ಜೋಗ ಜಲಪಾತ ಪ್ರವಾಸಿಗರಿಗೆ ಏ.30ರವರೆಗೆ ಪ್ರವೇಶ ನಿಷೇಧ
ಶಿವಮೊಗ್ಗ, ಮಾ.14: ಜಿಲ್ಲೆಯ ಪ್ರಸಿದ್ಧ ಜೋಗ ಜಲಪಾತದಲ್ಲಿ ಪ್ರವಾಸಿಗರಿಗೆ ಉತ್ತಮ ಮೂಲಭೂತ ಸೌಲಭ್ಯ ಒದಗಿಸಲು ವಿವಿಧ ಅಭಿವೃದ್ಧಿ ಕಾಮಗಾರಿಗಳು ಜಾರಿಗೆ ತರಲಾಗುತ್ತಿವೆ. ಈ ಕಾಮಗಾರಿಗಳ ಪೈಕಿ ಪ್ರಮುಖವಾದ ಜೋಗ ಜಲಪಾತದ ಪ್ರವೇಶದ್ವಾರದ ಪುನರ್ನಿಮಾಣ ಕಾರ್ಯವು ಪ್ರಸ್ತುತ ನಡೆಯುತ್ತಿದೆ. ಈ ಕಾರಣದಿಂದಾಗಿ ಏಪ್ರಿಲ್ 30ರವರೆಗೆ ಸಾರ್ವಜನಿಕರು ಹಾಗೂ ಪ್ರವಾಸಿಗರಿಗೆ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಪ್ರಸಕ್ತ ಕಾಮಗಾರಿಯು ನಿರ್ದಿಷ್ಟ ಅವಧಿಯೊಳಗೆ ಪೂರ್ಣಗೊಳ್ಳಬೇಕಿರುವುದರಿಂದ, ಸಾರ್ವಜನಿಕರು ಹಾಗೂ ಪ್ರವಾಸಿಗರಿಗೆ ತೊಂದರೆ ಆಗಬಾರದೆಂಬ ದೃಷ್ಟಿಯಿಂದ ಮೊದಲಿನಿಂದಲೇ ನಿರ್ಬಂಧ ಹೇರಲಾಗಿತ್ತು. ಈ ಹಿನ್ನೆಲೆಯಲ್ಲಿ ಜನವರಿ 1ರಿಂದ ಮಾರ್ಚ್ 15ರವರೆಗೆ ಪ್ರವೇಶವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಆದರೆ, ಕಾಮಗಾರಿ ಪೂರ್ಣಗೊಳ್ಳದ ಕಾರಣ ಈ ನಿರ್ಬಂಧವನ್ನು ಮತ್ತಷ್ಟು ವಿಸ್ತರಿಸಿ ಏಪ್ರಿಲ್ 30ರವರೆಗೆ ಮುಂದುವರಿಸಲಾಗಿದೆ.
ಪ್ರವಾಸಿಗರ ಸಹಕಾರ ಅಗತ್ಯ: ಜೋಗ ಜಲಪಾತಕ್ಕೆ ಭಾರಿ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುವ ಕಾರಣ, ಕಾಮಗಾರಿಯ ಪ್ರಗತಿಗೆ ಯಾವುದೇ ಅಡಚಣೆ ಉಂಟಾಗದಂತೆ ಪ್ರವಾಸಿಗರು ಹಾಗೂ ಸಾರ್ವಜನಿಕರು ಸಹಕರಿಸಬೇಕೆಂದು ಅಧಿಕಾರಿಗಳು ಮನವಿ ಮಾಡಿದ್ದಾರೆ. ಜೋಗ ನಿರ್ವಹಣಾ ಪ್ರಾಧಿಕಾರದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ಗುರುದತ್ತ ಹೆಗಡೆ ಅವರು, ಸಾರ್ವಜನಿಕರು ಹಾಗೂ ಪ್ರವಾಸಿಗರು ಈ ನಿಯಮಗಳನ್ನು ಪಾಲಿಸಿ ಜೋಗ ಜಲಪಾತದ ಸುಗಮ ನಿರ್ವಹಣೆಗೆ ನೆರವಾಗಬೇಕೆಂದು ತಿಳಿಸಿದ್ದಾರೆ.
ಪ್ರವಾಸಿಗರು ಗಮನಿಸಬೇಕಾದ ವಿಷಯಗಳು:
- ಏಪ್ರಿಲ್ 30ರವರೆಗೆ ಜೋಗ ಜಲಪಾತ ಪ್ರವೇಶ ಸಂಪೂರ್ಣವಾಗಿ ನಿಷೇಧಿಸಲಾಗಿದೆ.
- ಪ್ರವಾಸಿಗರು ಅನಗತ್ಯವಾಗಿ ಪ್ರಯಾಣದ ಯೋಜನೆ ಮಾಡದೇ ನಿರ್ಧಿಷ್ಟ ಸಮಯದ ನಂತರ ಮಾತ್ರ ಭೇಟಿ ನೀಡುವುದು ಒಳಿತು.
- ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ಆಡಳಿತ ಮತ್ತು ಜೋಗ ನಿರ್ವಹಣಾ ಪ್ರಾಧಿಕಾರದ ಅಧಿಕೃತ ಮಾಹಿತಿಯನ್ನು ಅನುಸರಿಸಬಹುದು.
- ಸಂಪರ್ಕಕ್ಕಾಗಿ 08182-251444 ದೂರವಾಣಿಗೆ ಕರೆ ಮಾಡಬಹುದು.
ವರದಿ: ಡಿ.ಪಿ. ಅರವಿಂದ್

