"ಭಯಾನಕ ಉಗ್ರ ಕೃತ್ಯಕ್ಕೆ ಸಿ.ಎಂ ಸಿದ್ದರಾಮಯ್ಯ ಕಿವಿಮಾತು: 'ಇಂಥ ರಾಕ್ಷಸತ್ವ ಭವಿಷ್ಯದಲ್ಲಿ ಪುನರಾವೃತ್ತವಾಗಬಾರದು'"
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮತ್ತೀಕೆರೆಯಲ್ಲಿರುವ ಭರತ್ ಭೂಷಣ್ ಅವರ ನಿವಾಸಕ್ಕೆ ತೆರಳಿ ಅವರಿಗೆ ಅಂತಿಮ ನಮನ ಸಲ್ಲಿಸಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಥಮವಾಗಿ 7 ಕೋಟಿ ಕನ್ನಡಿಗರ ಪರವಾಗಿ ಭರತ್ ಭೂಷಣ್ ಅವರಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸುತ್ತಿರುವುದಾಗಿ ಹೇಳಿದರು.
"ಇದು ಉಗ್ರರು ನಡೆಸಿದ ಅಮಾನವೀಯ ಕೃತ್ಯ. ಇಂಥ ಕಾರ್ಯಗಳನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಇಂಥ ಉಗ್ರರನ್ನು ಸಂಪೂರ್ಣವಾಗಿ ಮಟ್ಟಹಾಕುವುದು ಸರ್ಕಾರಗಳ ಜವಾಬ್ದಾರಿಯಾಗಿದೆ. ಇಂತಹ ಕ್ರೂರತೆಯ ಹಿಂದಿರುವ ಉಗ್ರರಿಗೆ ಕೇಂದ್ರ ಸರ್ಕಾರ ಯಾವುದೇ ರಿಯಾಯಿತಿಯನ್ನು ನೀಡಬಾರದು. ನಾವು ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಬೆಂಬಲದೊಂದಿಗೆ ನಿಲ್ಲುತ್ತೇವೆ. ಇಂತಹ ಉಗ್ರರನ್ನು ನಾಶ ಮಾಡುವಲ್ಲಿ ಯಾವುದೇ ಹಿಂದೇಟು ಇರಬಾರದು," ಎಂದು ಅವರು ಎಚ್ಚರಿಸಿದರು.
ಈ ಭಯಾನಕ ಕೃತ್ಯದಲ್ಲಿ ಕರ್ನಾಟಕದ ಇಬ್ಬರು ವ್ಯಕ್ತಿಗಳು ಪ್ರಾಣ ಕಳೆದುಕೊಂಡಿದ್ದು, ಅವರ ಕುಟುಂಬಗಳಿಗೆ ತಲಾ ₹10 ಲಕ್ಷ ಪರಿಹಾರವನ್ನು ರಾಜ್ಯ ಸರ್ಕಾರದಿಂದ ನೀಡಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದರು. ಈ ಸಂಬಂಧ, ಶಿವಮೊಗ್ಗದಲ್ಲಿ ಮಧು ಬಂಗಾರಪ್ಪ ಮತ್ತು ಬೆಂಗಳೂರಿನಲ್ಲಿ ರಾಮಲಿಂಗಾ ರೆಡ್ಡಿ ಮೃತರ ಅಂತ್ಯಕ್ರಿಯೆಗಳಲ್ಲಿ ಭಾಗವಹಿಸಲಿದ್ದಾರೆ.
ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರನ್ನು ಕಾಶ್ಮೀರಕ್ಕೆ ಕಳುಹಿಸಲಾಗಿದ್ದು, ಅವರು ಮೃತದೇಹಗಳನ್ನು ಕರ್ನಾಟಕಕ್ಕೆ ಕರೆತರಲಿದ್ದಾರೆ. ಅಲ್ಲದೆ ಕಾಶ್ಮೀರದಲ್ಲಿ ಇರುವ 140ಕ್ಕೂ ಅಧಿಕ ಕನ್ನಡಿಗರನ್ನು ಸುರಕ್ಷಿತವಾಗಿ ಮರಳಿ ಕರೆತರಲು ಕ್ರಮ ಕೈಗೊಳ್ಳಲಾಗಿದೆ. "ಇದು ರಾಜ್ಯ ಸರ್ಕಾರದ ಜವಾಬ್ದಾರಿ," ಎಂದು ಅವರು ಪುನರುಚ್ಚರಿಸಿದರು.
ಘಟನೆಯ ಹಿಂದಿನ ಗುಪ್ತಚರ ಮಾಹಿತಿ ಸೋರಿಕೆಯು ಕಾರಣವಾಗಿರಬಹುದೆಂಬ ಅನುಮಾನವನ್ನು ವ್ಯಕ್ತಪಡಿಸಿದ ಸಿ.ಎಂ, ಕೇಂದ್ರ ಸರ್ಕಾರ ಈಗಾಗಲೇ ಕೆಲ ಕ್ರಮಗಳನ್ನು ತೆಗೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂದು ವಾದಿಸಿದರು.
ವರದಿ: ಡಿ.ಪಿ. ಅರವಿಂದ್
ಎಫ್7 ನ್ಯೂಸ್, ಶಿವಮೊಗ್ಗ

