ಶಿವಮೊಗ್ಗ: ಆತ್ಮಹತ್ಯೆ ಮಾಡಿಕೊಂಡ ಬಾಲಕಿಯ ಶವವನ್ನು ಸೂಟ್‌ಕೇಸ್‌ನಲ್ಲಿ ಸಾಗಿಸಿ ಕಾಡಿನಲ್ಲಿ ಹೂತ ಪ್ರಕರಣ – ನಾಲ್ವರು ಬಂಧನ
ಶಿವಮೊಗ್ಗ, ಜುಲೈ 9: ಶಿಕಾರಿಪುರ ತಾಲೂಕಿನ 16 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡ ಬಳಿಕ ಆಕೆಯ ಶವವನ್ನು ಸೂಟ್‌ಕೇಸ್‌ನಲ್ಲಿ ಸಾಗಿಸಿ ಉತ್ತರ ಕನ್ನಡ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ರಹಸ್ಯವಾಗಿ ಹೂತು ಹಾಕಿದ ಪ್ರಕರಣವನ್ನು ಶಿಕಾರಿಪುರ ಟೌನ್ ಪೊಲೀಸರು ಭೇದಿಸಿದ್ದು, ಈ ಸಂಬಂಧ ನಾಲ್ವರನ್ನು ಬಂಧಿಸಿದ್ದಾರೆ.
ಬಂಧಿತರನ್ನು ಶಿಕಾರಿಪುರದಲ್ಲಿ ಪಿಜಿ (ಪೇಯಿಂಗ್ ಗೆಸ್ಟ್) ನಡೆಸುತ್ತಿದ್ದ ಸೌಭಾಗ್ಯ, ಆಕೆಯ ಪತಿ ಗಂಗಾನಾಯ್ಕ್, ರಂಜಿತಾ ಹಾಗೂ ಆಕೆಯ ಸ್ನೇಹಿತ ಪಿರ್ಯಾನಾಯ್ಕ್ ಎಂದು ಗುರುತಿಸಲಾಗಿದೆ.
ಪ್ರಕರಣದ ಹಿನ್ನೆಲೆ
ಜುಲೈ 3ರಂದು ಶಿಕಾರಿಪುರ ತಾಲೂಕಿನ ತರಲಘಟ್ಟ ಗ್ರಾಮದ ನಿವಾಸಿ ಪರಮೇಶ್ ಅವರು ತಮ್ಮ 16 ವರ್ಷದ ಪುತ್ರಿ ಸಂಗೀತಾ ಕಾಣೆಯಾಗಿರುವ ಕುರಿತು ಶಿಕಾರಿಪುರ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನಲ್ಲಿ ಸಂಗೀತಾ 2025ರ ಜೂನ್ 18ರಿಂದ ನಾಪತ್ತೆಯಾಗಿರುವುದಾಗಿ ಉಲ್ಲೇಖಿಸಲಾಗಿತ್ತು.
ಸಂಗೀತಾ ಶಿಕಾರಿಪುರದಲ್ಲಿರುವ ಸೌಭಾಗ್ಯ ನಡೆಸುತ್ತಿದ್ದ ಪಿಜಿಯಲ್ಲಿ ವಾಸವಿದ್ದು, ಅದೇ ಕಟ್ಟಡದಲ್ಲಿದ್ದ ಬ್ಯೂಟಿ ಪಾರ್ಲರ್‌ನಲ್ಲಿ ಕೆಲಸ ಮಾಡುತ್ತಿದ್ದಳು. ಆಕೆಯನ್ನು ರಂಜಿತಾ ಪಿಜಿಗೆ ಕರೆತಂದು ಸೇರಿಸಿದ್ದಳು.
ಪೊಲೀಸರ ತನಿಖೆಯಲ್ಲಿ ತಿಳಿದುಬಂದಂತೆ, ಸಂಗೀತಾ ಸೌಭಾಗ್ಯ ಮತ್ತು ರಂಜಿತಾ ನಡುವಿನ ವೈಯಕ್ತಿಕ ವಿಚಾರಗಳನ್ನು ಪರಸ್ಪರ ಹೇಳುತ್ತಿದ್ದ ಕಾರಣ ಇಬ್ಬರ ನಡುವೆ ಅಸಮಾಧಾನ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಸೌಭಾಗ್ಯ, ಗಂಗಾನಾಯ್ಕ್, ರಂಜಿತಾ ಹಾಗೂ ಪಿರ್ಯಾನಾಯ್ಕ್ ಸೇರಿ ಸಂಗೀತಾಳನ್ನು ಕರೆದು ತೀವ್ರವಾಗಿ ಬೈದಿದ್ದರು ಎನ್ನಲಾಗಿದೆ.
ಈ ಘಟನೆಯಿಂದ ಮನನೊಂದ ಸಂಗೀತಾ ತಾನು ವಾಸಿಸುತ್ತಿದ್ದ ಪಿಜಿಯ ಕೊಠಡಿಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತನಿಖೆಯಲ್ಲಿ ಬಹಿರಂಗವಾಗಿದೆ.
ಶವವನ್ನು ಸೂಟ್‌ಕೇಸ್‌ನಲ್ಲಿ ಸಾಗಿಸಿ ಕಾಡಿನಲ್ಲಿ ಹೂತು ಹಾಕಿದ ಆರೋಪ
ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದ ಬಳಿಕ ಪ್ರಕರಣ ಬೆಳಕಿಗೆ ಬಂದರೆ ತಮಗೆ ತೊಂದರೆ ಆಗಬಹುದು ಎಂಬ ಆತಂಕದಿಂದ ನಾಲ್ವರು ಸೇರಿ ಆಕೆಯ ಶವವನ್ನು ಸೂಟ್‌ಕೇಸ್‌ನಲ್ಲಿ ಹಾಕಿ ಕಾರಿನ ಮೂಲಕ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಮಾವಿನಗುಂಡಿ ಅರಣ್ಯ ಪ್ರದೇಶಕ್ಕೆ ಕೊಂಡೊಯ್ದು ರಹಸ್ಯವಾಗಿ ಹೂತು ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ವಿಚಾರವನ್ನು ಸುಮಾರು ಒಂದು ವರ್ಷ ಯಾರಿಗೂ ತಿಳಿಸದೇ ಗುಟ್ಟಾಗಿ ಇಟ್ಟಿದ್ದರು.
ಜಗಳದಿಂದ ಬಯಲಾದ ರಹಸ್ಯ
ಇತ್ತೀಚೆಗೆ ರಂಜಿತಾ ಮತ್ತು ಪಿರ್ಯಾನಾಯ್ಕ್ ನಡುವೆ ವೈಯಕ್ತಿಕ ಕಾರಣಕ್ಕೆ ಜಗಳ ನಡೆದಿದ್ದು, ಈ ವೇಳೆ ಕೋಪಗೊಂಡ ರಂಜಿತಾ ಸಂಗೀತಾಳ ತಂದೆ ಪರಮೇಶ್ ಅವರಿಗೆ ನಡೆದ ಘಟನೆ ಬಗ್ಗೆ ಮಾಹಿತಿ ನೀಡಿದ್ದಾಳೆ ಎನ್ನಲಾಗಿದೆ.
ಇದಾದ ಬಳಿಕ ಪರಮೇಶ್ ಅವರು ಪೊಲೀಸ್ ಠಾಣೆಯಲ್ಲಿ ಪುತ್ರಿ ಕಾಣೆಯಾಗಿರುವ ಬಗ್ಗೆ ದೂರು ನೀಡಿದ್ದು, ಪೊಲೀಸರು ತನಿಖೆ ಕೈಗೊಂಡಾಗ ಪ್ರಕರಣದ ನಿಜಾಂಶ ಹೊರಬಿದ್ದಿದೆ.
ಎಸ್‌ಪಿ ನಿಖಿಲ್ ಬಿ. ಮಾಹಿತಿ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾಪತ್ತೆ ಪ್ರಕರಣ ದಾಖಲಿಸಿಕೊಂಡ ನಂತರ ಬಾಲಕಿಯ ಮೊಬೈಲ್ ಕರೆ ವಿವರಗಳು ಹಾಗೂ ಇತರ ಸಾಕ್ಷ್ಯಾಧಾರಗಳ ಪರಿಶೀಲನೆ ನಡೆಸಲಾಯಿತು. ಕಳೆದ ಒಂದು ವರ್ಷದಿಂದ ಮೊಬೈಲ್ ಬಳಕೆ ಇಲ್ಲದಿರುವುದು ಹಾಗೂ ಕೊನೆಯದಾಗಿ ರಂಜಿತಾ ಜೊತೆ ಸಂಪರ್ಕದಲ್ಲಿದ್ದ ಮಾಹಿತಿ ತನಿಖೆಗೆ ಪ್ರಮುಖ ಸುಳಿವಾಯಿತು ಎಂದು ತಿಳಿಸಿದರು.
ನಂತರ ಆರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ, ಬಾಲಕಿ ಆತ್ಮಹತ್ಯೆ ಮಾಡಿಕೊಂಡ ಬಳಿಕ ಶವವನ್ನು ಸೂಟ್‌ಕೇಸ್‌ನಲ್ಲಿ ಸಾಗಿಸಿ ಮಾವಿನಗುಂಡಿ ಅರಣ್ಯದಲ್ಲಿ ಹೂತು ಹಾಕಿರುವುದನ್ನು ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು.
ತಲೆಬುರುಡೆ ಮತ್ತು ಮೂಳೆಗಳು ಪತ್ತೆ
ಆರೋಪಿಗಳು ತೋರಿಸಿದ ಸ್ಥಳದಲ್ಲಿ ಪೊಲೀಸರು ಮಹಜರು ನಡೆಸಿ ಶವವನ್ನು ಹೊರತೆಗೆದ ವೇಳೆ ಸೂಟ್‌ಕೇಸ್‌ನೊಳಗೆ ಬಾಲಕಿಯ ತಲೆಬುರುಡೆ ಹಾಗೂ ಮೂಳೆಗಳು ಪತ್ತೆಯಾಗಿವೆ.
ಪ್ರಕರಣ ಇನ್ನೂ ತನಿಖೆಯಲ್ಲಿರುವುದರಿಂದ ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಎಸ್‌ಪಿ ತಿಳಿಸಿದ್ದಾರೆ.
ಮೃತ ಬಾಲಕಿಯ ತಂದೆಯ ಆರೋಪ
ಮೃತ ಬಾಲಕಿಯ ತಂದೆ ಪರಮೇಶ್ ಮಾತನಾಡಿ, "ನಮ್ಮ ಮನೆಯ ಪರಿಸ್ಥಿತಿಯಿಂದ ನಾನು ಮತ್ತು ನನ್ನ ಮಗಳು ಸಂಬಂಧಿಕರ ಮನೆಯಲ್ಲಿ ವಾಸಿಸುತ್ತಿದ್ದೆವು. ಆಗ ಪರಿಚಯಸ್ಥರು ಶಿಕಾರಿಪುರದಲ್ಲಿರುವ ಪಿಜಿಗೆ ಸೇರಿಸಿದರೆ ಮಗಳ ಶಿಕ್ಷಣ ಮತ್ತು ಉದ್ಯೋಗಕ್ಕೂ ಸಹಾಯವಾಗುತ್ತದೆ ಎಂದು ಹೇಳಿ ಕರೆದುಕೊಂಡು ಹೋದರು. ನಂತರ ಮಗಳು ಎಲ್ಲಿದ್ದಾಳೆ ಎಂದು ಕೇಳಿದಾಗ, 'ಆಕೆ ಯಾರೊಂದಿಗೋ ಓಡಿ ಹೋಗಿದ್ದಾಳೆ' ಎಂದು ಹೇಳುತ್ತಿದ್ದರು. ನಾನು ಹಲವು ಬಾರಿ ವಿಚಾರಿಸಿದರೂ ಬೆಂಗಳೂರಿಗೆ ಹೋಗಿದ್ದಾಳೆ ಎಂದು ತಪ್ಪು ಮಾಹಿತಿ ನೀಡಿದರು. ನನ್ನ ಮಗಳ ಸಾವಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಂಡು ನ್ಯಾಯ ಒದಗಿಸಬೇಕು" ಎಂದು ಆಗ್ರಹಿಸಿದರು.
ತನಿಖೆ ಮುಂದುವರಿಕೆ
ಪ್ರಕರಣದ ಎಲ್ಲಾ ಆಯಾಮಗಳ ಕುರಿತು ಶಿಕಾರಿಪುರ ಟೌನ್ ಪೊಲೀಸರು ತನಿಖೆ ಮುಂದುವರೆಸಿದ್ದು, ಆತ್ಮಹತ್ಯೆಗೆ ಪ್ರಚೋದನೆ, ಸಾಕ್ಷ್ಯ ನಾಶ ಹಾಗೂ ಇತರೆ ಕಾನೂನು ಅಂಶಗಳ ಕುರಿತು ಸಮಗ್ರ ತನಿಖೆ ನಡೆಸಲಾಗುತ್ತಿದೆ.
F7 NEWS BREAKING HEADLINE
ವರದಿ: ಡಿ.ಪಿ ಅರವಿಂದ್


