ಚುನಾವಣಾ ಆಯೋಗದ ನಡೆ ಪ್ರಜಾಪ್ರಭುತ್ವಕ್ಕೆ ಧಕ್ಕೆ — ಹುಕ್ಕೇರಿಯಲ್ಲಿ ಗುಂಡೂರಾವ್ ಆಕ್ರೋಶ

ಸಿಎಂ ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ ಸಚಿವ ದಿನೇಶ್ ಗುಂಡೂರಾವ್ — “ದೇವರಾಜು ಅರಸು ಅವರ ದಾಖಲೆಯೂ ಮುರಿಯಲಿ” 


ಹುಕ್ಕೇರಿ (ಬೆಳಗಾವಿ ಜಿಲ್ಲೆ):
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವವನ್ನು ಹೊಗಳಿದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ದಿನೇಶ್ ಗುಂಡೂರಾವ್, "ದಿ. ದೇವರಾಜು ಅರಸು ಅವರ ದಾಖಲೆಯನ್ನೂ ಮುರಿಯುವಂತೆ, ಇನ್ನೂ ಹೆಚ್ಚಿನ ವರ್ಷಗಳ ಕಾಲ ಸಿಎಂ ಆಗಿ ಮುಂದುವರಿಯಲಿ" ಎಂದು ಹೇಳಿದ್ದಾರೆ.

ಹುಕ್ಕೇರಿ ತಾಲೂಕು ಆಸ್ಪತ್ರೆಗೆ ನಿರ್ಮಿಸಿರುವ ವಸತಿ ಗೃಹಗಳ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,
"ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಈಗಾಗಲೇ ಏಳು ವರ್ಷಗಳಾಗಿವೆ. ಅವರ ನಾಯಕತ್ವದಲ್ಲಿ ರಾಜ್ಯದ ಅಭಿವೃದ್ಧಿ ನಿರಂತರವಾಗಿ ನಡೆಯುತ್ತಿದೆ. ಇನ್ನೂ ಹಲವು ವರ್ಷಗಳ ಕಾಲ ಅವರು ಸಿಎಂ ಆಗಿರಲಿ ಎಂಬುದು ನನ್ನ ಹಾರೈಕೆ" ಎಂದರು.


ಚುನಾವಣಾ ಆಯೋಗದ ಕಾರ್ಯ ಶೈಲಿಯ ಮೇಲೆ ಪ್ರಶ್ನೆ

ರಾಹುಲ್ ಗಾಂಧಿ ಅವರು ಮಾಡಿದ "ಮತಗಳ್ಳತನ" ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಗುಂಡೂರಾವ್,
"ಬಿಜೆಪಿಯವರು ಪ್ಯಾಕ್ಟ್ ಚೆಕ್ ಮಾಡಬೇಕೆಂದು ಹೇಳುತ್ತಿದ್ದಾರೆ, ಆದರೆ ನಾವು ಈಗಾಗಲೇ ಚುನಾವಣಾ ಆಯೋಗಕ್ಕೆ ಎಲ್ಲ ಮಾಹಿತಿ ನೀಡಿದ್ದೇವೆ. ಬಿಹಾರದಲ್ಲಿ ಚುನಾವಣೆಗೆ ಮುನ್ನ 50–60 ಲಕ್ಷ ಮತದಾರರ ಹೆಸರನ್ನು ಪಟ್ಟಿ ತೆಗೆದು ಹಾಕಿರುವುದು ಗಂಭೀರ ವಿಷಯ. ಚುನಾವಣೆ ಸಮೀಪದಲ್ಲಿ ಹೆಸರನ್ನು ಕೈ ಬಿಡುವುದು ಪ್ರಜಾಪ್ರಭುತ್ವ ಹಕ್ಕನ್ನು ಕಸಿದುಕೊಂಡಂತೆ. ಆಯೋಗ ಸ್ವತಂತ್ರವಾಗಿ, ಪಾರದರ್ಶಕವಾಗಿ ನಡೆದುಕೊಳ್ಳುತ್ತಿಲ್ಲ" ಎಂದು ಆರೋಪಿಸಿದರು.

ಅವರು ಇನ್ನೂ ಹೇಳಿದರು:
"ರಾಹುಲ್ ಗಾಂಧಿ ಆರು ತಿಂಗಳಿನಿಂದ ಮಾಹಿತಿ ಸಂಗ್ರಹಿಸಿ ಮಾತನಾಡುತ್ತಿದ್ದಾರೆ. ಇದು ಯಾವುದೇ ಒಂದು ಪಕ್ಷದ ವಿಚಾರವಲ್ಲ; ಪ್ರಜಾಪ್ರಭುತ್ವಕ್ಕೆ ಸಂಬಂಧಿಸಿದ ವಿಷಯ. ಆಯೋಗ ಗಂಭೀರವಾಗಿ ಪರಿಶೀಲಿಸಿ ಜನತೆಗೆ ಸ್ಪಷ್ಟನೆ ನೀಡಬೇಕು. ಹಾರಿಕೆಯ ಉತ್ತರಗಳು ಜನತೆಗೆ ಬೇಡ" ಎಂದರು.


ಸಿಎಂ ಇಬ್ರಾಹಿಂ ಕುರಿತು ಟೀಕೆ

ಸಿಎಂ ಇಬ್ರಾಹಿಂ ಅವರು ನೀಡಿರುವ ಆರೋಪಗಳ ಕುರಿತು ಮಾತನಾಡಿದ ಗುಂಡೂರಾವ್,
"ಇಬ್ರಾಹಿಂ ಪ್ರತಿದಿನ ವಿಭಿನ್ನ ಹೇಳಿಕೆ ನೀಡುತ್ತಾರೆ, ಅದಕ್ಕೆ ಮಾನ್ಯತೆ ನೀಡಲು ಸಾಧ್ಯವಿಲ್ಲ" ಎಂದು ಹೇಳಿದರು.


ಒಟ್ಟಾರೆ, ಹುಕ್ಕೇರಿಯ ವೇದಿಕೆಯಲ್ಲಿ ಸಚಿವ ದಿನೇಶ್ ಗುಂಡೂರಾವ್ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಭರ್ಜರಿ ಬೆಂಬಲ ವ್ಯಕ್ತಪಡಿಸಿದ್ದು, ಚುನಾವಣಾ ಆಯೋಗದ ಪಾರದರ್ಶಕತೆ ಮತ್ತು ಸ್ವಾತಂತ್ರ್ಯದ ಬಗ್ಗೆ ಗಂಭೀರ ಪ್ರಶ್ನೆ ಎತ್ತಿದ್ದಾರೆ.

ವರದಿ: ಡಿ.ಪಿ ಅರವಿಂದ್



Post a Comment

Previous Post Next Post