ಮಹಿಳಾ ವೈದ್ಯೆಯ ಹಿಜಾಬ್ ಎಳೆದಂತೆ ಕಾಣುವ ನಿತೀಶ್ ಕುಮಾರ್ ವಿಡಿಯೋ ವೈರಲ್; ಬಿಹಾರದಲ್ಲಿ ರಾಜಕೀಯ ವಿವಾದ
ಪಾಟ್ನಾ:
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸರ್ಕಾರ ಆಯೋಜಿಸಿದ್ದ ಕಾರ್ಯಕ್ರಮದ ವೇಳೆ ಮುಸ್ಲಿಂ ಮಹಿಳಾ ವೈದ್ಯೆಯ ಹಿಜಾಬ್ ಅನ್ನು ಎಳೆದಂತೆ ಕಾಣುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಾಜ್ಯದಲ್ಲಿ ತೀವ್ರ ರಾಜಕೀಯ ವಿವಾದಕ್ಕೆ ಕಾರಣವಾಗಿದೆ.
ಈ ಘಟನೆ ಪಾಟ್ನಾದಲ್ಲಿ ನಡೆದ ಸರ್ಕಾರದ ನೇಮಕಾತಿ ಪತ್ರ ವಿತರಣಾ ಕಾರ್ಯಕ್ರಮದ ವೇಳೆ ಸಂಭವಿಸಿದೆ ಎನ್ನಲಾಗಿದೆ. ವ್ಯಾಪಕವಾಗಿ ಹರಿದಾಡುತ್ತಿರುವ ವಿಡಿಯೋದಲ್ಲಿ, ವೇದಿಕೆಯ ಮೇಲೆ ಮಹಿಳಾ ವೈದ್ಯೆಯೊಂದಿಗೆ ಮಾತನಾಡುತ್ತಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಆಕೆಯ ತಲೆಯ ಹಿಜಾಬ್ ಕಡೆ ಕೈ ಚಾಚುತ್ತಿರುವುದು ಕಾಣಿಸುತ್ತದೆ. ಇದರಿಂದ ಆ ಮಹಿಳೆ ಅಸೌಕರ್ಯ ಅನುಭವಿಸಿದಂತೆ ಕಂಡುಬರುತ್ತಿದ್ದು, ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿವೆ.
ವಿಡಿಯೋ ನೋಡಲು ಇಲ್ಲಿ ಕ್ಲೀಕ್ ಮಾಡಿ
ವೈಯಕ್ತಿಕ ಗೌರವ, ಸಮ್ಮತಿ (ಕನ್ಸೆಂಟ್) ಹಾಗೂ ಧಾರ್ಮಿಕ ಗುರುತಿನ ಗೌರವ ಕುರಿತಂತೆ ಈ ವಿಡಿಯೋ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಪಕ್ಷವು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣ Xನಲ್ಲಿ ಹಂಚಿಕೊಂಡು, ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ವರ್ತನೆಯನ್ನು ತೀವ್ರವಾಗಿ ಖಂಡಿಸಿದೆ. ಸಂವಿಧಾನಾತ್ಮಕ ಹುದ್ದೆಯಲ್ಲಿ ಇರುವ ವ್ಯಕ್ತಿಗೆ ತಕ್ಕದ್ದು ಅಲ್ಲದ ವರ್ತನೆ ಇದು ಎಂದು ಆರೋಪಿಸಿ, ಆರ್‌ಜೆಡಿ ಕಟು ಪದಗಳಲ್ಲಿ ಟೀಕಿಸಿದೆ.
ವಿಡಿಯೋದಲ್ಲಿ ಉಪ ಮುಖ್ಯಮಂತ್ರಿ ಸಮ್ರಾಟ್ ಚೌಧರಿ ಮಧ್ಯಪ್ರವೇಶಿಸಲು ಪ್ರಯತ್ನಿಸಿದಂತೆ ಕಾಣುತ್ತದೆ. ಅಲ್ಲದೇ ಆರೋಗ್ಯ ಸಚಿವ ಮಂಗಲ್ ಪಾಂಡೆ ಹಾಗೂ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ದೀಪಕ್ ಕುಮಾರ್ ಕೂಡ ವೇದಿಕೆಯಲ್ಲಿ ಉಪಸ್ಥಿತರಿರುವುದು ಗಮನ ಸೆಳೆಯುತ್ತಿದೆ.
ಈ ಘಟನೆ ರಾಜ್ಯದ ರಾಜಕೀಯ ವಾತಾವರಣವನ್ನು ಮತ್ತಷ್ಟು ಕಾವೇರಿಸಿದ್ದು, ವಿರೋಧ ಪಕ್ಷಗಳು ಹೊಣೆಗಾರಿಕೆ ಕೇಳುತ್ತಿವೆ. ಸರ್ಕಾರಿ ಕಾರ್ಯಕ್ರಮಗಳಲ್ಲಿ ಮಹಿಳೆಯರು ಹಾಗೂ ಅಲ್ಪಸಂಖ್ಯಾತರ ಮೇಲಿನ ವರ್ತನೆ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಲಾಗಿದೆ.


