ರೀ-ನೀಟ್ ಪರೀಕ್ಷೆಗೂ ಮುನ್ನ ಟೆಲಿಗ್ರಾಂ ತಾತ್ಕಾಲಿಕ ನಿಷೇಧಕ್ಕೆ ದೆಹಲಿ ಹೈಕೋರ್ಟ್ ಮುದ್ರೆ!
ನವದೆಹಲಿ: ರೀ-ನೀಟ್ (NEET-UG 2026) ಮರುಪರೀಕ್ಷೆ ನಡೆಯುತ್ತಿರುವ ಹಿನ್ನೆಲೆ ಟೆಲಿಗ್ರಾಂ ಅಪ್ಲಿಕೇಶನ್‌ಗೆ ಕೇಂದ್ರ ಸರ್ಕಾರ ವಿಧಿಸಿದ್ದ ತಾತ್ಕಾಲಿಕ ನಿಷೇಧವನ್ನು ದೆಹಲಿ ಹೈಕೋರ್ಟ್ ಸಮರ್ಥಿಸಿದೆ. ಜೂನ್ 19ರಂದು ನ್ಯಾಯಮೂರ್ತಿ Tejas Karia ನೇತೃತ್ವದ ಪೀಠ ಈ ಮಹತ್ವದ ತೀರ್ಪು ನೀಡಿದೆ.
ಟೆಲಿಗ್ರಾಂ ಸಲ್ಲಿಸಿದ್ದ ಅರ್ಜಿಯನ್ನು ತಳ್ಳಿ ಹಾಕಿದ ನ್ಯಾಯಾಲಯ, ಐಟಿ ಕಾಯ್ದೆಯ ಸೆಕ್ಷನ್ 69A ಅಡಿಯಲ್ಲಿ ಸರ್ಕಾರಕ್ಕೆ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ನಿರ್ಬಂಧಿಸುವ ಅಧಿಕಾರವಿದೆ ಎಂದು ಸ್ಪಷ್ಟಪಡಿಸಿದೆ. ಕಾನೂನಿನ ಪ್ರಕಾರ ಕೈಗೊಳ್ಳುವ ಕ್ರಮವನ್ನು ಅತಿಯಾದ ಅಥವಾ ಅನ್ಯಾಯಕರವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಇದಕ್ಕೂ ಮೊದಲು ವಿಚಾರಣೆ ವೇಳೆ, “ಕೆಲವರು ಪರೀಕ್ಷಾ ಅಕ್ರಮಕ್ಕೆ ಕೈ ಹಾಕಿದರೆ ಅದಕ್ಕಾಗಿ ಕೋಟ್ಯಾಂತರ ಬಳಕೆದಾರರ ಹಕ್ಕುಗಳನ್ನು ಕಡಿತಗೊಳಿಸುವುದು ಸರಿಯೇ?” ಎಂದು ನ್ಯಾಯಾಲಯ ಪ್ರಶ್ನಿಸಿತ್ತು. ಆದರೆ ಅಂತಿಮವಾಗಿ ಸರ್ಕಾರದ ಆದೇಶ ಸಮಂಜಸವಾಗಿದೆ ಎಂದು ತೀರ್ಮಾನಿಸಿದೆ.
ಕೇಂದ್ರ ಸರ್ಕಾರ ಟೆಲಿಗ್ರಾಂಗೆ ನಿರ್ಬಂಧ ಹೇರಿದ್ದು ಯಾಕೆ?
Ministry of Electronics and Information Technology (MeitY) ಹಾಗೂ National Testing Agency (NTA) ಶಿಫಾರಸಿನ ಮೇರೆಗೆ ಜೂನ್ 22ರವರೆಗೆ ಭಾರತದಲ್ಲಿ ಟೆಲಿಗ್ರಾಂ ಪ್ರವೇಶವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.
ಇದಲ್ಲದೆ, ಟೆಲಿಗ್ರಾಂನಲ್ಲಿ ಇರುವ message-editing ವೈಶಿಷ್ಟ್ಯವನ್ನೂ ಜೂನ್ 30ರವರೆಗೆ ಸ್ಥಗಿತಗೊಳಿಸುವಂತೆ ಸರ್ಕಾರ ಸೂಚಿಸಿದೆ.
ಗಮನಾರ್ಹವಾಗಿ, ಮೇ 3ರಂದು ನಡೆದ NEET-UG ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯ ಆರೋಪ ಕೇಳಿಬಂದ ಹಿನ್ನೆಲೆ, ಮೇ 12ರಂದು ಪರೀಕ್ಷೆಯನ್ನು ರದ್ದುಗೊಳಿಸಲಾಗಿತ್ತು. ಪ್ರಕರಣದ ತನಿಖೆಯನ್ನು Central Bureau of Investigation (CBI) ಮುಂದುವರಿಸಿದೆ.
ಒಟ್ಟಾರೆ, ರೀ-ನೀಟ್ ಪರೀಕ್ಷೆಯಲ್ಲಿ ಅಕ್ರಮ ತಡೆಗಟ್ಟಲು ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದ್ದು, ಅದಕ್ಕೆ ಈಗ ನ್ಯಾಯಾಲಯದ ಬೆಂಬಲವೂ ಸಿಕ್ಕಿದೆ.
DP ARAVIND ,F7NEWS.IN SHIVAMOGGA

