ದಿಗಂತ್ ನಾಪತ್ತೆ ಪ್ರಕರಣ; ಮೊಬೈಲ್ ಸಂದೇಶದ ಆಧಾರದಲ್ಲಿ ತನಿಖೆ ಚುರುಕು
ಬಂಟ್ವಾಳ: ಫೆಬ್ರವರಿ 25ರಂದು ನಾಪತ್ತೆಯಾಗಿರುವ ಫರಂಗಿಪೇಟೆ ಕಿದೆಬೆಟ್ಟಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ದಿಗಂತ್ ಪತ್ತೆಗೆ ಪೊಲೀಸರು ಚುರುಕಾಗಿ ತನಿಖೆ ಮುಂದುವರಿಸುತ್ತಿದ್ದಾರೆ. ನಾಪತ್ತೆಯಾಗಿರುವ ಏಳು ದಿನಗಳಾದರೂ ವಿದ್ಯಾರ್ಥಿಯ ಬಗ್ಗೆ ಯಾವುದೇ ನಿರ್ಣಾಯಕ ಸುಳಿವು ಸಿಕ್ಕಿಲ್ಲ. ಈ ಪ್ರಕರಣ ಇನ್ನಷ್ಟು ನಿಗೂಢತೆಯಾದರೂ, ಮೊಬೈಲ್ ಸಂದೇಶಗಳ ಆಧಾರದ ಮೇಲೆ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.
ಮೆಸೇಜ್ ಚಾಟ್ ಹಿಸ್ಟರಿಯಿಂದ ಸುಳಿವು
ದಿಗಂತ್ ನಾಪತ್ತೆಯಾದ ಬಳಿಕ ಆತನ ಮೊಬೈಲ್ ಸಂದೇಶಗಳ ಚಾಟ್ ಹಿಸ್ಟರಿಯ ಪರೀಕ್ಷೆ ನಡೆಸಲಾಗಿದ್ದು, ಕೆಲವೊಂದು ಮಹತ್ವದ ಅಂಶಗಳು ಪೊಲೀಸರ ಗಮನಕ್ಕೆ ಬಂದಿವೆ. ಈ ಮಾಹಿತಿಗಳು ದಿಗಂತ್ ಎಲ್ಲಿ ಹೋಗಿರುವ ಬಗ್ಗೆ ಕೆಲವೊಂದು ಸೂಚನೆಗಳನ್ನು ನೀಡಿದರೂ, ಸ್ಪಷ್ಟ ಚಿತ್ರಣ ಲಭಿಸಿಲ್ಲ.
ವಿವಿಧ ಠಾಣೆಗಳ ಪಿಎಸ್‌ಐಗಳ ಮೂಲಕ ಮಾಹಿತಿ ಸಂಗ್ರಹ
ಬಂಟ್ವಾಳದ ಅನುಭವಿ ಪೊಲೀಸ್ ಅಧಿಕಾರಿಗಳು ಮತ್ತು ವಿವಿಧ ಠಾಣೆಗಳ ಪಿಎಸ್‌ಐಗಳ ತಂಡ ದಿಗಂತ್ ನಾಪತ್ತೆಯಾದ ಸ್ಥಳ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ದಿಗಂತ್ ನಾಪತ್ತೆಯಾದ ನಂತರ ಯಾರನ್ನಾದರೂ ಸಂಪರ್ಕ ಮಾಡಿದ್ದಾನೆಯೇ ಎಂಬ ಬಗ್ಗೆ ಪೊಲೀಸರು ಸಮಗ್ರ ತನಿಖೆ ಮುಂದುವರಿಸಿದ್ದಾರೆ.
ಸ್ಪಷ್ಟ ಚಿತ್ರಣಕ್ಕೆ ನಿರೀಕ್ಷೆ
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ದಿಗಂತ್ ಕಾಲೇಜಿನ ಸಹಪಾಠಿಗಳು ಮತ್ತು ಸ್ನೇಹಿತರನ್ನು ವಿಚಾರಣೆ ಮಾಡುತ್ತಿದ್ದಾರೆ. ಇನ್ನೆರಡು ದಿನಗಳಲ್ಲಿ ಈ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದ ಸ್ಪಷ್ಟ ಚಿತ್ರಣ ದೊರೆಯುವ ವಿಶ್ವಾಸವನ್ನು ಪೊಲೀಸ್ ಮೂಲಗಳು ವ್ಯಕ್ತಪಡಿಸಿವೆ.
ವರದಿ: ಡಿ.ಪಿ. ಅರವಿಂದ್
