ಕನ್ನಡಕ್ಕೆ ಮನ್ನಣೆ ಇಲ್ಲದ ಖಾಸಗಿ ಶಾಲೆಗಳ ವಿರುದ್ಧ ಕರವೇ ಸ್ವಾಭಿಮಾನಿ ಬಣದ ಹೋರಾಟಕ್ಕೆ ಜಯ
ಶಿವಮೊಗ್ಗ:ಕರ್ನಾಟಕದಲ್ಲಿ ದಿನೇ ದಿನೇ ಕನ್ನಡ ಶಾಲೆಗಳಲ್ಲೇ ಕನ್ನಡ ಭಾಷೆಗೆ ಅವಮಾನವಾಗುತ್ತಿರುವುದು ಗಂಭೀರ ವಿಷಯವಾಗಿದ್ದು, ವಿಶೇಷವಾಗಿ ಶಾಲಾ ವಾರ್ಷಿಕೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕನ್ನಡ ಹಾಡುಗಳನ್ನು ಕಡೆಗಣಿಸಿ ಅನ್ಯ ಭಾಷೆಗಳ ಹಾಡುಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿರುವ ಪ್ರವೃತ್ತಿ ಹೆಚ್ಚುತ್ತಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.
ಈ ವಿಷಯವನ್ನು ಮನಗಂಡು ಕರ್ನಾಟಕ ರಕ್ಷಣಾ ವೇದಿಕೆ – ಸ್ವಾಭಿಮಾನಿ ಬಣದ ವತಿಯಿಂದ ಶಿವಮೊಗ್ಗ ಜಿಲ್ಲಾಧಿಕಾರಿಗಳು, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು (ಡಿ.ಡಿ.ಪಿ.ಐ) ಹಾಗೂ ಸಂಬಂಧಪಟ್ಟ ಬಿ.ಇ.ಒಗಳಿಗೆ ವಿರುದ್ಧವಾಗಿ ಹೋರಾಟ ನಡೆಸಿ ಮನವಿ ಸಲ್ಲಿಸಲಾಗಿತ್ತು. ಖಾಸಗಿ ಶಾಲೆಗಳು ಕನ್ನಡಕ್ಕೆ ಮನ್ನಣೆ ನೀಡದೆ ಅನ್ಯ ಭಾಷೆಗಳಿಗೆ ಪ್ರಾಮುಖ್ಯತೆ ನೀಡುತ್ತಿರುವುದು ಖಂಡನೀಯವಾಗಿದ್ದು, ಈ ಕುರಿತು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿತ್ತು.
ಕರವೇ ಸ್ವಾಭಿಮಾನಿ ಬಣದ ಮನವಿಯನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಡಳಿತ, ತಕ್ಷಣವೇ ಕ್ರಮಕ್ಕೆ ಮುಂದಾಗಿದ್ದು, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿ (ಆಡಳಿತ), ಶಿವಮೊಗ್ಗ ಜಿಲ್ಲೆಯಿಂದ ಅಧಿಕೃತ ಸುತ್ತೋಲೆಯನ್ನು ಹೊರಡಿಸಲಾಗಿದೆ. ಈ ಸುತ್ತೋಲೆಯ ಪ್ರಕಾರ, ಇನ್ನು ಮುಂದಿನ ದಿನಗಳಲ್ಲಿ ಶಾಲಾ–ಕಾಲೇಜುಗಳ ವಾರ್ಷಿಕೋತ್ಸವ ಹಾಗೂ ಕಾರ್ಯಕ್ರಮಗಳಲ್ಲಿ ಅನ್ಯ ಭಾಷೆಯ ಹಾಡುಗಳನ್ನು ಬಳಸಿದರೆ ಸಂಬಂಧಪಟ್ಟ ಸಂಸ್ಥೆಗಳ ವಿರುದ್ಧ ಜಿಲ್ಲಾಡಳಿತ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಕೆ ನೀಡಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಕರವೇ ಸ್ವಾಭಿಮಾನಿ ಬಣದ ಶಿವಮೊಗ್ಗ ಜಿಲ್ಲಾ ಅಧ್ಯಕ್ಷ ಕಿರಣ್ ಕುಮಾರ್ ಹೆಚ್.ಎಸ್., “ಇದು ನಮ್ಮ ಹೋರಾಟಕ್ಕೆ ಸಿಕ್ಕ ಸ್ಪಷ್ಟ ಜಯ. ಕನ್ನಡದ ಗೌರವವನ್ನು ಕಾಪಾಡುವಲ್ಲಿ ಜಿಲ್ಲಾಡಳಿತ ತೆಗೆದುಕೊಂಡಿರುವ ಈ ಕ್ರಮ ಸ್ವಾಗತಾರ್ಹ” ಎಂದು ಹೇಳಿದ್ದಾರೆ.
ಈ ಹೋರಾಟದಲ್ಲಿ ಕರವೇ ಸ್ವಾಭಿಮಾನಿ ಬಣದ ಜಿಲ್ಲಾ ಉಪಾಧ್ಯಕ್ಷರಾದ ಸೈಯದ್ ಮುಜಿಬುಲ್ಲ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಕವಿತಾ ಸಿ., ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಮದ್ ಶಫಿ, ಆರ್ತಿ ತಿವಾರಿ, ಜ್ಯೋತಿ, ಜಿಲ್ಲಾ ಸಂಘಟನಾ ಸಹ ಕಾರ್ಯದರ್ಶಿ ನೂರುಲ್ಲ, ಉಪಾಧ್ಯಕ್ಷರಾದ ಪದ್ಮಾ, ಅಶ್ವತ್, ಅನ್ಸರ್, ಸತೀಶ್, ಪ್ರವೀಣ್ ಕುಮಾರ್, ಸಂತೋಷ್, ಸಾಧಿಕ್ ಗುರುಪುರ ಸೇರಿದಂತೆ ಇನ್ನಿತರ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
ವರದಿ: ಡಿ.ಪಿ. ಅರವಿಂದ್
ಎಫ್7 ನ್ಯೂಸ್, ಶಿವಮೊಗ್ಗ

