ಧರ್ಮಸ್ಥಳದ ವಿರುದ್ದ ಅಪಪ್ರಚಾರ: “ಅನಾಮಿಕರ ಹಿಂದೆ ಶಡ್ಯಂತ್ರದ ಗುಂಪು” — ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಆರೋಪ
ಶಿವಮೊಗ್ಗ, ಆಗಸ್ಟ್ 9:
ಇಂದು ಶಿವಮೊಗ್ಗದ ವಳಾಂಗಣ ಕ್ರೀಡಾಂಗಣದಲ್ಲಿ ನಡೆದ ಶಿವಮೊಗ್ಗ ಓಪನ್ 6ನೇ ಅಂತರಾಷ್ಟ್ರೀಯ ಕರಾಟೆ ಪಂಧ್ಯವಳಿಯ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ, ಮಾಜಿ ಉಪ ಮುಖ್ಯಮಂತ್ರಿ ಮತ್ತು ಹಿರಿಯ ಬಿಜೆಪಿ ಮುಖಂಡ ಕೆ.ಎಸ್. ಈಶ್ವರಪ್ಪ ಅವರು ಧರ್ಮಸ್ಥಳದ ಬಗ್ಗೆ ನಡೆಯುತ್ತಿರುವ “ಅಪಪ್ರಚಾರ” ಕುರಿತಾಗಿ ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದರು.
ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ — “ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತುಹಾಕಲಾಗಿದೆ” ಎಂಬ — ಆರೋಪಗಳು ಸಂಪೂರ್ಣ ಸುಳ್ಳು ಎಂದು ಖಂಡಿಸಿದರು. “ಈ ಸುಳ್ಳು ಪ್ರಚಾರದ ಹಿಂದೆ ಯಾರು ಇದ್ದಾರೆ ಎಂಬುದನ್ನು ರಾಜ್ಯ ಸರ್ಕಾರ ತಕ್ಷಣವೇ ತನಿಖೆ ನಡೆಸಿ ಬಹಿರಂಗಪಡಿಸಬೇಕು. ಇದರ ಹಿಂದೆ ಬಹುತೇಕ ಹಿಂದೂ ವಿರೋಧಿ ಶಕ್ತಿಗಳು, ರಾಷ್ಟ್ರದ್ರೋಹಿ ಹಾಗೂ ಧರ್ಮದ್ರೋಹಿ ಗುಂಪುಗಳು ಕೆಲಸ ಮಾಡುತ್ತಿವೆ” ಎಂದು ಈಶ್ವರಪ್ಪ ಹೇಳಿದರು.
Video
ಅವರು ವಿಶೇಷವಾಗಿ, “ತಾನೇ ನೂರಾರು ಹೆಣಗಳನ್ನು ಹೂತುಹಾಕಿದ್ದೇನೆ” ಎಂದು ಹೇಳಿಕೊಂಡು ಮುಂದೆ ಬಂದಿರುವ ಅನಾಮಿಕ ವ್ಯಕ್ತಿ ಕುರಿತು ಕಳವಳ ವ್ಯಕ್ತಪಡಿಸಿದರು.
“ಒಬ್ಬ ವ್ಯಕ್ತಿ ನೂರಾರು ಶವಗಳನ್ನು ಸ್ವತಃ ಹೂತು ಹಾಕುವುದು ಹೇಗೆ ಸಾಧ್ಯ? ಇದೊಂದು ದೊಡ್ಡ ಮಟ್ಟದ ಶಡ್ಯಂತ್ರ. ಇದರ ಹಿಂದಿರುವ ಗುಂಪನ್ನು ಪತ್ತೆಹಚ್ಚುವುದು ಸರ್ಕಾರದ ಕರ್ತವ್ಯ. ಆ ವ್ಯಕ್ತಿಯನ್ನು ತಕ್ಷಣ ಬಂಧಿಸಿ, ಪೂರ್ಣ ವಿಚಾರಣೆ ನಡೆಸಿ, ಸತ್ಯ ಬಹಿರಂಗ ಪಡಿಸುವವರೆಗೆ ಬಿಡುಗಡೆ ಮಾಡಬಾರದು” — ಕೆ.ಎಸ್. ಈಶ್ವರಪ್ಪ.
ಅವರು ನೆನಪಿಸಿದರು — ನಿನ್ನೆ ರಾಜ್ಯ ಸರ್ಕಾರ ಹೊಸ ಕಾನೂನನ್ನು ಜಾರಿಗೆ ತಂದಿದ್ದು, ಅದರ ಪ್ರಕಾರ ಎಸ್.ಐ.ಟಿ. ತಂಡ ಯಾರನ್ನಾದರೂ ನೇರವಾಗಿ ಬಂಧಿಸಬಹುದು. “ಆ ಕಾಯ್ದೆಯ ಪ್ರಕಾರ ಮೊದಲಿಗೆ ಆ ಅನಾಮಿಕ ವ್ಯಕ್ತಿಯ ಬಂಧನ ನಡೆಯಬೇಕು. ಆಗ ಮಾತ್ರ ಹಿಂದೂ ಧರ್ಮ ಹಾಗೂ ಧರ್ಮಸ್ಥಳದ ಹೆಸರಿಗೆ ಧಕ್ಕೆ ತರುತ್ತಿರುವವರ ಮುಖವಾಡ ಕಳಚುತ್ತದೆ” ಎಂದು ಒತ್ತಾಯಿಸಿದರು.
ಈ ಘಟನೆಯಿಂದ ಇಡೀ ದೇಶದ ಹಿಂದೂ ಸಮುದಾಯಕ್ಕೆ ಅವಮಾನವಾಗಿರುವುದಾಗಿ ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ, “ಧರ್ಮಸ್ಥಳವನ್ನು ಸರ್ಕಾರ ತನ್ನ ವಶಕ್ಕೆ ತೆಗೆದುಕೊಳ್ಳುವ ಉದ್ದೇಶವೂ ಇದರ ಹಿಂದೆ ಅಡಗಿರಬಹುದು” ಎಂಬ ಅನುಮಾನವನ್ನೂ ಅವರು ವ್ಯಕ್ತಪಡಿಸಿದರು.
ವರದಿ: ಡಿ.ಪಿ. ಅರವಿಂದ್ — F7 ನ್ಯೂಸ್, ಶಿವಮೊಗ್ಗ

