SIR ತ್ವರಿತವಾಗಿ ಪರಿಷ್ಕರಣೆ ಕಾರ್ಯಕ್ಕೆ ನವೀದ್ ಅಹಮದ್ ಪರ್ವೇಜ್ ಸಲಹೆ
ಶಿವಮೊಗ್ಗ, ಜು.15: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಹಾಗೂ ತ್ವರಿತಗತಿಯಲ್ಲಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಮತಗಟ್ಟೆ ಅಧಿಕಾರಿಗಳು ಮನೆ ಮನೆಗೆ ತೆರಳಿ ಸಾರ್ವಜನಿಕರಲ್ಲಿರುವ ಗೊಂದಲಗಳನ್ನು ನಿವಾರಿಸಬೇಕು ಎಂದು ಸ್ವೀಪ್ ಕಾರ್ಯಕ್ರಮದ ರಾಜ್ಯಮಟ್ಟದ ತರಬೇತುದಾರ ನವೀದ್ ಅಹಮದ್ ಪರ್ವೇಜ್ ಸಲಹೆ ನೀಡಿದರು.
ನಗರದ ಇಲಿಯಾಜ್ ನಗರದ ಖಾಸಗಿ ಕಾರ್ಯಕ್ರಮವೊಂದರಲ್ಲಿ ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದ ಸಾರ್ವಜನಿಕರು, ಗಣ್ಯರು ಹಾಗೂ ಅತಿಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಎಸ್‌ಐಆರ್ ಪ್ರಕ್ರಿಯೆಯ ಕುರಿತು ಜನರಲ್ಲಿ ಅನಗತ್ಯ ಗೊಂದಲಗಳು ಉಂಟಾಗುತ್ತಿದ್ದು, ಈ ಪ್ರಕ್ರಿಯೆ ಅತ್ಯಂತ ಸರಳ ಹಾಗೂ ಸುಲಭವಾಗಿದೆ ಎಂದು ತಿಳಿಸಿದರು.
ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಡದೆ ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಅನುಸರಿಸಬೇಕು. ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯದ ಕುರಿತು ಯಾವುದೇ ಮಾಹಿತಿ ಅಥವಾ ಸಹಾಯ ಬೇಕಿದ್ದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಅವರು ಹೇಳಿದರು.
ಯಾವುದೇ ಅರ್ಹ ಮತದಾರರು ತಮ್ಮ ಮತದಾನದ ಹಕ್ಕಿನಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಚುನಾವಣಾ ಆಯೋಗ ಈ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯವನ್ನು ಕೈಗೊಂಡಿದೆ. ಯುವ ಮತದಾರರು ಈ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಮತದಾನದ ಹಕ್ಕನ್ನು ಪಡೆದುಕೊಳ್ಳಬೇಕು ಹಾಗೂ ಇತರರಿಗೂ ಜಾಗೃತಿ ಮೂಡಿಸಬೇಕು ಎಂದು ಅವರು ಕರೆ ನೀಡಿದರು.
ಅರ್ಹ ನಾಗರಿಕರೆಲ್ಲರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವುದು, ಈಗಾಗಲೇ ಮತದಾರರ ಪಟ್ಟಿಯಲ್ಲಿರುವವರ ವಿವರಗಳನ್ನು ಪರಿಶೀಲಿಸಿ ಖಚಿತಪಡಿಸಿಕೊಳ್ಳುವುದು ಮತ್ತು ಅಗತ್ಯ ತಿದ್ದುಪಡಿಗಳನ್ನು ಮಾಡುವುದು ಈ ಅಭಿಯಾನದ ಪ್ರಮುಖ ಉದ್ದೇಶವಾಗಿದೆ ಎಂದು ನವೀದ್ ಅಹಮದ್ ಪರ್ವೇಜ್ ತಿಳಿಸಿದರು.
ಇದೇ ಸಂದರ್ಭದಲ್ಲಿ ಎಸ್‌ಐಆರ್ ಪ್ರಕ್ರಿಯೆಯ ಕುರಿತು ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಮತದಾರರ ನೋಂದಣಿ, ಹೆಸರು ಸೇರ್ಪಡೆ, ತಿದ್ದುಪಡಿ ಹಾಗೂ ಮತದಾರರ ಪಟ್ಟಿಗೆ ಸಂಬಂಧಿಸಿದ ವಿವಿಧ ಮಾಹಿತಿಗಳನ್ನು ಸಾರ್ವಜನಿಕರಿಗೆ ನೀಡಲಾಯಿತು.
ಮತಗಟ್ಟೆ ಅಧಿಕಾರಿಗಳು ಎಸ್‌ಐಆರ್ ಸಂಬಂಧಿತ ಕಾರ್ಯಗಳಲ್ಲಿ ಯಾವುದೇ ಸಮಸ್ಯೆ ಅಥವಾ ಗೊಂದಲ ಎದುರಾದಲ್ಲಿ, ಸಂಬಂಧಿಸಿದ ಹಿರಿಯ ಅಧಿಕಾರಿಗಳಿಂದ ಸೂಕ್ತ ಮಾರ್ಗದರ್ಶನ ಪಡೆದು ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಸ್ಥಳೀಯ ಮುಖಂಡರು, ಸಾರ್ವಜನಿಕರು, ವಿವಿಧ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಮತದಾರರು ಉಪಸ್ಥಿತರಿದ್ದರು.
ವರದಿ: ಡಿ.ಪಿ. ಅರವಿಂದ್
ಎಫ್7 ನ್ಯೂಸ್, ಶಿವಮೊಗ್ಗ


