ಕೋಲಾರ ಪೋಲೀಸರ ಬೃಹತ್ ಕಾರ್ಯಾಚರಣೆ: ₹50 ಲಕ್ಷ ಮೌಲ್ಯದ MDMA ಡ್ರಗ್ ಜಪ್ತಿ, ಆರೋಪಿ ಬಂಧನ
ಕೋಲಾರ, ಮಾರ್ಚ್ 15: ಜಿಲ್ಲೆಯ ಅಪರಾಧ ವಿಭಾಗದ ಪೋಲೀಸರು ಬೃಹತ್ ಕಾರ್ಯಾಚರಣೆ ನಡೆಸಿ ಸುಮಾರು ₹50 ಲಕ್ಷ ಮೌಲ್ಯದ 806 ಗ್ರಾಂ MDMA ಡ್ರಗ್ ಹಾಗೂ ಒಂದು ದ್ವಿಚಕ್ರ ವಾಹನವನ್ನು ಜಪ್ತಿ ಮಾಡಿದ್ದು, ಆರೋಪಿ ಸೈಯದ್ ಫುರ್ಖಾನ್ ಎಂಬವನನ್ನು ಬಂಧಿಸಿದ್ದಾರೆ. ಈ ಕಾರ್ಯಾಚರಣೆ ಮಡೇರಹಳ್ಳಿಯ ರಾಷ್ಟ್ರೀಯ ಹೆದ್ದಾರಿ ಸಮೀಪ ನಡೆಯಿತು.
ಅಂತರಾಷ್ಟ್ರೀಯ ಮಾದಕ ಜಾಲದ ಭಾಗವಾಗಿ ಆರೋಪಿಯ ತಂತ್ರ
ಆರೋಪಿ ಸೈಯದ್ ಫುರ್ಖಾನ್, ಬೆಂಗಳೂರು ಸೂಲದೇವನಹಳ್ಳಿಯ ನಿವಾಸಿ, ನೈಜೀರಿಯಾ ಹಾಗೂ ಇತರ ದೇಶಗಳಿಂದ ಕಡಿಮೆ ಬೆಲೆಗೆ MDMA ಡ್ರಗ್ ತರಿಸಿಕೊಂಡು, ಗ್ರಾಂ ಲೆಕ್ಕದಲ್ಲಿ ಹೆಚ್ಚಿನ ಬೆಲೆಗೆ ಕಾಲೇಜು ವಿದ್ಯಾರ್ಥಿಗಳು ಹಾಗೂ ಶ್ರೀಮಂತ ಕುಟುಂಬದವರಿಗೆ ಮಾರಾಟ ಮಾಡುತ್ತಿದ್ದ.
ಈ ಮಾದಕ ವಸ್ತುಗಳು ಮುಖ್ಯವಾಗಿ ರೇವ್ ಪಾರ್ಟಿಗಳು, ಕ್ಲಬ್, ರೆಸಾರ್ಟ್ ಹಾಗೂ ಹೈಸೊಸೈಟಿ ಸಮಾರಂಭಗಳಲ್ಲಿ ಮಾರಾಟವಾಗುತ್ತಿದ್ದವು ಎಂದು ಪೋಲೀಸರು ತಿಳಿಸಿದ್ದಾರೆ.
ಜಿಲ್ಲಾ ಪೋಲೀಸ್ ಇತಿಹಾಸದಲ್ಲಿ ಮೊಟ್ಟಮೊದಲ MDMA ಜಪ್ತಿ
ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ನಿಖಿಲ್, ಕೋಲಾರ ಜಿಲ್ಲೆಯಲ್ಲಿ ಇದೇ ಮೊದಲು MDMA ಮಾದಕ ಪದಾರ್ಥವನ್ನು ಜಪ್ತಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಈ ಬೃಹತ್ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರವಹಿಸಿದ ಪೊಲೀಸ್ ಅಧಿಕಾರಿಗಳು:
➡ ಜಿಲ್ಲಾ ಸೈಬರ್ ಇನ್ಸ್‌ಪೆಕ್ಟರ್ ಜಗದೀಶ್
➡ ಪೋಲೀಸ್ ಸಿಬ್ಬಂದಿಗಳಾದ ಅಂಬರೀಶ್, ಶಿವಾನಂದ, ಆನಂದ ಕುಮಾರ್ ಮತ್ತು ಅರುಣ್ ಕುಮಾರ್
ಪೋಲೀಸ್ ಇಲಾಖೆ ಈ ಕಾರ್ಯಾಚರಣೆಯ ಯಶಸ್ಸನ್ನು ಶ್ಲಾಘಿಸಿದ್ದು, ಜಿಲ್ಲೆಯಲ್ಲಿ ಮಾದಕ ವ್ಯಸನ ತಡೆಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದೆ.
ವರದಿ: ಡಿ.ಪಿ. ಅರವಿಂದ್

