ಹಿರಿಯ ರಾಜಕಾರಣಿ ಹಾಗೂ ಮಲೆನಾಡಿನ ಜನಪರ ನಾಯಕ, ಮಾಜಿ ಸಚಿವ ಶ್ರೀ ಬೇಗಾನೆ ರಾಮಯ್ಯನವರು 90ನೇ ವಯಸ್ಸಿನಲ್ಲಿ ಇಂದು ವಿಧಿವಶರಾಗಿದ್ದಾರೆ. ಈ ಸುದ್ದಿಯು ರಾಜ್ಯದ ರಾಜಕೀಯ ಕ್ಷೇತ್ರದವರು ಸೇರಿದಂತೆ ಸಾಮಾನ್ಯ ಜನರಲ್ಲಿ ಆಘಾತ ಮೂಡಿಸಿದೆ.
ಈ ಕುರಿತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಶ್ರೀ ಮಧು ಬಂಗಾರಪ್ಪ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ರಾಮಯ್ಯನವರ ಕುಟುಂಬದವರಿಗೆ ಸಾಂತ್ವನ ತಿಳಿಸಿದ್ದಾರೆ. ಅವರು ಇಂದು ರಾಮಯ್ಯನವರ ನಿವಾಸ ಸೀತಾ ಫಾರಂ, ಹೊಸಹಳ್ಳಿಗೆ ಭೇಟಿ ನೀಡಿದ್ದು, ಪಾರ್ಥಿವ ಶರೀರದ ದರ್ಶನ ಪಡೆದ ಬಳಿಕ ಅಂತಿಮ ನಮನ ಸಲ್ಲಿಸಿದರು.
ಈ ವಿಷಯವಾಗಿ ಮಾತನಾಡಿರುವ ಕಾಂಗ್ರೆಸ್ ಪಕ್ಷದ ಜಿಲ್ಲಾ ಪ್ರಧಾನಕಾರ್ಯದರ್ಶಿ ಯಾಗಿರುವ ಶಿವಲಿಂಗ ಮೂರ್ತಿಯವರು ಇವರ ವಿಚಾರವಾಗಿ ಮಾತನಾಡಿವುದು ಹೀಗಿದೆ.
ಸಂತಾಪ ಸಂದೇಶದಲ್ಲಿ ಸಚಿವರು ಹೇಳಿದ್ದಾರೆ:
“ಬೇಗಾನೆ ರಾಮಯ್ಯನವರ ನಿಧನವು ಮಲೆನಾಡಿನ ರಾಜಕೀಯ ರಂಗಕ್ಕೆ ತುಂಬಲಾರದ ನಷ್ಟ. ಅವರು ತಮ್ಮ ಜೀವನವನ್ನೇ ಸಾರ್ವಜನಿಕ ಸೇವೆಗೆ ಸಮರ್ಪಿಸಿದ್ದ ಮಹಾನ್ ವ್ಯಕ್ತಿತ್ವ. ಅವರ ಸರಳತೆ, ಪ್ರಾಮಾಣಿಕತೆ ಮತ್ತು ಜನಪರ ಸೇವೆ ಎಂದಿಗೂ ಮರೆಯಲಾಗದು. ಮಲೆನಾಡಿನಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಲ್ಪಿಸಲು ಅವರು ಕೊಳವೆ ಬಾವಿಗಳನ್ನು ಸ್ಥಾಪಿಸಿದ ಮೂಲಕ ‘ಬೋರ್ವೆಲ್ ರಾಮಯ್ಯ’ ಎಂಬ ಖ್ಯಾತಿಗೆ ಪಾತ್ರರಾದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.”
ರಾಜಕೀಯ ಮತ್ತು ಸಾರ್ವಜನಿಕ ಜೀವನದಲ್ಲಿ ರಾಮಯ್ಯನವರ ಕೊಡುಗೆ:
ಬೇಗಾನೆ ರಾಮಯ್ಯನವರು ಶೃಂಗೇರಿ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿ, ಮಾಜಿ ಮುಖ್ಯಮಂತ್ರಿ ಶ್ರೀ ಆರ್. ಗುಂಡೂರಾವ್ ಸಂಪುಟದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಅವರ ಮುಂದಾಳತ್ವದಲ್ಲಿ ಶೃಂಗೇರಿ ಹಾಗೂ ಸುತ್ತಮುತ್ತಲಿನ ಜನತೆಗೆ ಕುಡಿಯುವ ನೀರಿನ ಹಕ್ಕು ಸಾಕಾರವಾಯಿತು. ಅವರು ಶ್ರಮಿಸಿದ ಕೊಳವೆ ಬಾವಿಗಳಿಂದ ಸಾವಿರಾರು ಜನರಿಗೆ ತೃಪ್ತಿಯ ನೀರು ಲಭ್ಯವಾಯಿತು.
ಶ್ರದ್ಧಾಂಜಲಿ ಸಭೆಯಲ್ಲಿ ಉಪಸ್ಥಿತರಿದ್ದರು:
ಈ ಸಂದರ್ಭದಲ್ಲಿ ಅವರ ಪುತ್ರಿ ಮತ್ತು ನಿವಾಸಿ ಭಾರತೀಯ ಉಪಾಧ್ಯಕ್ಷೆ ಶ್ರೀಮತಿ ಆರತಿ ಕೃಷ್ಣ, ಕೆಪಿಸಿಸಿ ಹಿಂದುಳಿದ ವರ್ಗಗಳ ಸಂಯೋಜಕರಾದ ಜಿ.ಡಿ. ಮಂಜುನಾಥ್, ಸ್ಥಳೀಯ ಕಾಂಗ್ರೆಸ್ ಮುಖಂಡ ಶಮಂತ್, ಗ್ಯಾರಂಟಿ ಸಮಿತಿಯ ಶಿವಮೊಗ್ಗ ತಾಲೂಕು ಅಧ್ಯಕ್ಷರಾದ ಎಚ್.ಎಮ್. ಮಧು, ತಹಶೀಲ್ದಾರ್ ರಾಜೀವ್, ಮಾಜಿ ಸಚಿವ ಜಗತ್ ಮತ್ತು ಇತರ ಸ್ಥಳೀಯ ನಾಯಕರು, ಅಧಿಕಾರಿಗಳು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

