗಗಳಿಗೆ ಬೇರೆಯವರ ಹೆಸರಲ್ಲಿ ನಾಮಫಲಕ ಹಾಕಲಾಗಿದ್ದು, ಕೆಲ ನ್ಯಾಯಾಲಯಗಳಲ್ಲಿ ಕೂಡ ನಕಲಿ ದಾಖಲೆಗಳ ಮೂಲಕ ಹಕ್ಕುಸ್ಥಾಪನೆಗೆ ಪ್ರಯತ್ನವಾಗಿದೆ.

ಕಾರಣಾಧಿಕಾರಿಗಳ ಪಾತ್ರಕ್ಕೂ ಪ್ರಶ್ನೆ:
ಕಂದಾಯ, ಸರ್ವೇ, ಉಪನೊಂದಣಾಧಿಕಾರಿ, ಮಹಾನಗರ ಪಾಲಿಕೆ ಹಾಗೂ ಪೊಲೀಸ್ ಇಲಾಖೆಯ ಕೆಲವು ಅಧಿಕಾರಿಗಳು ಈ ಮಾಫಿಯಾ ಜಾಲದೊಂದಿಗೆ ನೇರ ಅಥವಾ ಅಪ್ರತ್ಯಕ್ಷವಾಗಿ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ. ಕೆಲ ಪ್ರಕರಣಗಳಲ್ಲಿ ಮೊತ್ತ ಮೌಲ್ಯದ ಆಸ್ತಿಗೆ ಕೋಟ್ಯಾಂತರ ಸಾಲ ಪಡೆದು ಬ್ಯಾಂಕ್‌ಗಳನ್ನೂ ವಂಚಿಸಲಾಗುತ್ತಿದೆ.

ಟಾಸ್ಕ್‌ಫೋರ್ಸ್ ಸಮಿತಿ ಸ್ಥಾಪನೆಯ ಅವಶ್ಯಕತೆ:
ಇಂತಹ ಪ್ರಕರಣಗಳಿಗೆ ಶಾಶ್ವತ ಪರಿಹಾರಕ್ಕಾಗಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಪೋಲಿಸ್‌, ಕಂದಾಯ, ಉಪನೊಂದಾಯಣೆ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳನ್ನು ಒಳಗೊಂಡಂತೆ ಟಾಸ್ಕ್‌ಫೋರ್ಸ್ ಸಮಿತಿ ರಚಿಸಬೇಕೆಂಬುದು ವೇದಿಕೆಯ ತೀವ್ರ ಒತ್ತಾಯವಾಗಿದೆ. ಎಲ್ಲ ಅಕ್ರಮ ದಾಖಲೆಗಳನ್ನು ಪರಿಶೀಲಿಸಿ, ನಕಲಿ ದಾಖಲೆ ತಯಾರಿಸಿದವರಿಗೆ ಹಾಗೂ ಶಾಮೀಲಾಗಿರುವ ಅಧಿಕಾರಿಗಳಿಗೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಮನವಿ ಆಗ್ರಹಿಸುತ್ತದೆ.

ವರದಿ: ಡಿ.ಪಿ ಅರವಿಂದ್



Post a Comment

Previous Post Next Post