ಮೇ 1ರಿಂದ ಜೋಗ ಜಲಪಾತದ ವೀಕ್ಷಣೆಗೆ ಸಾರ್ವಜನಿಕ ಪ್ರವೇಶ ಮತ್ತೆ ಆರಂಭ
ಶಿವಮೊಗ್ಗ, ಏಪ್ರಿಲ್ 24:
ಜಿಲ್ಲೆಯ ಸಾಗರ ತಾಲ್ಲೂಕಿನ ವಿಶ್ವ ವಿಖ್ಯಾತ ಜೋಗ ಜಲಪಾತ ಪ್ರವಾಸಿಗರಿಗೆ ಪುನಃ ಕಾಣಿಸಿಕೊಳ್ಳಲು ಸಿದ್ಧವಾಗಿದೆ. ಜೋಗ ಪ್ರವೇಶ ದ್ವಾರದ ಅಭಿವೃದ್ಧಿ ಕಾಮಗಾರಿಯು ನಡೆಯುತ್ತಿರುವ ಹಿನ್ನೆಲೆಯಲ್ಲಿ ಏಪ್ರಿಲ್ 30ರವರೆಗೆ ಸಾರ್ವಜನಿಕರಿಗೆ ಹಾಗೂ ಪ್ರವಾಸಿಗರಿಗೆ ಪ್ರವೇಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿತ್ತು.
ಈ ಕುರಿತು ಜಿಲ್ಲಾಧಿಕಾರಿ ಹಾಗೂ ಜೋಗ ನಿರ್ವಹಣಾ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಮೇ 01 ರಿಂದ ಜೋಗ ಜಲಪಾತ ವೀಕ್ಷಣೆಗೆ ಸಾರ್ವಜನಿಕರಿಗೆ ಪ್ರವೇಶ ಅವಕಾಶ ನೀಡಲಾಗುತ್ತಿದೆ ಎಂದು ತಿಳಿಸಲಾಗಿದೆ.
ಜೋಗ ಜಲಪಾತವು ನೈಸರ್ಗಿಕ ಸೌಂದರ್ಯ ಮತ್ತು ಪ್ರವಾಹ ಕಾಲದಲ್ಲಿ ತನ್ನ ಅದ್ಭುತ ಜಲಧಾರೆಗಳಿಂದ ಪ್ರವಾಸಿಗರನ್ನು ಆಕರ್ಷಿಸುವ ಪ್ರಮುಖ ಸ್ಥಳವಾಗಿದೆ. ಈ ಪ್ರವೇಶ ಮರು ಆರಂಭದಿಂದ ಸ್ಥಳೀಯ ವ್ಯಾಪಾರ, ಪ್ರವಾಸೋದ್ಯಮಕ್ಕೂ ಜೀವಸಂಚಾರ ಸಿಗಲಿದೆ ಎಂದು ನಿರೀಕ್ಷಿಸಲಾಗಿದೆ.
ಪ್ರವಾಸಿಗರಿಗೆ ಸೂಚನೆ:
-
ಜೋಗ ವೀಕ್ಷಣೆಗೆ ಭೇಟಿ ನೀಡುವವರು ಸ್ವಚ್ಛತೆ ಮತ್ತು ಸುರಕ್ಷತೆಗೆ ಪ್ರಾಮುಖ್ಯತೆ ನೀಡಬೇಕು.
-
ಅಭಿವೃದ್ಧಿ ಕಾಮಗಾರಿ ಇನ್ನೂ ಕೆಲವೊಂದಿಷ್ಟು ಭಾಗಗಳಲ್ಲಿ ನಡೆಯುತ್ತಿರುವುದರಿಂದ ನಿರ್ದಿಷ್ಟ ಮಾರ್ಗಗಳಲ್ಲಿಯೇ ಚಲನೆ ಇರಲಿದೆ.
-
ಪರಿಸರದ ಸಂರಕ್ಷಣೆಗೆ ಸಹಕರಿಸಿ, ಪ್ಲಾಸ್ಟಿಕ್ ಬಳಕೆ ತಪ್ಪಿಸಿ.
ಹೆಚ್ಚಿನ ಪ್ರವಾಸಿಗರ ಆಗಮನದೊಂದಿಗೆ ಜೋಗ ಜಲಪಾತ ಮತ್ತೊಮ್ಮೆ ತನ್ನ ಪ್ರವಾಸೋದ್ಯಮದ ವೈಭವವನ್ನು ಪಡೆದುಕೊಳ್ಳಲಿರುವ ನಿರೀಕ್ಷೆ ಇದೆ.
ವರದಿ: ಡಿ.ಪಿ ಅರವಿಂದ್

