ಕೆನರಾ ಬ್ಯಾಂಕ್‌ನಲ್ಲಿ ಸೇವಾನ್ಯೂನತೆ: ಗ್ರಾಹಕರಿಗೆ ಪರಿಹಾರ ನೀಡಲು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಆಯೋಗದ ಆದೇಶ
ಶಿವಮೊಗ್ಗ, ಮೇ 17:
ಶಿವಮೊಗ್ಗದ ವಿಷ್ಣುಮೂರ್ತಿ ಕೇಕುಡ ಬಿನ್ ಶ್ರೀನಿವಾಸ ಕೇಕುಡ ಎಂಬವರು, ಕೆನರಾ ಬ್ಯಾಂಕ್ ಶಿವಮೂರ್ತಿ ಸರ್ಕಲ್ ಮತ್ತು ಬೆಂಗಳೂರು ಕಾನ್‌ಕಾರ್ಡ್ ಡಿವಿಷನ್‌ನ ಮ್ಯಾನೇಜರ್‌ಗಳ ವಿರುದ್ಧ ತಮ್ಮ ಕ್ರೆಡಿಟ್ ಕಾರ್ಡ್ ಸಂಬಂಧಿತ ಸೇವಾ ನ್ಯೂನತೆ ಕುರಿತು ವಕೀಲರ ಮೂಲಕ ಸಲ್ಲಿಸಿದ ದೂರಿನ ಹಿನ್ನೆಲೆಯಲ್ಲಿ, ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಅವರ ಪರವಾಗಿ ತೀರ್ಪು ನೀಡಿದೆ.
ದೂರುದಾರರು ಏಪ್ರಿಲ್ 2024ರಲ್ಲಿ ತಮ್ಮ ಕೆನರಾ ಬ್ಯಾಂಕ್ ಸೇವಿಂಗ್ಸ್ ಅಕೌಂಟ್‌ಗೆ ಲಿಂಕ್ ಮಾಡಲಾದ ಕ್ರೆಡಿಟ್ ಕಾರ್ಡ್ ಹ್ಯಾಕ್ ಆಗಿ, ಒಟ್ಟು ರೂ. 1.29 ಲಕ್ಷ ಕಡಿತಗೊಂಡ ಬಗ್ಗೆ ಬ್ಯಾಂಕ್‌ಗೆ ಹಲವಾರು ಬಾರಿ ದೂರು ನೀಡಿದರೂ ಯಾವುದೇ ಪರಿಹಾರ ಒದಗಿಸದಿರುವುದಾಗಿ ಆರೋಪಿಸಿದ್ದರು. ಈ ಬಗ್ಗೆ ಅವರು ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಆಯೋಗವು ವಿಚಾರಣೆ ನಡೆಸಿ, ಬ್ಯಾಂಕ್ ಅಧಿಕಾರಿಗಳು ವಕೀಲರ ಮೂಲಕ ಹಾಜರಾಗಿ, ಈ ವ್ಯವಹಾರ ದೂರುದಾರರಿಂದಲೇ ಓ.ಟಿ.ಪಿ ಅಥವಾ ಲಿಂಕ್ ಶೇರ್ ಮಾಡಿರುವುದರಿಂದ ನಡೆದದ್ದು ಮತ್ತು ತಮ್ಮತ್ತಿಂದ ಯಾವುದೇ ಸೇವಾ ನ್ಯೂನತೆ ಇಲ್ಲವೆಂದು ಹೂಡುಹೋಗಿದ್ದರು. ಆದರೆ, ದೂರುದಾರರು ಹಾಗೂ ಎದುರುದಾರರು ನೀಡಿರುವ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ಆಯೋಗವು, ಕ್ರೆಡಿಟ್ ಕಾರ್ಡ್ ಹ್ಯಾಕ್ ಆಗಿರುವ ಬಗ್ಗೆ ದೂರುದಾರರು ಸೂಕ್ತ ಸಮಯದಲ್ಲಿ ಮಾಹಿತಿ ನೀಡಿದ್ದರೂ ಬ್ಯಾಂಕ್ ಯಾವುದೇ ತಕ್ಷಣದ ಕ್ರಮ ತೆಗೆದುಕೊಂಡಿಲ್ಲವೆಂದು ಸೂಚಿಸಿದೆ. ಅಲ್ಲದೆ, ಓ.ಟಿ.ಪಿ ಅಥವಾ ಲಿಂಕ್ ಶೇರ್ ಮಾಡಿರುವುದಕ್ಕೆ ನಿರ್ದಿಷ್ಟ ದಾಖಲೆಗಳನ್ನು ಬ್ಯಾಂಕ್ ಒದಗಿಸಿಲ್ಲ.
ಆದ್ದರಿಂದ, ಆರ್.ಬಿ.ಐ ಮಾರ್ಗಸೂಚಿಗಳ ಪ್ರಕಾರ ಬ್ಯಾಂಕ್ ಸೇವಾನ್ಯೂನತೆ ಎಸಗಿದ ಹಿನ್ನಲೆಯಲ್ಲಿ, ಕೆನರಾ ಬ್ಯಾಂಕ್ 45 ದಿನಗಳ ಒಳಗೆ ರೂ. 1,33,039/- (ಬಡ್ಡಿ ಸಹಿತ) ಅನ್ನು ದೂರುದಾರರ ಖಾತೆಗೆ ಜಮೆ ಮಾಡಬೇಕು. ಈ ಮೊತ್ತಕ್ಕೆ 14/06/2024 ರಿಂದ ವಾರ್ಷಿಕ ಶೇ.9% ಬಡ್ಡಿ ಲೆಕ್ಕಹಾಕಬೇಕು. ವಿಳಂಬವಾದಲ್ಲಿ ಶೇ.12% ಬಡ್ಡಿ ವಿಧಿಸಲಾಗುವುದು. ಇದರ ಜೊತೆಗೆ ರೂ.25,000/- ಮಾನಸಿಕ ಹಿಂಸೆ ಪರಿಹಾರವಾಗಿ ಹಾಗೂ ರೂ.10,000/- ವ್ಯಾಜ್ಯ ವೆಚ್ಚವಾಗಿ ಪಾವತಿಸಬೇಕೆಂದು ಆದೇಶಿಸಲಾಗಿದೆ. ಈ ಮೊತ್ತಗಳಿಗೂ ವಾರ್ಷಿಕ ಶೇ.10% ಬಡ್ಡಿ ವಿಧಿಸುವಂತೆ ಸೂಚಿಸಲಾಗಿದೆ.
ಈ ಮಹತ್ವದ ತೀರ್ಪುನ್ನು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ ಹಾಗೂ ಸದಸ್ಯರಾದ ಬಿ.ಡಿ.ಯೋಗಾನಂದ ಭಾಂಡ್ಯ ಅವರುಗಳನ್ನು ಒಳಗೊಂಡ ಪೀಠವು 2024 ಮೇ 12ರಂದು ನೀಡಿದ್ದು, ಈ ಕುರಿತು ಆಯೋಗದ ಸಹಾಯಕ ರಿಜಿಸ್ಟಾರ್ ಮಾಹಿತಿ ನೀಡಿದ್ದಾರೆ.
ವರದಿ: ಡಿ.ಪಿ. ಅರವಿಂದ್



