ಭದ್ರಾವತಿಯಲ್ಲಿ ಮಧ್ಯಾಹ್ನದ ಬಿಸಿಯೂಟ ಸೇವಿಸಿ 64 ಸರ್ಕಾರಿ ಶಾಲಾ ಮಕ್ಕಳು ಅಸ್ವಸ್ಥ
ಅರಳಹಳ್ಳಿ ಸರ್ಕಾರಿ ಶಾಲೆಯಲ್ಲಿ ಆತಂಕ – ಮೆಗ್ಗಾನ್ ಆಸ್ಪತ್ರೆಗೆ ರವಾನೆ
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ಜಿ.ಕೆ.ಹೆಚ್.ಬಿ.ಎಸ್ ಅರಳಹಳ್ಳಿ ಸರ್ಕಾರಿ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಸೇವಿಸಿದ ಬಳಿಕ ಒಟ್ಟು 64 ಮಂದಿ ವಿದ್ಯಾರ್ಥಿಗಳು ಏಕಾಏಕಿ ಅಸ್ವಸ್ಥರಾಗಿರುವ ಘಟನೆ ಮಂಗಳವಾರ ಸಂಭವಿಸಿದೆ.
ಮಧ್ಯಾಹ್ನದ ಊಟ ಸೇವಿಸಿದ ಕೆಲವೇ ಹೊತ್ತಿನಲ್ಲಿ ಮಕ್ಕಳಿಗೆ ವಾಂತಿ, ಹೊಟ್ಟೆನೋವು, ತಲೆಸುತ್ತು ಹಾಗೂ ಅಸ್ವಸ್ಥತೆ ಕಾಣಿಸಿಕೊಂಡಿದೆ. ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಶಾಲಾ ಸಿಬ್ಬಂದಿ ಹಾಗೂ ಸ್ಥಳೀಯರು ತಕ್ಷಣವೇ ಮಕ್ಕಳನ್ನು ಭದ್ರಾವತಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಿಸಿದ್ದಾರೆ.
ಪ್ರಾಥಮಿಕ ಚಿಕಿತ್ಸೆ ಬಳಿಕ ಆರೋಗ್ಯ ಸ್ಥಿತಿ ಗಂಭೀರವಾಗಿದ್ದ ಮಕ್ಕಳನ್ನು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಆಸ್ಪತ್ರೆ ಮೂಲಗಳ ಪ್ರಕಾರ ಪ್ರಸ್ತುತ ಮಕ್ಕಳ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.
ಈ ಅನಾರೋಗ್ಯಕ್ಕೆ ಮಧ್ಯಾಹ್ನದ ಬಿಸಿಯೂಟದಲ್ಲಿ ಸಂಭವಿಸಿರುವ ವ್ಯತ್ಯಾಸವೇ ಪ್ರಮುಖ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ವಿಷಯ ತಿಳಿದ ತಕ್ಷಣ ಶಾಲೆಯ ಶಿಕ್ಷಕರು, ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಧ್ಯಾಹ್ನದ ಊಟದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಯೂಟದ ಸಂಬಂಧ ಇಂಥ ಪ್ರಕರಣಗಳು ಮರುಮರು ವರದಿಯಾಗುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಹೆಚ್ಚಿನ ವಿದ್ಯಾರ್ಥಿಗಳು ಬಡ ಹಾಗೂ ಕಾರ್ಮಿಕ ವರ್ಗದ ಕುಟುಂಬಗಳಿಗೆ ಸೇರಿದವರಾಗಿದ್ದು, ಇಂತಹ ಘಟನೆಗಳು ಪೋಷಕರಲ್ಲಿ ಭಾರಿ ಆತಂಕ ಉಂಟುಮಾಡಿವೆ.
“ಬಡ ಮಕ್ಕಳ ಪಾಲಿಗೆ ಸರ್ಕಾರ ನೀಡುವ ಬಿಸಿಯೂಟವೇ ಪ್ರಮುಖ ಪೌಷ್ಟಿಕ ಆಹಾರವಾಗಿದ್ದು, ಅದೇ ಅಸುರಕ್ಷಿತವಾಗಿರುವುದು ಸರ್ಕಾರದ ನಿರ್ಲಕ್ಷ್ಯದ ಪ್ರತೀಕವಾಗಿದೆ” ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ತಕ್ಷಣವೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಈ ಕುರಿತು ಜಿಲ್ಲಾಡಳಿತದಿಂದ ಅಧಿಕೃತ ತನಿಖೆ ನಡೆಯುತ್ತಿದ್ದು, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.
ವರದಿ: ಡಿ.ಪಿ. ಅರವಿಂದ್
ಎಫ್7 ನ್ಯೂಸ್, ಶಿವಮೊಗ್ಗ


