ಹಣಕಾಸು ಬಿಕ್ಕಟ್ಟಿನ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಮತ್ತೊಂದು ವೈಫಲ್ಯ: 15ನೇ ಹಣಕಾಸು ಆಯೋಗದ ಅನುದಾನ ಬಿಡುಗಡೆಗೆ ತಡವಲ್ಲದೆ ಕ್ರಮ ವಹಿಸಲು ಡಿ.ಎಸ್. ಅರುಣ್ ಆಗ್ರಹ
ಬೆಂಗಳೂರು:
ರಾಜ್ಯ ಸರ್ಕಾರದ ಆರ್ಥಿಕ ದಿವಾಳಿತನದ ಮತ್ತೊಂದು ಚಿತ್ರಣವಾಗಿ, ಕೇಂದ್ರ ಸರ್ಕಾರವು 15ನೇ ಹಣಕಾಸು ಆಯೋಗದ 2024-25ನೇ ಸಾಲಿನ ಮೂಲಭೂತ ಅನುದಾನವನ್ನು ಬಿಡುಗಡೆ ಮಾಡಿದ್ದರೂ ರಾಜ್ಯ ಸರ್ಕಾರವು ಅದನ್ನು ಗ್ರಾಮ ಪಂಚಾಯಿತಿಗಳಿಗೆ ಬಿಡುಗಡೆ ಮಾಡದೆ ವಿಲಂಬ ಮಾಡುತ್ತಿರುವ ಬಗ್ಗೆ ರಾಜ್ಯ ಭಾಜಪ ಕಾರ್ಯದರ್ಶಿ ಹಾಗೂ ಮಾನ್ಯ ವಿಧಾನ ಪರಿಷತ್ತಿನ ಸದಸ್ಯರಾದ ಡಿ.ಎಸ್. ಅರುಣ್ ರವರು ಗಂಭೀರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಂದ್ರದಿಂದ ಬಿಡುಗಡೆಯಾಗಿರುವ ಈ ಅನುದಾನವನ್ನು ಕರ್ನಾಟಕದ 6500ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಕೃಷಿ, ತೋಟಗಾರಿಕೆ, ರೇಷ್ಮೆ ಬೆಳೆಯ ಉತ್ಪಾದನೆ, ಬಡತನ ನಿರ್ಮೂಲನೆ, ಶಿಕ್ಷಣ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸೇರಿದಂತೆ ವಿವಿಧ ಮೂಲಭೂತ ಯೋಜನೆಗಳಿಗೆ ಬಳಸಬೇಕಿತ್ತು. ಆದರೆ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಮತ್ತು ಅನಿವಾರ್ಯ ಇಲ್ಲದ ಬದಲಾವಣೆಗಳಿಂದ ಅನಿರ್ಬಂಧಿತ (Untied Fund) ಶೇಕಡ 40ರಷ್ಟು ಅನುದಾನವನ್ನು ನಿರ್ಬಂಧಿತ ಅನುದಾನ (Tied Fund) ಶೀರ್ಷಿಕೆಗೆ ವರ್ಗಾಯಿಸಲಾಗಿದೆ ಎಂದು ಅವರು ದೂರಿದರು.
ಡಿ.ಎಸ್. ಅರುಣ್ ಅವರು ಇದನ್ನು ತೀವ್ರವಾಗಿ ಖಂಡಿಸಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಉದ್ದೇಶಪೂರ್ವಕ ನಿರ್ಲಕ್ಷ್ಯವನ್ನು ಶೋಚನೀಯ ಘಟನೆ ಎಂದು ವಿವರಣೆ ನೀಡಿ, ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ತಕ್ಷಣವೇ ತಪ್ಪನ್ನು ತಿದ್ದುದು ಗ್ರಾಮ ಪಂಚಾಯಿತಿಗಳಿಗೆ ಶೇಕಡ 40ರಷ್ಟು ಅನಿರ್ಬಂಧಿತ ಅನುದಾನವನ್ನು ಬಿಡುಗಡೆ ಮಾಡಲು ಸರ್ಕಾರ ಆದೇಶ ನೀಡಬೇಕೆಂದು ಆಗ್ರಹಿಸಿದರು.
ಅವರು ಎಚ್ಚರಿಸಿ ಮಾತನಾಡಿದಂತೆ, ಅನುದಾನ ಬಿಡುಗಡೆಗೆ ಆಗುತ್ತಿರುವ ತಡದಿಂದ ಗ್ರಾಮೀಣ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಂಡಿರುವುದು ದುಃಖದ ಸಂಗತಿ. ಗ್ರಾಮೀಣ ಪ್ರದೇಶದ ಜನತೆಗೆ ವಂಚನೆಯಾಗುತ್ತಿರುವುದನ್ನು ತಕ್ಷಣವೇ ಸರಿಪಡಿಸಬೇಕಾಗಿದೆ ಎಂದರು.
ರಾಜ್ಯ ಸರ್ಕಾರದ ಹಣಕಾಸು ನಿರ್ವಹಣೆಯ ವೈಫಲ್ಯಕ್ಕೆ ಇದು ಮತ್ತೊಂದು ಸ್ಪಷ್ಟ ಸಾಕ್ಷಿಯಾಗಿದೆ ಎಂದು ಡಿ.ಎಸ್. ಅರುಣ್ ಅಭಿಪ್ರಾಯಪಟ್ಟರು.


ಸೂಪರ್ ಅರವಿಂದ್ ಬ್ರದರ್
ReplyDelete