ಜನರ ಅನುಕೂಲಕ್ಕಾಗಿ ನೂತನ ತೆರಿಗೆ ನೀತಿ ಜಾರಿ: ಸುಪ್ರೀಂ ಕೋರ್ಟ್ ನ್ಯಾಯಾಧೀಶ ಉಜ್ವಲ್ ಭೂಯಾನ್

ಜನರ ಅನುಕೂಲಕ್ಕಾಗಿ ನೂತನ ತೆರಿಗೆ ನೀತಿ ಜಾರಿ: ಸುಪ್ರೀಂ ಕೋರ್ಟ್ ನ್ಯಾಯಾಧೀಶ ಉಜ್ವಲ್ ಭೂಯಾನ್



– ಆಲ್ ಇಂಡಿಯಾ ಫೆಡರೇಶನ್ ಆಫ್ ಟ್ಯಾಕ್ಸ್ ಪ್ರಾಕ್ಟಿಸನರ್ಸ್ 28ನೇ ರಾಷ್ಟ್ರೀಯ ಸಮ್ಮೇಳನ

– ನೂತನ ಅಧ್ಯಕ್ಷರಾಗಿ ಸಿಎ. ಎಸ್. ವೆಂಕಟರಮಣಿ ಅಧಿಕಾರ ಸ್ವೀಕಾರ

ಬೆಂಗಳೂರು, ಡಿಸೆಂಬರ್ 13:
ಸಾಮಾನ್ಯ ಜನರ ಅನುಕೂಲಕ್ಕಾಗಿ ಪಾರದರ್ಶಕತೆ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಉದ್ದೇಶದಿಂದ ನೂತನ ತೆರಿಗೆ ನೀತಿಯನ್ನು ಜಾರಿಗೆ ತರಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಾಧೀಶರಾದ ಉಜ್ವಲ್ ಭೂಯಾನ್ ತಿಳಿಸಿದ್ದಾರೆ.

ಆಲ್ ಇಂಡಿಯಾ ಫೆಡರೇಶನ್ ಆಫ್ ಟ್ಯಾಕ್ಸ್ ಪ್ರಾಕ್ಟಿಸನರ್ಸ್, ಕರ್ನಾಟಕ ಸ್ಟೇಟ್ ಚಾರ್ಟೆಡ್ ಅಕೌಂಟೆಂಟ್ಸ್ ಅಸೋಸಿಯೇಷನ್ ಹಾಗೂ ಐಸಿಎಐಯ ಬೆಂಗಳೂರು ಶಾಖೆಯ ಸಂಯುಕ್ತ ಆಶ್ರಯದಲ್ಲಿ ಬೆಂಗಳೂರು ಅರಮನೆ ಮೈದಾನದಲ್ಲಿ ಆಯೋಜಿಸಿದ್ದ 28ನೇ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಆದಾಯ ತೆರಿಗೆ ಕಾಯ್ದೆ–1961ನ್ನು ಆರು ದಶಕಗಳ ಬಳಿಕ ರದ್ದುಗೊಳಿಸಿ, ಅದರ ಬದಲಿಗೆ ಆದಾಯ ತೆರಿಗೆ ಕಾಯ್ದೆ–2025ನ್ನು ಜಾರಿಗೆ ತರಲಾಗುತ್ತಿದೆ. ಇದು ಮುಂದಿನ ಏಪ್ರಿಲ್ ತಿಂಗಳಿಂದ ಅನುಷ್ಠಾನಕ್ಕೆ ಬರಲಿದೆ. ಹೊಸ ಕಾಯ್ದೆಯಲ್ಲಿ ಅನುಸರಣೆ ಸರಳೀಕರಣ, ಡಿಜಿಟಲ್ ಪರಿವರ್ತನೆ ಮತ್ತು ತಂತ್ರಜ್ಞಾನ ಆಧಾರಿತ ವ್ಯವಸ್ಥೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಹೇಳಿದರು.

ಮಾನವೀಯ ಪಕ್ಷಪಾತವನ್ನು ಕಡಿಮೆ ಮಾಡುವ ಉದ್ದೇಶದಿಂದ ಪಾರದರ್ಶಕ ಮತ್ತು ಕಾರ್ಯಕ್ಷಮ ವ್ಯವಸ್ಥೆ ರೂಪಿಸಲಾಗಿದೆ. ವರ್ಚುವಲ್ ಡಿಜಿಟಲ್ ಆಸ್ತಿಗಳು ಹಾಗೂ ಡಿಜಿಟಲ್ ಸ್ಪೇಸ್‌ಗೆ ವ್ಯಾಪಕ ವ್ಯಾಖ್ಯಾನಗಳನ್ನು ನೀಡಲಾಗಿದೆ. ಐಟಿಆರ್ ಫಾರ್ಮ್‌ಗಳು ಮತ್ತು ತ್ರೈಮಾಸಿಕ ಟಿಡಿಎಸ್ ಫಾರ್ಮ್‌ಗಳನ್ನು ಇನ್ನಷ್ಟು ಸರಳ ಹಾಗೂ ಸುಲಭವಾಗಿ ಅರ್ಥವಾಗುವಂತೆ ಮರು ವಿನ್ಯಾಸಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.

ತೆರಿಗೆ ಪ್ರಾಕ್ಟಿಸನರ್ಸ್ ಮತ್ತು ಲೆಕ್ಕಪರಿಶೋಧಕರು ತೆರಿಗೆ ಪಾವತಿಗೆ ಸಹಾಯ ಮಾಡುವುದರೊಂದಿಗೆ ತೆರಿಗೆ ವಂಚಕರನ್ನು ಪತ್ತೆಹಚ್ಚುವ ಮಹತ್ವದ ಪಾತ್ರ ವಹಿಸುತ್ತಿರುವುದು ಸಂತಸದ ವಿಚಾರ ಎಂದರು.

ಆರ್ಥಿಕ ಸುಧಾರಣೆಗೆ ಪಾರದರ್ಶಕ ತೆರಿಗೆ ಸಂಗ್ರಹಣೆ ಅಗತ್ಯ: ವಿಭು ಬಖ್ರು

ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮಾತನಾಡಿ, ತೆರಿಗೆ ಸಂಗ್ರಹಣೆಯನ್ನು ಪಾರದರ್ಶಕವಾಗಿ ಹಾಗೂ ಕಟ್ಟುನಿಟ್ಟಾಗಿ ನಡೆಸಿದರೆ ದೇಶದ ಆರ್ಥಿಕ ಪರಿಸ್ಥಿತಿ ಇನ್ನಷ್ಟು ಬಲಿಷ್ಠವಾಗುತ್ತದೆ. 2047ರ ವೇಳೆಗೆ ದೇಶವನ್ನು ಆರ್ಥಿಕವಾಗಿ ಸದೃಢಗೊಳಿಸುವ ಹೊಣೆಗಾರಿಕೆ ಎಲ್ಲರ ಮೇಲಿದೆ. ‘ಇದು ನಮ್ಮ ದೇಶ’ ಎಂಬ ಭಾವನೆ ಪ್ರತಿಯೊಬ್ಬರಲ್ಲೂ ಇರಬೇಕು ಎಂದು ಹೇಳಿದರು.

ನೂತನ ಅಧ್ಯಕ್ಷರಾಗಿ ಸಿಎ. ಎಸ್. ವೆಂಕಟರಮಣಿ

ಆಲ್ ಇಂಡಿಯಾ ಫೆಡರೇಶನ್ ಆಫ್ ಟ್ಯಾಕ್ಸ್ ಪ್ರಾಕ್ಟಿಸನರ್ಸ್ ನೂತನ ಅಧ್ಯಕ್ಷರಾದ ಸಿಎ. ಎಸ್. ವೆಂಕಟರಮಣಿ ಮಾತನಾಡಿ, ತಮ್ಮ ಮೇಲೆ ಇಡಲಾದ ನಂಬಿಕೆಯನ್ನು ಉಳಿಸಿಕೊಂಡು ಸಂಘಟನೆಯ ಬೆಳವಣಿಗೆಗಾಗಿ ಶ್ರಮಿಸುವುದಾಗಿ ಭರವಸೆ ನೀಡಿದರು. ಜ್ಞಾನ ವೃದ್ಧಿ ಹಾಗೂ ವಿವಿಧ ಸಂಸ್ಥೆಗಳೊಂದಿಗೆ ಸಹಕಾರವನ್ನು ಬೆಳೆಸುವ ಉದ್ದೇಶ ಹೊಂದಿದ್ದೇನೆ ಎಂದರು.

ಈ ಸಂದರ್ಭದಲ್ಲಿ ಸಿಎ. ಎಸ್. ವೆಂಕಟರಮಣಿ ಅಧಿಕೃತವಾಗಿ ಅಧ್ಯಕ್ಷ ಸ್ಥಾನ ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ಫೆಡರೇಶನ್‌ನ ನಿಕಟಪೂರ್ವ ಅಧ್ಯಕ್ಷ ಸಮೀರ್ ಎಸ್. ಜೆನ್ನಿ, ಕೆಎಸ್‌ಸಿಎಎ ಅಧ್ಯಕ್ಷ ಸಿಎ. ಶಿವಪ್ರಕಾಶ್ ವಿರಕ್ತಮಠ, ಬೆಂಗಳೂರು ಶಾಖೆಯ ಅಧ್ಯಕ್ಷ ಸಿಎ. ಮಂಜುನಾಥ, ಸಮ್ಮೇಳನದ ಅಧ್ಯಕ್ಷ ಎಫ್.ಆರ್. ಸಿಂಘ್ವಿ, ಸಂಘಟನಾ ಸಮಿತಿಯ ಜಿ.ಎಸ್. ಪ್ರಶಾಂತ್, ರಾಘವೇಂದ್ರ ಪುರಾಣಿಕ್, ರವೀಂದ್ರ ಕೋರೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.




Post a Comment

Previous Post Next Post