No title

ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಹೋರಾಟ ತೀವ್ರಗೊಳಿಸುವ ಎಚ್ಚರಿಕೆ; ಜಿಲ್ಲಾಧಿಕಾರಿ, ಎಸ್‌ಪಿ ಹಾಗೂ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಕೆ


ಶಿವಮೊಗ್ಗ: ನಗರದ ಬಸ್‌ಸ್ಟ್ಯಾಂಡ್ ಹಿಂಭಾಗದಲ್ಲಿ ಹಲವು ದಶಕಗಳಿಂದ ನಡೆಯುತ್ತಿರುವ ಮಂಗಳವಾರ ಸಂತೆ ವ್ಯಾಪಾರಿಗಳಿಗೆ ಪೊಲೀಸರು ತೊಂದರೆ ನೀಡುತ್ತಿರುವುದಾಗಿ ಆರೋಪಿಸಿ, ರೈತರು ಹಾಗೂ ತರಕಾರಿ ವ್ಯಾಪಾರಿಗಳ ಪರವಾಗಿ ಸಾಮಾಜಿಕ ಹೋರಾಟಗಾರ ಕಿರಣ್‌.ಕೆ ಅವರ ನೇತೃತ್ವದಲ್ಲಿ ಬುಧವಾರ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹಾಗೂ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.

ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಒಂದಾದ ಮಂಗಳವಾರ ಸಂತೆ ಸ್ಥಳವನ್ನು ಹಲವು ವರ್ಷಗಳ ಹಿಂದೆ ರೈತರು ಮತ್ತು ತರಕಾರಿ ವ್ಯಾಪಾರಿಗಳಿಗೆ ಮೀಸಲಿಡಲಾಗಿದ್ದು, ಸುಮಾರು ನೂರು ವರ್ಷಗಳಿಂದ ಶಿವಮೊಗ್ಗ ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ಇದೇ ಸ್ಥಳದಲ್ಲಿ ಮಾರಾಟ ಮಾಡುತ್ತಾ ಜೀವನೋಪಾಯ ನಡೆಸಿಕೊಂಡು ಬರುತ್ತಿದ್ದಾರೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.

ಆದರೆ ಇತ್ತೀಚಿನ ವರ್ಷಗಳಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಈ ಸಂತೆ ಸ್ಥಳವನ್ನು ರೈತರು ಹಾಗೂ ಸಣ್ಣಪುಟ್ಟ ವ್ಯಾಪಾರಿಗಳಿಂದ ಕ್ರಮೇಣ ಕಸಿದುಕೊಳ್ಳುವ ಪ್ರಯತ್ನ ನಡೆಯುತ್ತಿದೆ ಎಂಬ ಆರೋಪವನ್ನು ರೈತರು ವ್ಯಕ್ತಪಡಿಸಿದ್ದಾರೆ. ಈ ಕುರಿತು ಹಲವು ಬಾರಿ ಸರ್ಕಾರ ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಲ್ಲ ಎಂದು ಅವರು ತಿಳಿಸಿದ್ದಾರೆ.

ಇದಲ್ಲದೆ, ರೈತರು ಮತ್ತು ತರಕಾರಿ ವ್ಯಾಪಾರಿಗಳಿಗೆ ಸೂಚಿಸಲಾಗುತ್ತಿರುವ ಪರ್ಯಾಯ ಸ್ಥಳವು ವ್ಯಾಪಾರ ನಡೆಸಲು ಸೂಕ್ತವಾಗಿಲ್ಲ ಎಂಬ ಅಭಿಪ್ರಾಯವನ್ನು ವ್ಯಾಪಾರಿಗಳು ವ್ಯಕ್ತಪಡಿಸಿದ್ದಾರೆ. ಈಗ ವ್ಯಾಪಾರ ನಡೆಸುತ್ತಿರುವ ಸ್ಥಳಕ್ಕೆ ಕೆಲವರು ಪೊಲೀಸ್ ಸಿಬ್ಬಂದಿಗಳು ಬಂದು “ಇಲ್ಲಿ ವ್ಯಾಪಾರ ಮಾಡಬಾರದು” ಎಂದು ಬೆದರಿಕೆ ಹಾಕುತ್ತಿರುವುದರಿಂದ ರೈತರು ಹಾಗೂ ವ್ಯಾಪಾರಿಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಮಂಗಳವಾರ ಸಂತೆ ರೈತರಿಗೆ ನೇರ ಮಾರುಕಟ್ಟೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ಮಧ್ಯವರ್ತಿಗಳಿಲ್ಲದೆ ತಮ್ಮ ಕೃಷಿ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವ ಅವಕಾಶವನ್ನು ಒದಗಿಸುತ್ತಿದೆ. ಈ ವ್ಯವಸ್ಥೆಯನ್ನು ಬೇರೆಡೆಗೆ ಸ್ಥಳಾಂತರಿಸಿದರೆ ರೈತರಿಗೆ ದೊರೆಯುತ್ತಿರುವ ನೇರ ಮಾರುಕಟ್ಟೆ ಅವಕಾಶ ಕುಂಠಿತಗೊಳ್ಳುವ ಸಾಧ್ಯತೆ ಇದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಸಂತೆಯಲ್ಲಿ ವ್ಯಾಪಾರ ನಡೆಸುವವರಲ್ಲಿ ಹೆಚ್ಚಿನವರು ಮಹಿಳೆಯರಾಗಿದ್ದು, ಅವರ ಕುಟುಂಬಗಳ ಜೀವನೋಪಾಯವೂ ಈ ವ್ಯಾಪಾರಕ್ಕೆ ಅವಲಂಬಿತವಾಗಿದೆ. ಹೀಗಾಗಿ ಸಂತೆ ವ್ಯವಸ್ಥೆಗೆ ಅಡ್ಡಿಯಾಗುವ ಯಾವುದೇ ಕ್ರಮಗಳು ಬಡಜನರ ಆರ್ಥಿಕ ಸ್ಥಿತಿಗೆ ಗಂಭೀರ ಹೊಡೆತ ನೀಡುವ ಸಾಧ್ಯತೆ ಇದೆ ಎಂದು ಮನವಿಯಲ್ಲಿ ಹೇಳಲಾಗಿದೆ.

ಮನವಿ ಸಲ್ಲಿಸಿದ ನಂತರ ಮಹಾನಗರ ಪಾಲಿಕೆ ಆಯುಕ್ತ ಮಾಯನಗೌಡ ಅವರೊಂದಿಗೆ ಮಾತನಾಡಿದ ಕಿರಣ್‌.ಕೆ, ಬಡ ರೈತರು ಹಾಗೂ ತರಕಾರಿ ವ್ಯಾಪಾರಿಗಳ ಮನವಿಯನ್ನು ಸರ್ಕಾರ ಪರಿಗಣಿಸಿ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಸರ್ಕಾರ ಈ ಮನವಿಯನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಅವರು ಎಚ್ಚರಿಸಿದರು.

ಇನ್ನೂ, ರೈತರು ಹಾಗೂ ತರಕಾರಿ ವ್ಯಾಪಾರಿಗಳ ಜೀವನೋಪಾಯಕ್ಕೆ ತೊಂದರೆ ಉಂಟಾದರೆ ತೀವ್ರ ನಿರಾಸೆಯಿಂದ ಅವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಎದುರಾಗಬಹುದು ಎಂದು ಹೇಳುವ ಮೂಲಕ ಪಾಲಿಕೆ ಆಯುಕ್ತರಿಗೆ ಕಿರಣ್‌.ಕೆ ಎಚ್ಚರಿಕೆ ನೀಡಿದರು.

ಈ ವೇಳೆ ರೈತರು ಮತ್ತು ತರಕಾರಿ ವ್ಯಾಪಾರಿಗಳು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಸಮಸ್ಯೆಯನ್ನು ಅಧಿಕಾರಿಗಳ ಗಮನಕ್ಕೆ ತಂದರು.




Post a Comment

Previous Post Next Post