ಕೊಟ್ಟ ಮಾತನ್ನು ತಪ್ಪಿ ಭಾರತೀಯರನ್ನು ಮರುಳು ಮಾಡುವಲ್ಲಿ ಮೋದಿಗೆ ನಿಸ್ಸೀಮತೆ ಸಿ.ಎಂ ಸಿದ್ದರಾಮಯ್ಯ ಆಕ್ರೋಶ

ಕೊಟ್ಟ ಮಾತನ್ನು ತಪ್ಪಿ ನಡೆದು ಸುಳ್ಳುಗಳಿಂದ ಭಾರತೀಯರನ್ನು ಮರುಳು ಮಾಡುವಲ್ಲಿ ಮೋದಿಗೆ ನಿಸ್ಸೀಮತೆ: ಸಿ.ಎಂ ಸಿದ್ದರಾಮಯ್ಯ ಆಕ್ರೋಶ



ಹುಬ್ಬಳ್ಳಿ, ಮೇ 1 – ನಿರಂತರ ಬೆಲೆ ಏರಿಕೆ, ಜನ ವಿರೋಧಿ ಆಡಳಿತ ಮತ್ತು ಜಾತಿ–ಧರ್ಮಗಳ ನಡುವಿನ ದ್ವೇಷ ಹಬ್ಬಿಸುವ ಮೂಲಕ ತನ್ನ ವೈಫಲ್ಯ ಮುಚ್ಚಿಕೊಳ್ಳುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ನಡೆದ ಜನತಾ ಸಮಾವೇಶದಲ್ಲಿ ಮಾತನಾಡಿದ ಅವರು, “ಪ್ರಧಾನಿ ಆದ ಬಳಿಕ ಅಕ್ಕಿಯಿಂದ ಚಿನ್ನದವರೆಗೂ ಎಲ್ಲದರ ಬೆಲೆ ಆಕಾಶಕ್ಕೆ ಏರಿದೆ. ಈ ಜನದ್ರೋಹವನ್ನು ಮುಚ್ಚಿಕೊಳ್ಳಲು ದೇಶದ ಜನರ ಗಮನ ಬೇರೆಡೆಗೆ ಸೆಳೆಯುವ ಷಡ್ಯಂತ್ರ ನಡೆಯುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೆಲೆ ಏರಿಕೆಯ ಉದಾಹರಣೆಗಳನ್ನು ನೀಡಿದ ಅವರು, ಉಪ್ಪು, ಸಕ್ಕರೆ, ಟೀ, ಕಾಫಿ, ಅಕ್ಕಿ, ಬೇಳೆ, ಎಣ್ಣೆ, ಚಿನ್ನ, ಬೆಳ್ಳಿ, ಔಷಧ, ಪೆಟ್ರೋಲ್, ಡೀಸೆಲ್, ಗ್ಯಾಸು ಸೇರಿದಂತೆ ಎಲ್ಲದರ ಬೆಲೆ ಆಕಾಶಕ್ಕೇರಿರುವುದಾಗಿ ಆರೋಪಿಸಿದರು. “ಡಾಲರ್ ಬೆಲೆ 2014ರಲ್ಲಿ ₹59 ಇತ್ತು, ಈಗ ₹86 ಆಗಿದೆ. ಸಿಮೆಂಟ್ ಬೆಲೆ ₹200 ರಿಂದ ₹450ಗೆ, ಗ್ಯಾಸು ಸಿಲಿಂಡರ್ ₹425ರಿಂದ ₹850ಗೆ ಏರಿದಿದೆ” ಎಂದು ವಿವರಿಸಿದರು.


ಸಬ್ಸಿಡಿ ತೆಗೆಯಲಾಯಿತು, ಬಡವರ ಮೇಲೆ ಭಾರವಾಯಿತು ಎಂದು ಪ್ರಧಾನಿ ಮೋದಿಯನ್ನು ಪ್ರಶ್ನಿಸಿದ ಅವರು, “ಈ ಎಲ್ಲ ವಂಚನೆಗೆ ಕೊನೆ ಎಲ್ಲಿದೆ?” ಎಂದು ಕೇಳಿದರು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರನ್ನೂ ಟೀಕರಿಸಿದ ಅವರು, “ನೀವು ಬೆಲೆ ಏರಿಸುತ್ತಾ, ಆ ಹೊಣೆ ನಮ್ಮ ಮೇಲೆ ಹಾಕಲು ಯತ್ನಿಸುತ್ತಿದ್ದೀರಿ. ನಾಚಿಕೆ ಆಗುವುದಿಲ್ಲವೇ?” ಎಂದು ವ್ಯಂಗ್ಯವಾಡಿದರು.

ರಾಜ್ಯ ಸರ್ಕಾರದ ಹಾಲು ದರ ಏರಿಕೆ ಕುರಿತಂತೆ ಮಾತನಾಡಿದ ಅವರು, “ನಾವು ₹4 ದರ ಹೆಚ್ಚಿಸಿ ಅದನ್ನು ನೇರವಾಗಿ ರೈತರಿಗೆ ನೀಡಿದ್ದೇವೆ. ಆದರೆ ಕೇಂದ್ರ ಸರ್ಕಾರ ಹೆಚ್ಚಿಸಿದ ಬೆಲೆ ಏರಿಕೆಯಿಂದ ಜನರಿಗೆ ಏನು ಲಾಭ?” ಎಂದು ಪ್ರಶ್ನಿಸಿದರು.

ಸಂವಿಧಾನ ಜಾರಿಯಾಗಿ 75 ವರ್ಷವಾದರೂ ಅಸಮಾನತೆ ಹೋಗಿಲ್ಲ ಎಂಬುದಾಗಿ ಅವರು ಅಭಿಪ್ರಾಯಪಟ್ಟರು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಆರ್ಥಿಕ, ಸಾಮಾಜಿಕ, ಜಾತಿ ಗಣತೆಗೆ ಭರವಸೆ ನೀಡಿದ್ದು, ಆ ಹೋರಾಟಕ್ಕೆ ಇಂದು ಕೇಂದ್ರ ಸರ್ಕಾರ ಮಣಿದಿದೆ ಎಂದು ಸಿ.ಎಂ ತಿಳಿಸಿದರು.

“ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿಯವರ ಹೋರಾಟ ಮತ್ತು ಸೈದ್ಧಾಂತಿಕ ಬದ್ಧತೆಗೆ ಈ ಜಯ ಒದಗಿದೆ” ಎಂದು ಅವರು ಶ್ಲಾಘಿಸಿದರು.

ವರದಿ: ಡಿ.ಪಿ ಅರವಿಂದ್




Post a Comment

Previous Post Next Post