ವೃದ್ದ ಅತ್ತೆಮಾವನ ಮೇಲೆ ವೈದ್ಯೆ ಸೊಸೆ ಹಾಗೂ ಮಕ್ಕಳಿಂದಹಲ್ಲೆ ಆರೋಪ
ಬೆಂಗಳೂರು, ಮಾ.14: ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದ ಶೋಚನೀಯ ಘಟನೆಗೆ ಸಂಬಂಧಿಸಿದಂತೆ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯೆ ಪ್ರಿಯದರ್ಶಿನಿ ಅವರ ವಿರುದ್ಧ ವೃದ್ಧ ಅತ್ತೆ-ಮಾವನ ಮೇಲೆ ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ವಿಚ್ಚೇದನ ಪ್ರಕ್ರಿಯೆ ಮತ್ತು ಹಳೆಯ ಕಿರುಕುಳದ ಆರೋಪ: ಪ್ರಿಯದರ್ಶಿನಿ ಅವರು 2007ರಲ್ಲಿ ನವೀನ್ ಕುಮಾರ್ ಎಂಬುವರನ್ನು ವಿವಾಹವಾಗಿದ್ದರು. ಈ ದಂಪತಿ ಈಗ ವಿಚ್ಛೇದನದ ಪ್ರಕ್ರಿಯೆಯಲ್ಲಿ ಇದ್ದು, ಅವರ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ಕಳೆದ ಹತ್ತು ವರ್ಷಗಳಿಂದ ಪ್ರಿಯದರ್ಶಿನಿ ತಮ್ಮ ಅತ್ತೆಮಾವನಿಗೆ ಕಿರುಕುಳ ನೀಡುತ್ತಿದ್ದರೆಂಬ ಆರೋಪವೂ ಹೊರಬಿದ್ದಿದೆ. ಕಿರುಕುಳದಿಂದಾಗಿ ವೃದ್ಧ ದಂಪತಿ ತಮ್ಮ ಸ್ವಂತ ಮನೆ ಬಿಟ್ಟು ಬಾಡಿಗೆ ಮನೆಗೆ ಸ್ಥಳಾಂತರವಾಗಿದ್ದರು.
Video ನೋಡಿ
ಕೋರ್ಟ್ ಆದೇಶ ಉಲ್ಲಂಘನೆ ಮತ್ತು ಹಲ್ಲೆ ಆರೋಪ: ವಿಚ್ಚೇದನ ಪ್ರಕ್ರಿಯೆ ನಡೆಯುತ್ತಿರುವ ಕಾರಣ, ನ್ಯಾಯಾಲಯವು ವೃದ್ಧ ದಂಪತಿಯನ್ನು ಭೇಟಿಯಾಗುವ ಹಕ್ಕು ಪ್ರಿಯದರ್ಶಿನಿಗೆ ಇಲ್ಲ ಎಂಬ ತೀರ್ಪು ನೀಡಿತ್ತು. ಆದಾಗ್ಯೂ, ಮಾರ್ಚ್ 10 ರಂದು ಪ್ರಿಯದರ್ಶಿನಿ ತಮ್ಮ ಮಕ್ಕಳೊಂದಿಗೆ ವೃದ್ಧ ದಂಪತಿಯ ಮನೆಗೆ ಭೇಟಿ ನೀಡಿ ಅವರ ಮೇಲೆ ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿದೆ. ಈ ಘಟನೆಗೆ ಸಂಬಂಧಿಸಿದ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಜನರಲ್ಲಿ ಆಕ್ರೋಶ ಮೂಡಿಸಿದೆ.
ಪೊಲೀಸ್ ಕ್ರಮ: ಘಟನೆ ಸಂಬಂಧ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಿಯದರ್ಶಿನಿಗೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ತನಿಖೆ ನಡೆಯುತ್ತಿದೆ.
ವರದಿ: ಡಿ.ಪಿ. ಅರವಿಂದ್

