ಎಫ್7ನ್ಯೂಸ್ಗೆ ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ ಎಕ್ಸ್ಕ್ಲೂಸಿವ್ ಹೇಳಿಕೆ
"ಸಚಿವ ಸ್ಥಾನ ನೀಡದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಬಹುತೇಕ ಖಚಿತ"
ಭದ್ರಾವತಿ / ಶಿವಮೊಗ್ಗ, ಆ. 3:
ಎಫ್7ನ್ಯೂಸ್ಗೆ ನೀಡಿದ ಎಕ್ಸ್ಕ್ಲೂಸಿವ್ ಹೇಳಿಕೆಯಲ್ಲಿ ಭದ್ರಾವತಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ಕೆ. ಸಂಗಮೇಶ್ ಅವರು, ಸಚಿವ ಸ್ಥಾನ ನೀಡದಿರುವ ಹಿನ್ನೆಲೆಯಲ್ಲಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
"ನಾನು ಕಾಂಗ್ರೆಸ್ ಪಕ್ಷದಿಂದ ನಾಲ್ಕು ಬಾರಿ ಭದ್ರಾವತಿ ಕ್ಷೇತ್ರದ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಆದರೂ ಸಚಿವ ಸಂಪುಟದಲ್ಲಿ ನನಗೆ ಸ್ಥಾನ ನೀಡದಿರುವುದು ತೀವ್ರ ನಿರಾಸೆ ಉಂಟುಮಾಡಿದೆ. ಈ ಹಿನ್ನೆಲೆಯಲ್ಲಿ ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಿದ್ದೇನೆ" ಎಂದು ಅವರು ಎಫ್7ನ್ಯೂಸ್ಗೆ ತಿಳಿಸಿದ್ದಾರೆ.
ನಾಳೆ ತಮ್ಮ ಬೆಂಬಲಿಗರು ಹಾಗೂ ಕಾರ್ಯಕರ್ತರ ಸಭೆಯನ್ನು ಕರೆಯಲಾಗಿದ್ದು, ಅವರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದಾರೆ. "ಆದಾಗ್ಯೂ, ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದು ಬಹುತೇಕ ಖಚಿತ" ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ, "ಕೇವಲ ನಾನು ಮಾತ್ರವಲ್ಲ, ರಾಜ್ಯದ ವಿವಿಧ ಕ್ಷೇತ್ರಗಳ ಸುಮಾರು 15ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ. ಪರಿಸ್ಥಿತಿ ಇದೇ ರೀತಿಯಾಗಿ ಮುಂದುವರಿದರೆ ಅವರೂ ತಮ್ಮ ಶಾಸಕ ಸ್ಥಾನಗಳಿಗೆ ರಾಜೀನಾಮೆ ನೀಡುವ ಸಾಧ್ಯತೆ ಇದೆ" ಎಂದು ಸಂಗಮೇಶ್ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷವು 130ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದಿರುವ ಹಿನ್ನೆಲೆಯಲ್ಲಿ ಪಕ್ಷದ ನಾಯಕತ್ವದಲ್ಲಿ ಅಹಂಕಾರ ಹೆಚ್ಚಾಗಿದೆ. ಪಕ್ಷಕ್ಕೆ ಜನರ ಭಾವನೆಗಳಿಗಿಂತ ಅಧಿಕಾರವೇ ಮುಖ್ಯವಾಗಿರುವಂತೆ ಕಾಣುತ್ತಿದೆ. ಅವರಿಗೆ ಸೂಕ್ತ ಪಾಠ ಕಲಿಸುವ ಸಮಯ ಬಂದಿದೆ ಎಂದು ಸಂಗಮೇಶ್ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಈ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ಕಾಂಗ್ರೆಸ್ ಪಕ್ಷದೊಳಗಿನ ಅಸಮಾಧಾನ ಮತ್ತಷ್ಟು ಬಹಿರಂಗವಾಗುವ ಸಾಧ್ಯತೆ ಇದೆ. ನಾಳೆ ನಡೆಯಲಿರುವ ಬೆಂಬಲಿಗರ ಸಭೆಯ ಬಳಿಕ ಸಂಗಮೇಶ್ ಕೈಗೊಳ್ಳುವ ಅಂತಿಮ ನಿರ್ಧಾರ ರಾಜಕೀಯ ವಲಯದಲ್ಲಿ ಮಹತ್ವ ಪಡೆದುಕೊಳ್ಳುವ ನಿರೀಕ್ಷೆಯಿದೆ.
ವರದಿ: ಡಿ.ಪಿ. ಅರವಿಂದ್
ಎಫ್7ನ್ಯೂಸ್, ಶಿವಮೊಗ್ಗ


ರಾಜ್ಯ ರಾಜಕಾರಣದ ಮುಂದಿನ ದಿಕ್ಸೂಚಿ ಎಕ್ಸ್ ಕ್ಲೂಸಿವ್ ನ್ಯೂಸ್ ಗೆ ಧನ್ಯವಾದಗಳು
ReplyDeleteThank you for breaking and exclusive news arivand
ReplyDeleteಎಫ್ ಸವೆನ್ ನಲ್ಲಿ ಮಾತ್ರ ಸಿಗುತ್ತಿರುವ ಮಾಹಿತಿ ಧನ್ಯವಾದಗಳು ಅರವಿಂದ್
ReplyDelete