‘ಹೆಲ್ಪ್’ ಕೇಳಿ ಬಂದ ಮಹಿಳೆಗೆ ಮಂಚದ ಆಹ್ವಾನ – DJ ಹಳ್ಳಿ ASI ವಿರುದ್ಧ ಗಂಭೀರ ಆರೋಪ
ಬೆಂಗಳೂರು:
ನಗರ ಪೊಲೀಸರ ಮೇಲೆ ಮತ್ತೊಮ್ಮೆ ಗಂಭೀರ ಆರೋಪ ಕೇಳಿಬಂದಿದೆ. DJ ಹಳ್ಳಿ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ASI ಪ್ರಕಾಶ್ ಎಂಬ ಅಧಿಕಾರಿ, ಸಹಾಯಕ್ಕಾಗಿ ಠಾಣೆಗೆ ಬಂದ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ ಎಂಬ ಆರೋಪ ಇದೀಗ ಬೆಂಗಳೂರು ಪೊಲೀಸ್ ಇಲಾಖೆಗೆ ತೀವ್ರ ಮುಜುಗರ ಉಂಟುಮಾಡಿದೆ.
ಪೀಡಿತ ಮಹಿಳೆ, ರೌಡಿ ಬಾಬಿ ಡಿಯೋಲ್ ಎಂಬಾತನ ಮನೆಯಲ್ಲಿ ಬಾಡಿಗೆದಾರಳಾಗಿ ವಾಸವಾಗಿದ್ದಳು. ರೌಡಿಯ ಕಿರಿಕಿರಿ ಹೆಚ್ಚಾಗಿದ್ದರಿಂದ ಹಾಗೂ ಲೀಸ್ ಹಣವನ್ನು ನೀಡದೆ ಸತಾಯಿಸಿದ್ದರಿಂದ ಮನನೊಂದ ಮಹಿಳೆ ನ್ಯಾಯಕ್ಕಾಗಿ DJ ಹಳ್ಳಿ ಠಾಣೆಗೆ ದೂರು ನೀಡಲು ತೆರಳಿದ್ದಾಳೆ.
ಆದರೆ, ದೂರು ಸ್ವೀಕರಿಸಬೇಕಾದ ASI ಪ್ರಕಾಶ್, ಮಹಿಳೆಯನ್ನು ನೋಡುತ್ತಿದ್ದಂತೆಯೇ ದುರುದ್ದೇಶಪೂರ್ಣವಾಗಿ ವರ್ತನೆ ಆರಂಭಿಸಿದ್ದಾನೆ ಎಂದು ಆರೋಪಿಸಲಾಗಿದೆ. ರೌಡಿಯಿಂದ ಹಣ ವಾಪಸ್ ಮಾಡಿಸಿಕೊಡುವುದಾಗಿ ಹೇಳಿ, ಅಸಭ್ಯ ಪದಗಳನ್ನು ಬಳಸಿ ಮಂಚಕ್ಕೆ ಬರಲು ಆಹ್ವಾನಿಸಿದ್ದಾನೆ ಎನ್ನಲಾಗಿದೆ.
ಈ ವರ್ತನೆಯಿಂದ ಬೆಚ್ಚಿಬಿದ್ದ ಮಹಿಳೆ, ಠಾಣೆಯಿಂದ ಹೊರಬಂದು ನೇರವಾಗಿ ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಗೆ ತೆರಳಿ, ASI ಪ್ರಕಾಶ್ ವಿರುದ್ಧ ಲಿಖಿತ ದೂರು ಸಲ್ಲಿಸಿದ್ದಾಳೆ. ಮಹಿಳೆಯ ಹೇಳಿಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು, ಪೊಲೀಸರ ನಡೆ ಕುರಿತು ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ.
ಕಾನೂನು ರಕ್ಷಣೆ ನೀಡಬೇಕಾದ ವ್ಯವಸ್ಥೆಯಲ್ಲೇ ಇಂತಹ ಆರೋಪಗಳು ಕೇಳಿಬರುತ್ತಿರುವುದು ಮಹಿಳೆಯರ ಭದ್ರತೆ ಬಗ್ಗೆ ಆತಂಕ ಮೂಡಿಸಿದೆ. ಈ ಪ್ರಕರಣದ ಕುರಿತು ಹಿರಿಯ ಅಧಿಕಾರಿಗಳು ತನಿಖೆ ನಡೆಸುವ ಸಾಧ್ಯತೆ ಇದ್ದು, ASI ಪ್ರಕಾಶ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂಬ ಒತ್ತಾಯಗಳು ಕೇಳಿಬರುತ್ತಿವೆ.


