ವಿಶ್ವ ಬೊಜ್ಜು ನಿವಾರಣಾ ದಿನಾಚರಣೆಯ ಅಂಗವಾಗಿ ಶಿವಮೊಗ್ಗದಲ್ಲಿ ಸೈಕಲ್ ಜಾಥಾ
ಶಿವಮೊಗ್ಗ: ವಿಶ್ವ ಬೊಜ್ಜು ನಿವಾರಣಾ ದಿನಾಚರಣೆಯ ಅಂಗವಾಗಿ ಭಾರತೀಯ ವೈದ್ಯಕೀಯ ಸಂಘ (IMA) ಮತ್ತು ಭಾರತೀಯ ಮಕ್ಕಳ ವೈದ್ಯರ ಸಂಘ (IAP) ಶಿವಮೊಗ್ಗ ಶಾಖೆಯ ಸಂಯುಕ್ತ ಆಶ್ರಯದಲ್ಲಿ ಸೈಕಲ್ ಜಾಥಾ ಹಮ್ಮಿಕೊಳ್ಳಲಾಗಿತ್ತು. ಈ ಜಾಥಾ ಮೂಲಕ ಜನಸಾಮಾನ್ಯರಲ್ಲಿ ಬೊಜ್ಜಿನಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ ನಾಗರಾಜ ನಾಯ್ಕ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಸಮುದಾಯದಲ್ಲಿ ಆರೋಗ್ಯಕರ ಜೀವನಶೈಲಿಯ ಪ್ರಾಮುಖ್ಯತೆಯನ್ನು ಪ್ರಸ್ತಾಪಿಸಿದರು. ಅವರು ಮಾತನಾಡಿ, "ಬೊಜ್ಜು ಜಾಗತಿಕ ಸಮಸ್ಯೆಯಾಗಿದೆ. ಇದು ಹಲವಾರು ಜೀವಘಾತಕ ಕಾಯಿಲೆಗಳಿಗೆ ದಾರಿ ಮಾಡಿಕೊಡುತ್ತದೆ. ಸರಿಯಾದ ವ್ಯಾಯಾಮ ಮತ್ತು ಆಹಾರ ನಿಯಂತ್ರಣದ ಮೂಲಕ ಅದನ್ನು ತಡೆಗಟ್ಟಬಹುದು" ಎಂದು ತಿಳಿಸಿದರು.
ಜಾಥಾ ಭಾರತೀಯ ವೈದ್ಯಕೀಯ ಸಂಘದ ಆವರಣದಿಂದ ಪ್ರಾರಂಭವಾಗಿ ಕುವೆಂಪು ರಸ್ತೆ, ಎಪಿಎಂಸಿ ಹಂತವಾಗಿ ಫ್ರೀಡಂ ಪಾರ್ಕ್ ತಲುಪಿತು. ಜಾಥಾದಲ್ಲಿ ಪಾಲ್ಗೊಂಡ ವೈದ್ಯರು ಹಾಗೂ ಸೈಕಲ್ ಸವಾರರು "ಸೈಕಲ್ ಬಳಸಿ, ಬೊಜ್ಜನ್ನು ಕರಗಿಸಿ", "ಬೊಜ್ಜನ್ನು ಕರಗಿಸಿ, ಕಾಯಿಲೆಗಳಿಂದ ದೂರವಿರಿ" ಎಂಬ ಘೋಷಣೆಗಳನ್ನು ಕೂಗುತ್ತಾ ಸಾರ್ವಜನಿಕರಲ್ಲಿ ಆರೋಗ್ಯ ಪ್ರಜ್ಞೆ ಮೂಡಿಸಿದರು.
ಜಾಥಾದ ವೇಳೆ ವೈದ್ಯರು ಬೊಜ್ಜಿನಿಂದ ಉಂಟಾಗಬಹುದಾದ ಹೃದ್ರೋಗ, ಹೈಪರ್ಟೆನ್ಷನ್, ಡಯಾಬಿಟಿಸ್ ಮತ್ತಿತರ ಕಾಯಿಲೆಗಳ ಬಗ್ಗೆ ಮಾಹಿತಿ ನೀಡಿದರು. ಸದೃಢ ಆರೋಗ್ಯ ಉಳಿಸಿಕೊಳ್ಳಲು ಪ್ರತಿದಿನದ ವ್ಯಾಯಾಮ ಮತ್ತು ಸಮತೋಲನ ಆಹಾರದ ಅವಶ್ಯಕತೆ ಕುರಿತು ಅರಿವು ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ ಶ್ರೀಧರ ಎಸ್, ಕಾರ್ಯದರ್ಶಿ ಡಾ ವಿನಯ ಶ್ರೀನಿವಾಸ್, ಭಾರತೀಯ ಮಕ್ಕಳ ವೈದ್ಯರ ಸಂಘದ ಅಧ್ಯಕ್ಷ ಡಾ ಯತೀಶ್, ಕಾರ್ಯದರ್ಶಿ ಡಾ ರಾಜಾರಾಮ್ ಯು ಹೆಚ್, ಖಜಾಂಚಿ ಡಾ ವಿನೋದ್, ಡಾ ಶ್ರೀಕಾಂತ್ ಹೆಗಡೆ, ಡಾ ರವೀಶ್ ಕೆ ಆರ್, ಡಾ ಶಾಂತಲಾ, ಡಾ ವಿನಯ್ ಪಾಟೀಲ್, ಡಾ ಅರುಣ್ ಎಂ ಎಸ್, ಡಾ ಚೇತನ್ ಸಾಗರ್, ಶ್ರೀ ರಾಜೇಂದ್ರ ಪ್ರಸಾದ್ ಜವಳಿ, ಕಾಂಗ್ರೆಸ್ ಮುಖಂಡ ರಂಗನಾಥ್ ಮತ್ತಿತರರು ಭಾಗವಹಿಸಿದರು.
ಜಾಥಾ ಸಮಾರೋಪದಲ್ಲಿ ಡಾ ಶ್ರೀಧರ ಎಸ್ ಅವರು ಮಾತನಾಡಿ, "ಬೊಜ್ಜು ತಡೆಯುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಪ್ರತಿಯೊಬ್ಬರು ದಿನನಿತ್ಯ ವ್ಯಾಯಾಮ ಮತ್ತು ಆರೋಗ್ಯಕರ ಆಹಾರ ಕ್ರಮ ಪಾಲಿಸಬೇಕು" ಎಂದು ಹೇಳಿದರು.
ಈ ಜಾಥಾದಲ್ಲಿ ಪಾಲ್ಗೊಂಡ ಎಲ್ಲ ವೈದ್ಯರುಗಳಿಗೆ ಅಭಿನಂದನೆ ಸಲ್ಲಿಸಲಾಯಿತು.
ವರದಿ: ಡಿ.ಪಿ.ಅರವಿಂದ್
