ಒತ್ತುವರಿದಾರರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಆರ್‌ಟಿಐ ಕಾರ್ಯಕರ್ತರ ಒತ್ತಾಯ

ಒತ್ತುವರಿದಾರರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಆರ್‌ಟಿಐ ಕಾರ್ಯಕರ್ತರ ಒತ್ತಾಯ

ವರದಿ: ಡಿ.ಪಿ. ಅರವಿಂದ್‌, ಎಫ್‌7 ನ್ಯೂಸ್‌

ಕುಣಿಗಲ್, ಜು. 21: ಸರ್ಕಾರಿ ಕೆರೆಗಳು, ರಾಜ ಕಾಲುವೆಗಳು, ಗೋಮಾಳ ಜಾಗಗಳು ಹಾಗೂ ಹುಲ್ಲುಬನ್ನಿ ಕರಾಬು ಸೇರಿದಂತೆ ಕೋಟ್ಯಂತರ ರೂಪಾಯಿ ಮೌಲ್ಯದ ಸರ್ಕಾರಿ ಆಸ್ತಿಗಳನ್ನು ಅತಿಕ್ರಮಣ ಮಾಡಿಕೊಂಡಿರುವವರ ವಿರುದ್ಧ ಕಠಿಣ ಕ್ರಮ ಕೈಗೊಂಡು, ಒತ್ತುವರಿ ತೆರವುಗೊಳಿಸಲು ವಿಫಲರಾದ ಅಧಿಕಾರಿಗಳ ಮೇಲೂ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕು ಎಂದು ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ರಾಜ್ಯಾಧ್ಯಕ್ಷ ಎಚ್‌.ಜಿ. ರಮೇಶ್‌ ಆಗ್ರಹಿಸಿದರು.

ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ವತಿಯಿಂದ ಸರ್ಕಾರಿ ಆಸ್ತಿಗಳ ಒತ್ತುವರಿದಾರರು ಹಾಗೂ ಒತ್ತುವರಿ ತೆರವುಗೊಳಿಸದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಸೋಮವಾರ ತಾಲೂಕು ಕಚೇರಿ ಮುಂಭಾಗ ಹಮ್ಮಿಕೊಂಡಿದ್ದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಉದ್ದೇಶಿಸಿ ಅವರು ಮಾತನಾಡಿದರು.

ತಾಲೂಕಿನ ಹುತ್ರಿದುರ್ಗ ಹೋಬಳಿಯ ಗೊಟ್ಟಿಕೆರೆ ಗ್ರಾಮದ ಸರ್ವೆ ನಂಬರ್‌ 21 ರಿಂದ 25ರವರೆಗೆ ಹಾದು ಹೋಗಿರುವ ರಾಜ ಕಾಲುವೆ ಒತ್ತುವರಿ, ಕುಂದೂರು ಗ್ರಾಮದ ಸರ್ವೆ ನಂಬರ್‌ 25ರಲ್ಲಿರುವ ಕಟ್ಟೆ ಮತ್ತು ಸರ್ವೆ ನಂಬರ್‌ 47ರಲ್ಲಿನ ಅತಿಕ್ರಮಣ, ಯಡಿಯೂರು ಹೋಬಳಿಯ ಬ್ಯಾಲದಕೆರೆ ಗ್ರಾಮದ ಸರ್ವೆ ನಂಬರ್‌ 83ರಲ್ಲಿರುವ ಕೋಟ್ಯಂತರ ರೂಪಾಯಿ ಮೌಲ್ಯದ ಹುಲ್ಲುಬನ್ನಿ ಕರಾಬು ಜಾಗದ ಒತ್ತುವರಿ ಸೇರಿದಂತೆ ಹಲವು ಪ್ರಕರಣಗಳನ್ನು ಅವರು ಉಲ್ಲೇಖಿಸಿದರು.

ಇದೇ ವೇಳೆ, ನಡೆಮಾವಿನಪುರ ಗ್ರಾಮದ ಸರ್ವೆ ನಂಬರ್‌ 129ರಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸುಮಾರು ಎಂಟು ಎಕರೆ ಭೂಮಿಯನ್ನು ಆಕ್ರಮಣ ಮಾಡಲಾಗಿದೆ ಎಂದು ಆರೋಪಿಸಿದ ಅವರು, ಕಸಬಾ ಹೋಬಳಿಯ ಟಿ. ಹೊಸಹಳ್ಳಿ ಗ್ರಾಮದ ಸರ್ವೆ ನಂಬರ್‌ 23, 24 ಮತ್ತು 25ರ ಸರ್ಕಾರಿ ಗೋಮಾಳ ಜಾಗಗಳು ಹಾಗೂ ಕೆಂಕೆರೆ ಗ್ರಾಮದ ಸರ್ವೆ ನಂಬರ್‌ 7 ಮತ್ತು 8ರ ಸರ್ಕಾರಿ ಭೂಮಿಯೂ ಅತಿಕ್ರಮಣಕ್ಕೆ ಒಳಗಾಗಿದೆ ಎಂದು ದೂರಿದರು.

ಸರ್ಕಾರಿ ಆಸ್ತಿಗಳನ್ನು ಅಕ್ರಮವಾಗಿ ವಶಪಡಿಸಿಕೊಂಡಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಿ, ಬಲಾಡ್ಯರ ಪಾಲಾಗಿರುವ ಭೂಮಿಯನ್ನು ಸರ್ಕಾರದ ವಶಕ್ಕೆ ಪಡೆಯಬೇಕು. ಜೊತೆಗೆ, ಒತ್ತುವರಿ ತೆರವುಗೊಳಿಸಲು ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ಮೇಲೂ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕು ಎಂದು ಅವರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ನೀಟ್‌ ಪರೀಕ್ಷೆಯಲ್ಲಿನ ಅಕ್ರಮಗಳಿಗೆ ಕೇಂದ್ರ ಸರ್ಕಾರವೇ ನೇರ ಹೊಣೆ ಎಂದು ಆರೋಪಿಸಿದ ಅವರು, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು. ಅಲ್ಲದೆ, ಲಡಾಖ್‌ ಪ್ರದೇಶದ ಹಕ್ಕುಗಳು ಮತ್ತು ಸಾರ್ವಜನಿಕರ ಹಿತಾಸಕ್ತಿಗಾಗಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸೋನಂ ವಾಂಗ್ಚುಕ್‌ ಅವರೊಂದಿಗೆ ಕೇಂದ್ರ ಸರ್ಕಾರ ನಡೆದುಕೊಂಡಿರುವ ರೀತಿಯನ್ನು ಖಂಡಿಸಿ ತಹಶೀಲ್ದಾರ್‌ರಿಗೆ ಮನವಿ ಸಲ್ಲಿಸಲಾಯಿತು.

ಧರಣಿಯಲ್ಲಿ ಹಳ್ಳಿ ಕೃಷ್ಣ, ಶಿವಮೊಗ್ಗ ಮೂರ್ತಿ, ದೀಪಕ್‌, ನರಸೇಗೌಡ, ರಂಗನಾಥ್‌, ಶಂಕರ್‌, ಹೇಮಂತ್‌, ರವಿಚಂದ್ರ, ಲಕ್ಷ್ಮಿ, ಗುರುರಾಜ್‌, ದಿವಾಕರ್‌ ಸೇರಿದಂತೆ ಹಲವರು ಭಾಗವಹಿಸಿದ್ದರು.



Post a Comment

Previous Post Next Post