ಬೆಂಗಳೂರು ನಗರ ಬಿಜೆಪಿ ಶಾಸಕರು ಹಾಗೂ ಸಂಸದರ ನಿಯೋಗದಿಂದ ಮುಖ್ಯಮಂತ್ರಿಗಳ ಭೇಟಿ

 ಶಾಸಕರ ಕ್ಷೇತ್ರಾಭಿವೃದ್ಧಿ ಹಾಗೂ ಬೆಂಗಳೂರು ಅಭಿವೃದ್ಧಿಗೆ ಬಜೆಟ್ನಲ್ಲಿ 100 ಕೋಟಿ ಅನುದಾನಕ್ಕೆ ಮನವಿ ಸಲ್ಲಿಕೆ



ಬೆಂಗಳೂರು ನಗರದ ಬಿಜೆಪಿ ಶಾಸಕರು ಹಾಗೂ ಸಂಸದರ ನಿಯೋಗ ಇಂದು ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಶಾಸಕರು ತಮ್ಮ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ಒದಗಿಸಲು ಬಜೆಟ್‌ನಲ್ಲಿ ನಿಗದಿ ಮಾಡುವಂತೆ ಮನವಿ ಸಲ್ಲಿಸಿದರು.

ಈ ಬಾರಿಯ ಬಜೆಟ್‌ನಲ್ಲಿ ಬೆಂಗಳೂರು ನಗರಾಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ನಿಯೋಗ ಒತ್ತಾಯಿಸಿತು. ಬೆಂಗಳೂರು ನಗರವು ರಾಜ್ಯದ ಒಟ್ಟಾರೆ ಆದಾಯಕ್ಕೆ ಪ್ರಮುಖ ಕೊಡುಗೆ ನೀಡುತ್ತಿರುವುದರಿಂದ, ನಗರಾಭಿವೃದ್ಧಿಗೆ ಹೆಚ್ಚಿನ ಅನುದಾನ ಮೀಸಲು ಮಾಡಬೇಕೆಂದು ಮನವಿ ಮಾಡಲಾಯಿತು.



ನಿಯೋಗವು ರಸ್ತೆ, ಒಳಚರಂಡಿ ವ್ಯವಸ್ಥೆ, ಕುಡಿಯುವ ನೀರು ಪೂರೈಕೆ, ವಿದ್ಯುತ್ ಸಂಪರ್ಕ, ಉದ್ಯಾನಗಳ ಅಭಿವೃದ್ಧಿ ಸೇರಿದಂತೆ ಮೂಲಭೂತ ಸೌಕರ್ಯಗಳಿಗೆ ಅನುದಾನ ಒದಗಿಸುವಂತೆ ಒತ್ತಾಯಿಸಿತು. ಜೊತೆಗೆ, ನಗರದಲ್ಲಿ ಸಂಚಾರ ದಟ್ಟಣೆ ನಿವಾರಣೆ ಹಾಗೂ ಸ್ಮಾರ್ಟ್ ಸಿಟಿ ಯೋಜನೆಗಳ ಪ್ರಗತಿಗೆ ಹೆಚ್ಚಿನ ಹಣಕಾಸು ಒದಗಿಸುವಂತೆ ಮನವಿ ಮಾಡಲಾಯಿತು.

ಮೆಟ್ರೋ ದರ ಇಳಿಕೆಯ ಸಂಬಂಧ, ಮುಖ್ಯಮಂತ್ರಿಗಳು ಪ್ರತಿಕ್ರಿಯಿಸಿ, ಈಗಾಗಲೇ ಅವೈಜ್ಞಾನಿಕ ದರ ಏರಿಕೆಯನ್ನು ಹಿಂತೆಗೆದುಕೊಳ್ಳಲು ಕೇಂದ್ರ ಸರ್ಕಾರ ಹಾಗೂ ಮೆಟ್ರೋ ಅಧಿಕಾರಿಗಳಿಗೆ ಪತ್ರ ಬರೆದಿರುವುದಾಗಿ ತಿಳಿಸಿದರು. ಸಾರ್ವಜನಿಕರಿಗೆ ಹೊರೆಯಾಗದಂತೆ ಮೆಟ್ರೋ ದರ ಇಳಿಸಲು ಅಧಿಕಾರಿಗಳೊಂದಿಗೆ ಚರ್ಚಿಸಿ ನಿಯಮಾನುಸಾರ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಈ ಸಂದರ್ಭ, ಶಾಶ್ವತ ಸೌಕರ್ಯಗಳ ಅಭಿವೃದ್ಧಿ, ನಗರದ ನೈರ್ಮಲ್ಯ ವ್ಯವಸ್ಥೆ ಸುಧಾರಣೆ, ಭದ್ರತಾ ವ್ಯವಸ್ಥೆ ಮತ್ತೊಮ್ಮೆ ಪುನರ್ ಪರಿಶೀಲನೆಗೆ ಸಂಬಂಧಿಸಿದಂತೆ ಸೂಕ್ತ ಅನುದಾನ ಒದಗಿಸಲು ಸೂಚನೆ ನೀಡುವಂತೆ ಮುಖ್ಯಮಂತ್ರಿಯನ್ನು ಮನವಿ ಮಾಡಲಾಯಿತು.

ನಿಯೋಗದಲ್ಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ರಾಜ್ಯಾಧ್ಯಕ್ಷ ವಿಜಯೇಂದ್ರ, ಸಂಸದ ತೇಜಸ್ವಿ ಸೂರ್ಯ, ಸಂಸದ ಪಿ.ಸಿ. ಮೋಹನ್, ಶಾಸಕರು ಸತ್ಯನಾರಾಯಣ, ಉದಯ್ ಗರುಡಾಚಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ವರದಿ: ಡಿ.ಪಿ. ಅರವಿಂದ್

Post a Comment

Previous Post Next Post