ಶ್ರೀನರಸಿಂಹಸ್ವಾಮಿ ದೇವಾಲಯದ ಮೂರ್ತಿಗೆ ಅವಮಾನ: ಆರೋಪಿಯನ್ನು ನಾಲ್ಕು ಗಂಟೆಗಳಲ್ಲಿ ಪತ್ತೆಹಚ್ಚಿದ ಅನವಟ್ಟಿ ಪೊಲೀಸರು
ಶಿವಮೊಗ್ಗ, ಜುಲೈ 22:
ಸೊರಬ ತಾಲ್ಲೂಕಿನ ಅನವಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರಿರುವ ಕುಬಟೂರು ಗ್ರಾಮದ ಶ್ರೀನರಸಿಂಹಸ್ವಾಮಿ ದೇವಾಲಯದಲ್ಲಿ ನಡೆದ ಭಕ್ತಹೃದಯ ತೊಳಲಿಸುವ ಘಟನೆ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜುಲೈ 21 ರಂದು ಮಧ್ಯಾಹ್ನ 2.00 ಗಂಟೆಯಿಂದ 4.00 ಗಂಟೆಯ ನಡುವೆ ದೇವಾಲಯದ ಆವರಣದಲ್ಲಿ ಇರುವ ಶ್ರೀ ನರಸಿಂಹಸ್ವಾಮಿ ಮೂರ್ತಿಗೆ ಯಾರೋ ದುಷ್ಕರ್ಮಿಗಳು ಅವಮಾನಿಸಿದ್ದು, ಈ ಕುರಿತು ಮಾಹಿತಿ ಜುಲೈ 22 ರಂದು ಬೆಳಿಗ್ಗೆ 10.00 ಗಂಟೆಗೆ ಪೊಲೀಸ್ ಇಲಾಖೆಗೆ ಲಭ್ಯವಾಯಿತು.
ಮಾಹಿತಿಯಡಿಯಲ್ಲಿ ತಕ್ಷಣ ಸ್ಥಳಕ್ಕೆ ಅನವಟ್ಟಿ ಠಾಣೆಯ ಪಿ.ಎಸ್.ಐ. ಶ್ರೀ ಚಂದನ್ ಮತ್ತು ಪೊಲೀಸ್ ಸಿಬ್ಬಂದಿಯವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೂಡಲೇ ಕಾರೀಪುರ ಉಪವಿಭಾಗದ ಡಿವೈಎಸ್‌ಪಿ ಮತ್ತು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಮಿಥುನ್ ಕುಮಾರ್ ಐಪಿಎಸ್ ಅವರ ಮಾರ್ಗದರ್ಶನದಲ್ಲಿ ತನಿಖೆ ಆರಂಭಿಸಲಾಯಿತು.
ಅವರ ಮಾರ್ಗದರ್ಶನದಂತೆ ಕಾರ್ಯೋನ್ಮುಖವಾದ ಪಿ.ಎಸ್.ಐ. ಚಂದನ್ ಮತ್ತು ತಂಡವು ಕೇವಲ ನಾಲ್ಕು ಗಂಟೆಗಳ ಒಳಗೆ ಆರೋಪಿತನನ್ನು ಪತ್ತೆ ಹಚ್ಚಿ ಬಂಧನಕ್ಕೊಳಪಡಿಸಿದೆ. ಆರೋಪಿಯಾಗಿರುವ 32 ವರ್ಷದ ಕೋಟೇಶ್ವರ ಬಿನ್ ಮಹಾಭಲೇಶ್ವರ, ಲಿಂಗಾಯತ ಸಮುದಾಯದವರು, ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಗೊಂದಿ ಗ್ರಾಮದ ನಿವಾಸಿ ಎಂದು ಗುರುತಿಸಲಾಗಿದೆ.
ಈ ಪ್ರಕರಣದಲ್ಲಿ ಆರೋಪಿಯ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು, ಅತ್ಯಂತ ವೇಗವಾಗಿ ಮತ್ತು ಸಮರ್ಥವಾಗಿ ಪ್ರಕರಣದ ತನಿಖೆ ನಡೆಸಿದ ಅನವಟ್ಟಿ ಠಾಣೆಯ ಪಿ.ಎಸ್.ಐ. ಚಂದನ್ ಹಾಗೂ ಅವರ ತಂಡದ ಕಾರ್ಯಕ್ಷಮತೆಗೆ ಮಾನ್ಯ ಪೊಲೀಸ್ ಅಧೀಕ್ಷಕರು ಅಭಿನಂದನೆ ವ್ಯಕ್ತಪಡಿಸಿದ್ದಾರೆ.
ವರದಿ: ಡಿ.ಪಿ. ಅರವಿಂದ್
F7 ನ್ಯೂಸ್ – ಶಿವಮೊಗ್ಗ

