ಪತ್ರಕರ್ತರ ಏಳಿಗೆಗೆ ಮಹತ್ವಾಕಾಂಕ್ಷಿ ಯೋಜನೆಗಳ ಘೋಷಣೆ

 ಶಿವಮೊಗ್ಗದಲ್ಲಿ ಕೆ.ಡ್ಲ್ಯೂ.ಜೆ.ವಿ ಸಂಘಟನೆ ಅಂಬೆಗಾಲಿ 




ಶಿವಮೊಗ್ಗ: ಪತ್ರಕರ್ತರ ಸಬಲೀಕರಣ ಹಾಗೂ ಸಾಮಾಜಿಕ ಭದ್ರತೆಗೆ ಬದ್ಧವಾಗಿರುವ ಕೆ.ಡ್ಲ್ಯೂ.ಜೆ.ವಿ (ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ) ಸಂಘಟನೆ, ಇದೀಗ ಶಿವಮೊಗ್ಗ ಜಿಲ್ಲೆಯಲ್ಲಿ ತನ್ನ ಅಸ್ತಿತ್ವವನ್ನು ದೃಢಪಡಿಸಿದ್ದು, ಪ್ರಾರಂಭದಲ್ಲಿಯೇ ಪತ್ರಿಕೋದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವವರಿಗೆ ನಾನಾ ಯೋಜನೆಗಳ ಮೂಲಕ ನೆರವು ನೀಡುವ ಗುರಿಯೊಂದಿಗೆ ಕಾರ್ಯನಿರ್ವಹಿಸುತ್ತಿದೆ.



ಇಂದು ಸಂಜೆ ಶಿವಮೊಗ್ಗದ ಖಾಸಗಿ ಹೋಟೆಲಿನಲ್ಲಿ ಸಂಘದ ಸದಸ್ಯರಿಗೆ ಗುರುತಿನ ಚೀಟಿ (ಐ.ಡಿ ಕಾರ್ಡ್) ವಿತರಣೆ ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಡಿ.ಜೆ ನಾಗರಾಜ್ ಮಾತನಾಡುತ್ತಾ, ಸಂಘದ ವಿವಿಧ ಯೋಜನೆಗಳನ್ನು ಹಂತ-ಹಂತವಾಗಿ ಜಾರಿಗೆ ತರಲಾಗುವುದು ಎಂದು ತಿಳಿಸಿದ್ದಾರೆ.



ಸಂಘದ ಯೋಜನೆಗಳ ಪ್ರಮುಖ ಅಂಶಗಳು ಹೀಗಿವೆ:

  • ಸದಸ್ಯರಿಗೆ ಅಪಘಾತ ಸಂಭವಿಸಿದಲ್ಲಿ ₹5 ಲಕ್ಷರಷ್ಟು ಅಪಘಾತ ವಿಮೆ

  • ವೈದ್ಯಕೀಯ ವಿಮೆಯ ಸೌಲಭ್ಯ

  • ಸ್ಥಳೀಯ ವರದಿಗಾರರಿಗೆ ಪ್ರತಿ ತಿಂಗಳು ₹500 ಪೆಟ್ರೋಲ್ ವೆಚ್ಚ ನೀಡುವ ಯೋಜನೆ

  • ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾಭ್ಯಾಸಕ್ಕೆ ಸಹಾಯಧನ

  • ಸದಸ್ಯರ ಕುಟುಂಬದವರಿಗೆ ವಾರ್ಷಿಕ ಕ್ರೀಡಾಕೂಟ

  • ಪ್ರತಿವರ್ಷ ಉಚಿತ ಪ್ರವಾಸ ಆಯೋಜನೆ

  • ದೀಪಾವಳಿ ಹಬ್ಬಕ್ಕೆ ಪಟಾಕಿ ಕಿಟ್ ಹಾಗೂ ಉಚಿತ ಬಟ್ಟೆ ವಿತರಣೆ

  • ಅಕಾಲಿಕ ಮರಣವಾದರೆ ಅಂತ್ಯಕ್ರಿಯೆಗೆ ₹10,000 ನೆರವು

  • ಅನಾರೋಗ್ಯದಲ್ಲಿ ₹5,000ವರೆಗೆ ಆರ್ಥಿಕ ಸಹಾಯ

ಇದೇ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಗುರುತಿನ ಚೀಟಿಗಳನ್ನು ಸ್ವೀಕರಿಸಿದರು. ಇದೇ ವರ್ಷದ ಮೇ 24 ರಂದು ಬೆಂಗಳೂರು ನಗರದಲ್ಲಿ ಸಂಘದ ರಾಜ್ಯಮಟ್ಟದ ಮೂರನೇ ಸಂಮೇಳನ ನಡೆಯಲಿದ್ದು, ಸಂಘದ ಪದಾಧಿಕಾರಿಗಳು ಹಾಗೂ ಎಲ್ಲಾ ಸದಸ್ಯರು ಭಾಗವಹಿಸುವಂತೆ ವಿನಂತಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಚಿತ್ರಪ್ಪ ಯರಬಾಳ, ಪ್ರಧಾನ ಕಾರ್ಯದರ್ಶಿ ಡಿ.ಪಿ. ಅರವಿಂದ್, ಖಜಾಂಚಿ ಕೆ.ವಿ. ಸತೀಶ್ ಗೌಡ, ಸಹಕಾರ್ಯದರ್ಶಿ ಶಿವರಾಜ್ ಬಿ.ಸಿ ಮತ್ತು ಕಾನೂನು ಸಲಹೆಗಾರ ಷಡಾಕ್ಷರಪ್ಪ ಇವರೊಂದಿಗೆ ಇನ್ನಿತರರು ಉಪಸ್ಥಿತರಿದ್ದರು.

ವರದಿ: ಎಸ್.‌ ಬಾಬು


Post a Comment

Previous Post Next Post